ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಗ್ರಾಮದ ಮೆಟ್ರಿಕ್ ನಂತರದ ಮತ್ತು ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಸೋಮವಾರ ರಾತ್ರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ವಿದ್ಯಾರ್ಥಿನಿಲಯದ ಎಲ್ಲಾ ಕೊಠಡಿಗಳಿಗೆ ಮತ್ತು ದಾಸ್ತಾನು ಕೊಠಡಿ, ಅಡುಗೆ ಕೋಣೆ, ಶೌಚಾಲಯಕ್ಕೆ ತೆರಳಿ ಪರಿಶೀಲಿಸಿ, ಸ್ವಚ್ಛತೆ ಕಾಪಾಡುವಂತೆ ಅಧಿಕಾರಿ, ಸಿಬ್ಬಂದಿಗಳಿಗೆ ಸೂಚಿಸಿದರು.

ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರದ ಜೊತೆಗೆ ಶುಚಿತ್ವ ಮತ್ತು ರುಚಿಕರವಾದ ಆಹಾರವನ್ನು ಮತ್ತು ಶುದ್ಧ ಕುಡಿಯುವ ನೀರನ್ನು ನೀಡಬೇಕೆಂದು ಸೂಚಿಸಿದರು. ಹಾಗೇ ವಿದ್ಯಾರ್ಥಿಗಳೊಂದಿಗೆ ಊಟವನ್ನು ಸವಿದು, ವಿದ್ಯಾರ್ಥಿಗಳೊಂದಿಗೆ ಸಂವಾದ ನೆಡಿಸಿದರು. ಹಾಸ್ಟೆಲ್‍ನ ಒಳಗೂ ಹಾಗೂ ಹೊರಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ನಂತರ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಹರಿಸಿ, ಮುಂದಿನ ಭವಿಷ್ಯದ ಕಡೆಗೆ ಒತ್ತು ಕೊಟ್ಟು ಓದುವಂತೆ ತಿಳಿ ಹೇಳಿದರು. ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ವಿದ್ಯಾಭ್ಯಾಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ: ಪರಶುರಾಂಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಹಾಜರಾತಿ, ದಾಖಲಾತಿಗಳನ್ನು ಮತ್ತು ದಾಸ್ತಾನು ಕೊಠಡಿಗಳಿಗೆ ತೆರಳಿ ಪರಿಶೀಲಿಸಿದರು. ವೈದ್ಯಾಧಿಕಾರಿಗಳು ಹಾಗೂ ಶುಶ್ರೂಷಕರೊಂದಿಗೆ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಮೊದಲೇ ಆದ್ಯತೆ ನೀಡಿ, ಒಳ ಮತ್ತು ಹೊರ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆ ನೀಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ನಂತರ ಅಲ್ಲೇ ಇದ್ದ ರೋಗಿಗಳ ಆರೋಗ್ಯ ವಿಚಾರಿಸಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ, ಆರೋಗ್ಯದಲ್ಲಿ ಏನಾದರೂ ಏರುಪೇರಾದಲ್ಲಿ ಸುತ್ತ-ಮುತ್ತಲಿನ ಗ್ರಾಮಸ್ಥರು ಈ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

