ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್, ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ, ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಸಭೆ ನೆಡೆಸಿ, ಗ್ರಾಮಗಳ ನೈರ್ಮಲ್ಯ ಮತ್ತು ಕುಡಿಯುವ ನೀರು, ಮಹಾತ್ಮ ಗಾಂಧಿ ನರೇಗಾ ಯೋಜನೆ, ವಸತಿ ಯೋಜನೆ ಸ್ವಚ್ಚ ಭಾರತ್, ಇತರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ಗೆ ಸಂಬಂಧಿಸಿದ ವಿಷಯಗಳ ಚರ್ಚಿಸಿ, ಸರ್ಕಾರದ ಮಾರ್ಗಸೂಚಿಗಳ ನಿಯಮಗಳ ಪ್ರಕಾರ ಕೆಲಸ ನಿರ್ವಹಿಸಬೇಕು.
ಗ್ರಾಮಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರ ತುಂಬಾ ಅವಶ್ಯಕ ಎಂದರು. ಪಿಡಿಒ ವಿಜಯಕುಮಾರ್ ಅವರು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಮಾಹಿತಿಯನ್ನು ಜಿ.ಪಂ.ಸಿಇಒ ಅವರಿಗೆ ತಿಳಿಸಿದರು.
ನಂತರ ಚಳ್ಳಕೆರೆಯ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಬಾಲಕ ಹಾಗೂ ಬಾಲಕಿಯರ ವಸತಿ ಶಾಲೆ, ಪ್ರೌಢಶಾಲೆ, ವಿದ್ಯಾರ್ಥಿನಿಲಯಗಳಿಗೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆ, ಅಂಗವಾಡಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ತಯಾರಿಸುವ ಅಡುಗೆಯನ್ನು ಶಿಕ್ಷಕರು ಹಾಗೂ ವಾರ್ಡನ್‍ಗಳು ಸೇವನೆ ಮಾಡುವ ಜತೆಗೆ ರುಚಿ–ಶುಚಿಯಾಗಿ ಗುಣಮಟ್ಟದ ಆಹಾರ ತಯಾರಿಸಬೇಕು ಎಂದರು.
ಮಕ್ಕಳೊಂದಿಗೆ ಜಿ.ಪಂ ಸಿಇಒ ಸೋಮಶೇಖರ್ ಬಿಸಿಯೂಟ ಸವಿದು, ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಶಿಕ್ಷಣ ಹಾಗೂ ವಸತಿ ಶಾಲೆಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಅವರು, ವಸತಿ ನಿಲಯಗಳು ಮತ್ತು ಶಾಲೆಗಳ ಸುತ್ತ–ಮುತ್ತ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಇಒ ಶಶಿಧರ್, ಸಮಾಜ ಕಲ್ಯಾಣಾಧಿಕಾರಿ ಜೇಮ್ಲನಾಯ್ಕ, ಬಿಸಿಎಂ ಅಧಿಕಾರಿ ರಮೇಶ್, ಬಿಇಒ ಸುರೇಶ್. ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವರಾಜ್, ಸಿಡಿಪಿಒ ರಾಜಾನಾಯ, ಸಹಾಯಕ ನಿರ್ದೇಶಕ (ನರೇಗಾ) ಸಂತೋಷ್ ಕುಮಾರ್, ಜಿಲ್ಲಾ ಪಂಚಾಯತ್‍ನ ನರೇಗಾ ಶಾಖೆಯ ಜಿಲ್ಲಾ ಐಇಸಿ ಸಂಯೋಜಕ ರವೀಂದ್ರನಾಥ್, ತಾಲ್ಲೂಕು ಐಇಸಿ ಸಂಯೋಜಕ ಪ್ರವೀಣ್ ಕುಮಾರ್, ತಾಲ್ಲೂಕು ಪಂಚಾಯಿತಿಯ ತಾಂತ್ರಿಕ ಸಂಯೋಜಕ ದಿನೇಶ್, ಪಿಡಿಒ ಸಂಪತ್ ಕುಮಾರ್, ತಿಪ್ಪೇಸ್ವಾಮಿ ಹಾಗೂ ಮತ್ತಿತರರು ಇದ್ದರು.