ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೈಹಿಕ ನ್ಯೂನತೆ ಹಾಗೂ ಇತರೆ ಕಾರಣಗಳಿಂದ ಗೃಹ ಆಧಾರಿತ ಶಿಕ್ಷಣ ಪಡೆಯುತ್ತಿರುವ ವಿಶೇಷ ಮಕ್ಕಳಿಗೆ ಅವರ ಮನೆಯಲ್ಲಿ ಫೀಜಿಯೋಥೆರಪಿ ಚಿಕಿತ್ಸೆ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಓ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ನಗರದ ಹಲವು ಬಡಾವಣೆಗಳ ಗೃಹ ಆಧಾರಿತ ಶಿಕ್ಷಣ ಕೇಂದ್ರ ಹಾಗೂ ವಿಶೇಷ ಚೇತನ ಮಕ್ಕಳ ಮನೆಗಳಿಗೆ ಭೇಟಿ ನೀಡಿದ ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಗೃಹಾಧಾರಿತ ಶಿಕ್ಷಣ ಎಂದರೆ ಶಾಲೆಗೆ ಹಾಜರಾಗಲು ಸಾಧ್ಯವಾಗದ ತೀವ್ರ ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗೆ ಮನೆಯಲ್ಲಿಯೇ ತಮಗೆ ಅವಶ್ಯಕತೆಯಿರುವ ದೈನಂದಿನ ಕೌಶಲ್ಯಗಳ ತರಬೇತಿ ಹಾಗೂ ಫೀಜಿಯೋಥೆರಪಿ ಸೇವೆಯನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ.
ಇಂತಹ ಮಕ್ಕಳಿಗೆ ಆಧಾರ್ ಹಾಗೂ ಯು.ಡಿ.ಐ.ಡಿ ಕಾರ್ಡ್ ನೀಡಬೇಕು. ಮಾಸಾಶನಕ್ಕೆ ಅರ್ಹರಿರುವರಗೆ ಮಾಸಾಶನ ಸೌಲಭ್ಯ ಒದಗಿಸುವುದರೊಂದಿಗೆ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ, ಆರೋಗ್ಯ ಇಲಾಖೆಗಳು ತಿಂಗಳಲ್ಲಿ ಒಂದು ದಿನಾಂಕವನ್ನು ನಿಗಧಿಪಡಿಸಿ ಗೃಹಾಧಾರಿತ ಶಿಕ್ಷಣ ಕೇಂದ್ರಗಳ ಮಕ್ಕಳಿಗೆ ದೊರೆಯುವ ಎಲ್ಲಾ ಸೌಲಭ್ಯವನ್ನು ಒದಗಿಸುವಂತೆ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನಲ್ಲಿ ಒಟ್ಟು 34 ಮಕ್ಕಳು ಗೃಹಾಧಾರಿತ ಶಿಕ್ಷಣ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯ ಕುರಿತಾದ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಸಮನ್ವಯದೊಂದಿಗೆ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಹಾಗೂ ಎಪಿಡಿ ಸಂಸ್ಥೆಯ ಸದಸ್ಯರು ಹಾಗೂ ಯು.ಆರ್.ಡಬ್ಲ್ಯ ಅವರು ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಸೆರೆಬರಲ್ ಪಾಲಿಸಿ ನ್ಯೂನ್ಯತೆಯಿಂದ ಬಳಲುತ್ತಿರುವ ಮಗುವಿನ ಮನೆಗೆ ಭೇಟಿ ನೀಡಿದ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ತಕ್ಷಣ ಮಗುವಿನ ರೋಗ ವಿಧಾನವನು ಪರೀಕ್ಷಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಅವರಿಗೆ ಸೂಚಿಸಿದರು.
ನಂತರ ತಂದೆ ತಾಯಿಯರಿಂದ ದೂರವಿದ್ದು, ಅಜ್ಜಿಯ ಆಶ್ರಯದಲ್ಲಿ ಬೆಳುತ್ತಿರುವ ಮಗುವಿಗೆ ಇಲಾಖೆ ಹಾಗೂ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕಿ ಭಾರತಿ ಬಣಕಾರ್ ಅವರಿಗೆ ಹೇಳಿದರು.
ನ್ಯೂನತೆಯಿಂದ ಬಳುತ್ತಿರುವ ಒಂದೇ ಕುಟುಂಬದ ಎರೆಡು ಮಕ್ಕಳ ಮನೆಗೆ ಭೇಟಿ ನೀಡಿದ ಸಿಇಓ ಇಬ್ಬರಲ್ಲಿ ಒಂದು ಮಗು ಗೃಹಾಧಾರಿತ ಶಿಕ್ಷಣವನ್ನು ಯಶಸ್ವಿಯಾಗಿ ಪಡೆದು ಔಪಚಾರಿಕ ಶಾಲಾ ಶಿಕ್ಷಣಕ್ಕೆ ತೆರಳುತ್ತಿರುವ ಸಂಗತಿ ತಿಳಿದು ಹರ್ಷ ವ್ಯಕ್ತಪಡಿಸಿದರು.
ಬಿ.ಆರ್.ಸಿ ಕೇಂದ್ರದಲ್ಲಿ ಸ್ಥಾಪಿತವಾಗಿರುವ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರಕ್ಕೆ ಭೇಟಿ ನೀಡಿ. ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಕೇಂದ್ರದಲ್ಲಿ ಕಲ್ಪಿಸಲಾದ ಸೌಲಭ್ಯಗಳನ್ನು ಸಮಗ್ರವಾಗಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮಕ್ಕಳ ಪೋಷಕರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ. ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿ ಡಾ. ಜಿ.ಪಿ ರೇಣುಪ್ರಸಾದ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.