ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸೌಧದ ಮುಂದೆ ತರಾತುರಿಯ ಆರ್ ಸಿಬಿ ತಂಡದ ಸಂಭ್ರಮಾಚರಣೆಯ ಹಿಂದೆ ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಪಾತ್ರವಿತ್ತು ಎನ್ನುವ ಆರೋಪ ಕೇಳಿಬಂದ ಬೆನ್ನಲ್ಲೇ ಆ ಹುದ್ದೆಯಿಂದ ಗೋವಿಂದರಾಜು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಿಧಾನ ಪರಿಷತ್ ಸದಸ್ಯ ಮತ್ತು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜು ಅವರು ತರಾತುರಿಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಕೆಲ ಸಚಿವರು ಗರಂ ಆಗಿದ್ದಾರೆ.
ಈ ಬಗ್ಗೆ ಸಂಪುಟ ಸಭೆಯಲ್ಲಿ ಗೋವಿಂದರಾಜು ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಎನ್ನಲಾಗಿದೆ.
ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತಕ್ಕೆ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ.
ಗುಪ್ತಚರ ಇಲಾಖೆಯ ಪ್ರಭಾರಿ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೇಮಂತ್ ನಿಂಬಾಳ್ಕರ್ ಅವರ ಸ್ಥಾನಕ್ಕೆ ಎಸ್ .ರವಿ ಅವರನ್ನು ವರ್ಗಾವಣೆ ಮಾಡಿದೆ.
ಗೃಹ ಇಲಾಖೆಯ ಕಾರ್ಯದರ್ಶಿಯಾಗಿ ಕೆ.ವಿ.ಶರತ್ ಚಂದ್ರ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಇವರಿಗೆ ಹೆಚ್ಚುವರಿಯಾಗಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಮುಂದುವರೆಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.