ಎಸ್. ಬಿ. ಐ ವಿರುದ್ಧ ಸರ್ಕಾರಿ ನಿವೃತ್ತ ನೌಕರರ ಸಂಘ ಅಸಮಾಧಾನ

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪರಿಷ್ಕರಣೆ ಮಾಡಿ ಕರ್ನಾಟಕ ರಾಜ್ಯ ಸರ್ಕಾರವು ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ಸಹ
  ರಾಜ್ಯದ ಎಸ್.ಬಿ.ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಯಾವೊಬ್ಬ ಪಿಂಚಣಿದಾರರಿಗೂ ಈವರೆಗೆ ಪರಿಷ್ಕೃತ ಪಿಂಚಣಿ ಸೌಲಭ್ಯ ಒದಗಿಸದಿರುವುದಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ನಿವೃತ್ತ ನೌಕರರ ಸಂಘದ ಶಾಖೆಯ  ಸರ್ಕಾರಿ ನಿವೃತ್ತ ನೌಕರರು ಸಭೆ ಸೇರಿ ಒಕ್ಕೊರಲಿನಿಂದ ಅಸಮಾಧಾನದ ಆಕ್ರೋಶವನ್ನು ಹೊರಹಾಕಿದ್ದಾರೆ.

        ಪ್ರಸ್ತುತ ಕಾಲಘಟ್ಟದಲ್ಲಿ ನಿರಂತರವಾಗಿ ಏರುತ್ತಿರುವ ಬೆಲೆಗಳ ತಾಪವನ್ನು ಸಹಿಸಿಕೊಂಡು ಜೀವನ ಸಾಗಿಸುವುದು ದುಸ್ತರವಾಗಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಏಳನೇ ವೇತನ ಆಯೋಗದ ವರದಿಯನ್ನು ಪರಿಷ್ಕರಣೆ ಮಾಡಿ 23-08-2024 ರಲ್ಲಿ  ಆದೇಶಗಳನ್ನು ಹೊರಡಿಸಿದ್ದು ತತ್ಸಂಬಂಧವಾಗಿ ಎಸ್.ಬಿ.ಐ ಬ್ಯಾಂಕ್ ಹೊರತು ಪಡಿಸಿ ಉಳಿದ ಎಲ್ಲಾ ಬ್ಯಾಂಕ್ ಗಳು ನಿವೃತ್ತ ನೌಕರರಿಗೆ ಪರಿಷ್ಕೃತಗೊಳಿಸಿದ ನಿವೃತ್ತಿ ವೇತನವನ್ನು ಅವರವರ ಖಾತೆಗಳಿಗೆ ಜಮೆ ಮಾಡಿ ತಮ್ಮ ತಮ್ಮ ಖಾತೆದಾರರ ಸಂತೋಷಕ್ಕೆ ಕಾರಣವಾಗಿವೆ.

       ಆದರೆ ಮಲತಾಯಿ ಧೋರಣೆಯೋ ಏನೋ ಎಂಬಂತೆ ಎಸ್. ಬಿ.ಐ ಬ್ಯಾಂಕ್ ಮೂಲಕ ನಿವೃತ್ತಿ ವೇತನ ಪಡೆಯುತ್ತಿರುವವರಿಗೆ ಮೂರು ತಿಂಗಳು ಕಳೆದರೂ ಹಳೆಯ ನಿವೃತ್ತಿ ವೇತನ ಮಾತ್ರ ಜಮೆ ಮಾಡಲಾಗುತ್ತಿದೆ.ಈವರೆಗೂ ಪರಿಷ್ಕೃತ ಹೆಚ್ಚುವರಿಯಾದ ನಿವೃತ್ತಿ ವೇತನ ಜಮೆ ಆಗಿರುವುದಿಲ್ಲ. ಸಂಬಂಧಪಟ್ಟವರು ಕೇವಲ ಸಬೂಬು ಹೇಳಿ ಕಾಲ ತಳ್ಳುತ್ತಿದ್ದಾರೆ.

       ನಿವೃತ್ತ ನೌಕರರ ಅಸಮಾಧಾನದ ಕಟ್ಟೆ ಹೊಡೆಯುವ ಮುನ್ನ ಸಂಬಂಧ ಪಟ್ಟ ಬ್ಯಾಂಕ್ ಆಗಲಿ, ಅಥವಾ ಸರ್ಕಾರದ ನಿವೃತ್ತಿ ವೇತನ ಸೌಲಭ್ಯ ಒದಗಿಸುವ ಇಲಾಖೆಯಾಗಲಿ ಎಚ್ಚೆತ್ತು ಕೊಂಡು ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ನಿವೃತ್ತ ನೌಕರರಿಗೆ ನ್ಯಾಯ ಒದಗಿಸಿ ಕೊಡ ಬೇಕೆಂದು ದೊಡ್ಡಬಳ್ಳಾಪುರ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆ ಒಕ್ಕೊರಲಿನಿಂದ ಆಗ್ರಹಿಸುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಮಹಾಲಿಂಗಯ್ಯ ಮನವಿ ಮಾಡಿದ್ದಾರೆ .

      ನಿವೃತ್ತ ನೌಕರರು ವಯಸ್ಸಾಯಿತೆಂದು ಚಿಂತೆ ಮಾಡಿ  ಕೈಕಟ್ಟಿ ಕೂರಬಾರದು.ಸದಾ ಚೈತನ್ಯದ ಚಿಲುಮೆಯಂತೆ ಆಶಾವಾದವನ್ನು ಮೈಗೂಡಿಸಿಕೊಳ್ಳಬೇಕು.ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು.ನಾವೆಂದು ಒಂಟಿ ಅಲ್ಲ, ನಿಮ್ಮೊಂದಿಗೆ ಸಂಘ ಸದಾ ಕ್ರಿಯಾಶೀಲವಾಗಿರುತ್ತದೆಂದು ಪ್ರೇರಣಾತ್ಮಕ ನುಡಿಗಳನ್ನು ಹೇಳಿ ಯಾರೂ ಸಹ ಸ್ವಾರ್ಥಕ್ಕಾಗಿ ಸಂಘಟನೆಗಳನ್ನು ಸಾಯಿಸಬಾರದೆಂದು ಕಿವಿ ಮಾತು ಹೇಳಿದರು.

      ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಪ್ರಭಾಕರ್   ಸಂಘದ ಮಹಿಳಾ ನಿರ್ದೇಶಕಿ ,ರಂಗ ಕಲಾವಿದೆ,ಡಿ.ವಿ.ಪದ್ಮಾವತಮ್ಮ ಅವರಿಗೆ ಕೊಚ್ಚಿನ್ ವಿಶ್ವ ವಿದ್ಯಾಲಯದ ವತಿಯಿಂದ ರಂಗಕಲೆ ಮತ್ತು ಶೈಕ್ಷಣಿಕ ಸೇವೆಯ ಹಿರಿಮೆ ಗರಿಮೆಯನ್ನು ಗೌರವಿಸಿ ನೀಡಿದ ಹಾಗೂ ಗೌರವ ಡಾಕ್ಟರೇಟ್ ಸ್ವೀಕರಿಸಿದ ಸಲುವಾಗಿ ನಿವೃತ್ತ ನೌಕರರ ಸಂಘದ ವತಿಯಿಂದ ಗೌರವಿಸಲಾಯಿತು.

  ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಟಿ.ಮುನಿರಾಜು ಮಾತನಾಡಿ ಸಂಘವನ್ನು ಬಲಪಡಿಸುವ ಕೆಲಸವನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಮಾಡೋಣ, ಸಂಘದ ಚಟುವಟಿಕೆಗಳು ನಿರಂತರವಾಗಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿಗೆ ಮೀಸಲಾಗಿರುತ್ತವೆ.ಮುಂದಿನ ಸಭೆಯಲ್ಲಿ ಹೆಚ್ಚುವರಿ ನಿರ್ದೇಶಕರಿಗೆ ಜವಾಬ್ದಾರಿ ಹಂಚುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಿಸ್ವಾರ್ಥವಾಗಿ ನಡೆಸಿಕೊಂಡು ಹೋಗೋಣ ಎಂದು ಕರೆ ನೀಡಿದರು.

      ಸಂಘದ ಕಾರ್ಯದರ್ಶಿ ಕೆ.ಚನ್ನಪ್ಪ   ಕೆಲಸ ಕೋಶಾಧ್ಯಕ್ಷ ರಂಗಸ್ವಾಮಯ್ಯ  .ಉಪಾಧ್ಯಕ್ಷ ಕರಿಬಸವದೇವರು  .ಬಿ.ಟಿ ತಿಮ್ಮಯ್ಯ  ಕೆ.ವೀರೇಗೌಡ, ಸರ್ವಮಂಗಳಮ್ಮ, ಗಂಗಾಂಬಿಕೆ,ಸುಶೀಲಮ್ಮ,ರಾಧಮ್ಮ,ಡಾ.ನರಸಿಂಹಮೂರ್ತಿ,ಪ್ರೊ.ಈಶ್ವರಾಚಾರ್,ಡಿ.ಎಂ ಕೃಷ್ಣಮೂರ್ತಿ, ಮುನಿರಾಜು, ತಿಪ್ಪೇಸ್ವಾಮಿ,ರಾಜಣ್ಣ, ರುದ್ರಯ್ಯ, ನಾಗಪ್ಪ, ಶಂಕರಪ್ಪ, ಬಸವರಾಜಯ್ಯ, ಮಹಾದೇವಯ್ಯ ಸೇರಿದಂತೆ  ಹಲವು ಮಂದಿ ನಿವೃತ್ತ ನೌಕರರು ಉಪಸ್ಥಿತರಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";