ಸರ್ಕಾರವೇ ಎಸ್.ಸಿ, ಟಿ.ಎಸ್ ಸಮುದಾಯಗಳಿಗೆ ಸಂಪೂರ್ಣ ಮನೆ ನಿರ್ಮಾಣ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ)  ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ ಯೋಜನೆಗಳಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಕ್ರಮವನ್ನು ಕಡ್ಡಾಯಗೊಳಿಸಿ ಜಾರಿಗೆ ತರುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು ಮೌಲ್ಯಮಾಪನ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೆಂಗಳೂರಿನ ಐ.ಎಸ್.ಇ.ಸಿ ಸಂಸ್ಥೆಯಿಂದ ವಿವಿಧ ಇಲಾಖೆಗಳಿಂದ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಿದ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಯೋಜನೆಗಳ ಪರಿಣಾಮಗಳ ಬಗ್ಗೆ ಮಾಲ್ಯಮಾಪನ ಕೈಗೊಳ್ಳುವ ಕುರಿತು ಸಭೆ ನಡೆಸಲಾಯಿತು.

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅಧಿನಿಯಮ-2013 ರ ಪ್ರಕಾರ ಯೋಜನೆಗಳ ಮೌಲ್ಯಮಾಪನಕ್ಕೆ ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಆದೇಶಿಸಿದ್ದಾರೆ. ಹೀಗಾಗಿ ರಾಜ್ಯದ 13 ಜಿಲ್ಲೆಗಳ 39 ತಾಲ್ಲೂಕುಗಳಲ್ಲಿ ಐ.ಎಸ್.ಇ.ಸಿ ಸಂಸ್ಥೆ ಅಧ್ಯಯನ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಸಭೆಯಲ್ಲಿ ಕೃಷಿ, ತೋಟಗಾರಿಕೆ. ಪಶು ಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಭಾರಿ ನೀರಾವರಿ, ಸಣ್ಣ ನೀರಾವರಿ, ಸಹಕಾರ, ಸಣ್ಣ ಕೈಗಾರಿಕೆ, ಕೈಮಗ್ಗ ಮತ್ತು ಜವಳಿ, ಕೌಶಲಾಭಿವೃದ್ದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಂಧನ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆಗಳ ಪ್ರಗತಿ ಪರಿಶೀಲನೆ ಜೊತೆಗೆ ಯೋಜನೆ ಅನುಷ್ಠಾನದಲ್ಲಿನ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಯಿತು.

ಐ.ಎಸ್.ಇ.ಸಿ ಸಂಸ್ಥೆಯ ವಿಷಯ ತಜ್ಞ ವಿಜಯೇಂದ್ರ ಬಾಬು ಅಭಿಪ್ರಾಯ ವ್ಯಕ್ತಪಡಿಸಿ, ವಿವಿಧ ಇಲಾಖೆಗಳಲ್ಲಿ ಬ್ಯಾಂಕ್ ಸಾಲದೊಂದಿಗೆ ಎಸ್.ಸಿ ಹಾಗೂ ಎಸ್.ಟಿ ಫಲಾನುಭವಿಗಳಿಗೆ ನೀಡುವ ಸಬ್ಸಿಡಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಫಲಪ್ರದವಾಗುತ್ತಿಲ್ಲ.  ಫಲಾನುಭವಿ ವಂತಿಕೆ ಆಧಾರದಲ್ಲಿ ಮನೆ ನಿರ್ಮಾಣ ಯೋಜನೆ ನೀಡುವ ಅನುದಾನ ಮೊತ್ತ ಕಡಿಮೆ ಇರುವ ಕಾರಣ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಸತಿ ರಹಿತ ಎಸ್.ಸಿ ಹಾಗೂ ಎಸ್.ಟಿ ಜನರು ಮನೆ ನಿರ್ಮಾಣಕ್ಕೆ ಮುಂದೆ ಬರುತ್ತಿಲ್ಲ. ಮನೆ ನಿರ್ಮಾಣದ ಘಟಕ ವೆಚ್ಚವೂ ಹೆಚ್ಚಾಗಿದ್ದು ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿ ನೀಡುವ ಅನುದಾನವು ಕಡಿಮೆಯಿದೆ.

ಇನ್ನೂ ಜಿಲ್ಲೆಯ ನಗರ ಪ್ರದೇಶದಲ್ಲಿ ಮನೆ ನಿರ್ಮಾಣದ ಗುರಿ ಶೇ.50 ರಷ್ಟು ಸಾಧನೆಯಾಗಿಲ್ಲ. ಆರಂಭಗೊಂಡ ಮನೆ ನಿರ್ಮಾಣಗಳ ಪೈಕಿ ಶೇ.10 ರಷ್ಟು ಕೂಡ ಪೂರ್ಣಗೊಂಡಿಲ್ಲ. ಈ ಹಿನ್ನಲೆಯಲ್ಲಿ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅಡಿ ಮನೆ ನಿರ್ಮಾಣದ ಘಟಕ ವೆಚ್ಚ ಹೆಚ್ಚಳ ಅಥವಾ ಸಂಪೂರ್ಣ ಮನೆ ನಿರ್ಮಾಣದ ಅನುದಾನವನ್ನು ವಿವಿಧ ಯೋಜನೆಗಳ ಅಡಿ ಹೊಂದಾಣಿಕೆ ಮಾಡಲು ಸರ್ಕಾರ ಅನುಮತಿ ನೀಡುವಂತೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.

ಐ.ಎಸ್.ಇ.ಸಿ ಸಂಸ್ಥೆ ಎಲ್ಲಾ ಇಲಾಖೆ ಮುಖ್ಯಸ್ಥರಿಂದ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಯೋಜನೆ ಅನುಷ್ಠಾನದಲ್ಲಿ ತರಬೇಕಾದ ಮಾರ್ಪಾಡುಗಳ ಬಗ್ಗೆ ವರದಿ ಪಡೆದು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಐ.ಎಸ್.ಇ.ಸಿ ಸಂಸ್ಥೆಯ ಯೋಜನಾ ನಿರ್ದೇಶಕ ಪ್ರೊ.ಮಾದೇಶ್ವರನ್ ಮತ್ತು ಪ್ರೊ. ಬಿ.ಪಿ.ವಾಣಿ, ಜಂಟಿ ಕೃಷಿನಿರ್ದೇಶಕ ಮಂಜುನಾಥ, ಡಿಯುಡಿಸಿ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಹಾಗೂ ಪ್ರಭಾರಿ ಯೋಜನಾಧಿಕಾರಿ ಮಧು ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
 

- Advertisement -  - Advertisement - 
Share This Article
error: Content is protected !!
";