ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಮೀಸಲಾತಿ ಪ್ರಕ್ರಿಯೆ ನಡೆಯುತ್ತಿದ್ದು ಮುಂದಿನ ನಾಲ್ಕೈದು ತಿಂಗಳಲ್ಲಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕುರಿತು ಎರಡ್ಮೂರು ತಿಂಗಳಲ್ಲಿ ನೋಟಿಫಿಕೇಶನ್ ಆಗುತ್ತದೆ. ಮೀಸಲಾತಿ ರಚಿಸುವುದಾಗಿ ಹೈಕೋರ್ಟ್ ಮುಂದೆ ಒಪ್ಪಿದ್ದೇವೆ. ಅದರ ಆಂತರಿಕ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಸವದತ್ತಿ ಶಾಲೆಯ ನೀರಿನ ಟ್ಯಾಂಕ್ನಲ್ಲಿ ವಿಷ ಹಾಕಿದ ಪ್ರಕರಣದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಶಾಲೆ ಮುಖ್ಯೋಪಾಧ್ಯಾಯರ ವರ್ಗಾವಣೆಗೆ ವಿಷ ಹಾಕ್ತಾರೆ ಅಂದ್ರೆ ಇವರೇನು ಮನುಷ್ಯರಾ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ,
ವಿಷ ಹಾಕಿದವರು ಯಾರೆಂದು ಗೊತ್ತು. ಏಕೆ ಬಿಜೆಪಿಯವರು ಈ ಬಗ್ಗೆ ಮಾತನಾಡುತ್ತಿಲ್ಲ?. ಎಲ್ಲಿದ್ದಾರೆ ಈಗ?. ಕೋಮು ವಿಷಬೀಜ ಬಿತ್ತುತ್ತಿರುವುದರ ಪರಿಣಾಮವಾಗಿ ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಅವರು ಟೀಕಾಪ್ರಹಾರ ಮಾಡಿದರು.
ಈ ಬಗ್ಗೆ ಬಿಜೆಪಿ ನಾಯಕರಾದ ಆರ್ ಅಶೋಕ್, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ್ ಅವರನ್ನು ಕೇಳಿ, ಚಿಕ್ಕಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಾರೆ ಅಂದ್ರೆ ಇವರು ಮನುಷ್ಯರಾ? ಎಂದು ಕಿಡಿಕಾರಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಹಾಕಿದ್ರು ಕಾಂಗ್ರೆಸ್ ಪಕ್ಷ ಉತ್ತರ ಕೊಡಬೇಕು, ಸುಪ್ರೀಂಕೋರ್ಟ್ ಏನೇ ಹೇಳಿದರೂ ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು, ಶ್ರೀರಾಮ ಸೇನೆ ಹಾಗೂ ಆರ್ಎಸ್ಎಸ್ ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ ಉತ್ತರ ಕೊಡಬೇಕು ಅಂದ್ರೆ ಬಿಜೆಪಿ ನಾಯಕರ ಬಾಯಿಗೆ ಬೀಗ ಬಿದ್ದಿದೆಯಾ? ಎಂದು ಇದೇ ವೇಳೆ ಸಚಿವರು ವಾಗ್ದಾಳಿ ನಡೆಸಿದರು.

