ಲಕ್ಷಾಂತರ ಕಾರ್ಮಿಕರ ನಕಲಿ ಕಾರ್ಡ್ ರದ್ದುಗೊಳಿಸಿದ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್​ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರದ ಆಹಾರ ಇಲಾಖೆ ಮುನ್ನುಡಿ ಬರೆಯುತ್ತಿದೆ. ಇದರ ಬೆನ್ನಲ್ಲೇ ಲಕ್ಷಾಂತರ ಅನರ್ಹ ಕಾರ್ಮಿಕರ ಕಾರ್ಡ್ ಗಳನ್ನು ರದ್ದುಪಡಿಸಲು ಕಾರ್ಮಿಕ ಇಲಾಖೆ ತಯಾರಿ ನಡೆಸಿದೆ.

ಬಿಪಿಎಲ್-ಕಾರ್ಮಿಕ ಕಾರ್ಡ್ ಗಳ ರದ್ದುಗೊಳಿಸುವ ವಿಚಾರವನ್ನಿಟ್ಟುಕೊಂಡು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ರಾಜ್ಯದಲ್ಲಿ 2,46,951 ನಕಲಿ ಕಾರ್ಮಿಕ ಕಾರ್ಡಗಳಿವೆ ಎನ್ನಲಾಗಿದ್ದು ಈ ಎಲ್ಲ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ.  

ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕಲ ಕಲ್ಯಾಣ ಮಂಡಳಿಯಲ್ಲಿ 38 ಲಕ್ಷದ 42 ಸಾವಿರ ಕಾರ್ಮಿಕರು ನೋಂದಣಿ ಮಾಡಿ ಕಾರ್ಮಿಕರ ಕಾರ್ಡ್​ ಪಡೆದುಕೊಂಡಿದ್ದಾರೆ. ಈ ಪೈಕಿ 2,46,951 ಕಾರ್ಡ್​ ನಕಲಿ ಎಂದು ಗೊತ್ತಾಗಿ ರದ್ದು ಮಾಡಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಕಟ್ಟಡ ಕಾರ್ಮಿಕ ಕಾರ್ಡ್​ ರದ್ದಾಗಿರುವುದು ಹಾವೇರಿ ಜಿಲ್ಲೆಯಲ್ಲಿ 1,69,180 ಕಾರ್ಡ್ ಗಳು ಅಮಾನತು ಮಾಡಲಾಗಿದೆ.

ಸರ್ಕಾರ ನೀಡುತ್ತಿದ್ದ ಕಾರ್ಮಿಕ ಕಾರ್ಡ್​ನಿಂದ ಮಕ್ಕಳ ಶಿಕ್ಷಣ, ಮದುವೆ, ಮರಣ, ಹೆರಿಗೆ, ಅಪಘಾತ ಸಂದರ್ಭದಲ್ಲಿ ದೊಡ್ಡ ಮೊತ್ತದ ಆರ್ಥಿಕ ನೆರವು ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ನಕಲಿ ಕಾರ್ಮಿಕರ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ. ಆನ್ ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯುವ ಅವಕಾಶ ಇದ್ದು, ಲಕ್ಷಾಂತರ ಜನ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಕಾರ್ಮಿಕ ಇಲಾಖೆಗೆ ದಾಖಲೆ ಪರಿಶೀಲನೆ ಕಷ್ಟವಾಗುತ್ತಿದೆ.

ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್ ಸಂಯೋಜಿಸಿ ಆಧಾರ್ ಕಾರ್ಡ್ ಆಧಾರಿತ ನೋಂದಣಿ ಮಾಡುವ ಮೂಲಕ ಅರ್ಹರಿಗೆ ಮಾತ್ರ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಇದರೊಂದಿಗೆ ನಕಲಿ ಕಾರ್ಡ್​ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿದೆ ಎನ್ನಲಾಗಿದೆ.

ನಕಲಿ ಕಾರ್ಡ್ ತಡೆಯುವ ಉದ್ದೇಶದಿಂದ ಸರ್ಕಾರವೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಕ್ಕೆ ಮೊಬೈಲ್ ವ್ಯಾನ್ ತೆರಳಿ ಖುದ್ದು ಕಾರ್ಮಿಕರ ನೋಂದಣಿ ಮಾಡಲು ಯೋಜನೆ ಮಾಡಿದೆ. ಈ ಮೂಲಕ ಸ್ಥಳದಲ್ಲೇ ಇ-ಕಾರ್ಡ್ ಕೊಡುವ ವ್ಯವಸ್ಥೆಯನ್ನೂ ಜಾರಿಗೆ ತರಲು ತಯಾರಿ ನಡೆಸಿದೆ.

ಕಾರ್ಮಿಕ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಕೇಂದ್ರ ಸ್ಥಾಪಿಸಿ ನೈಜ ಕಟ್ಟಡ ಕಾರ್ಮಿಕರಿಗೆ ಸವಲತ್ತು ದೊರಕಿಸಿಕೊಡುವುದರ ಜೊತೆಗೆ ಬೋಗಸ್ ಕಾರ್ಡ್ ಪತ್ತೆಗೂ ಹೆಜ್ಜೆ ಇಟ್ಟಿದೆ. ವಲಸಿಗರಾಗಿರುವುದರಿಂದ ಕೆಲಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳುತ್ತಾರೆ.

ಹೋದಲ್ಲೆಲ್ಲ ನೋಂದಣಿ ಮಾಡುವ ಬದಲು ಪೋರ್ಟ್ ಮಾಡಿಕೊಳ್ಳಲು ಅವಕಾಶ ನೀಡಲು ಚಿಂತನೆ ನಡೆಸಿದೆ. ಒಂದು ಬಾರಿ ಪಡೆದ ಕಾರ್ಡ್ ಎಲ್ಲೇ ಕೆಲಸ ಮಾಡಿದರೂ ಅದರಲ್ಲಿ ಮಾಹಿತಿ ಅಡಕವಾಗುವ ಏರ್ಪಾಡು ಮಾಡಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಸ್ಪಷ್ಟಪಡಿಸಿದೆ.

ನಕಲಿ ಕಾರ್ಡ್ ಹೆಚ್ಚಲು ಕಾರಣ-
ಕಾರ್ಮಿಕರ ನಕಲಿ ಕಾರ್ಡ್ ಗಳು ಹೆಚ್ಚಾಗಲು ಹಲವು ಸೌಲಭ್ಯಗಳೇ ಕಾರಣ ಎನ್ನಲಾಗಿದೆ. ಕಾರ್ಮಿಕರ ಕಾರ್ಡ್ ಹೊಂದಿದವರಿಗೆ ವಯೋ ನಿವೃತ್ತಿ, ಪಿಂಚಣಿ
, ಅಂಗವಿಕಲ ಪಿಂಚಣಿ, ಟೂಲ್ ಕಿಟ್, ವಸತಿ ಸೌಲಭ್ಯ, ಹೆರಿಗೆ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ ಸೌಲಭ್ಯ, ಅಪಘಾತ ಪರಿಹಾರ, ಮದುವೆ ಸಹಾಯಧನ, ಅಂತ್ಯಕ್ರಿಯೆ ವೆಚ್ಚ ಸೇರಿದಂತೆ 15ಕ್ಕೂ ಹೆಚ್ಚು ಸೌಲಭ್ಯಗಳಿಗೆ ಆರ್ಥಿಕ ನೆರವು ಸಿಗುತ್ತದೆ ಹಾಗಾಗಿ ನಕಲಿ ಕಾರ್ಮಿಕರ ಕಾರ್ಡ್ ಗಳು ಹೆಚ್ಚಳವಾಗಿವೆ ಎನ್ನಲಾಗಿದೆ.

ಕಾರ್ಮಿಕರ ಕಾರ್ಡ್ ರದ್ದು?
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಕ್ಷಾಂತರ ನಕಲಿ ಕಾರ್ಮಿಕ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಹಾವೇರಿ ಜಿಲ್ಲೆ ಒಂದರಲ್ಲೇ ಅತಿ ಹೆಚ್ಚು 1,69,180 ನಕಲಿ ಕಾರ್ಮಿಕರ ಕಾರ್ಡ್​ಗಳನ್ನು ರದ್ದು ಮಾಡಲಾಗಿದೆ.

ಬಾಗಲಕೋಟೆ- 2039, ಬೆಂಗಳೂರು ಗ್ರಾಮಾಂತರ-402. ಬೆಂಗಳೂರು ನಗರ- 2967, ಬೆಳಗಾವಿ- 1136, ಬಳ್ಳಾರಿ- 1498, ಬೀದ‌ರ್- 25,759, ವಿಜಯಪುರ- 2097, ಚಾಮರಾಜನಗರ- 743, ಚಿಕ್ಕಬಳ್ಳಾಪುರ- 1242, ಚಿಕ್ಕಮಗಳೂರು- 1173, ಚಿತ್ರದುರ್ಗ- 859, ದಕ್ಷಿಣ ಕನ್ನಡ- 1076,

ದಾವಣಗೆರೆ- 3659, ಧಾರವಾಡ- 3503, ಗದಗ- 3051, ಕಲಬುರಗಿ- 2280, ಹಾಸನ-2266, ಕೊಡಗು- 175, ಕೋಲಾರ- 1988, ಕೊಪ್ಪಳ- 2083, ಮಂಡ್ಯ- 396, ಮೈಸೂರು- 1316, ರಾಯಚೂರು- 383, ರಾಮನಗರ-2748, ಶಿವಮೊಗ್ಗ- 6900, ತುಮಕೂರು- 1210, ಉಡುಪಿ- 210, ಉತ್ತರ ಕನ್ನಡ-4155, ಯಾದಗಿರಿ- 457 ನಕಲಿ ಕಾರ್ಮಿಕರ ಕಾರ್ಡ್​ಗಳನ್ನು ರದ್ದು ಮಾಡಲಾಗಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";