ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಚುನಾವಣಾ ಆಯೋಗವು 2024 ರ ಡಿಸೆಂಬರ್ ಮಾಹೆÉಯಿಂದ 2025ರ ಜನವರಿ ಮಾಹೆಯವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿ ಅದರಂತೆ ಚುನಾವಣೆ ನಡೆಸಲು ಆದೇಶಿಸಲಾಗಿದೆ.
ಸದರಿ ಚುನಾವಣಾ ವೇಳಾಪಟ್ಟಿಯಂತೆ ಡಿಸೆಂಬರ್ 8 ರಂದು ಮತದಾನ ಪ್ರಕ್ರಿಯೆಯು ಜರುಗಿದ್ದು, ಡಿಸೆಂಬರ್ 11 ರಂದು ಮತ ಎಣಿಕೆ ದಿನಾಂಕವನ್ನು ನಿಗದಿಪಡಿಸಿ ಆದೇಶಿಸಿತ್ತು.
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ ಎಸ್.ಎಂ. ಕೃಷ್ಣ ರವರ ನಿಧನದ ಪ್ರಯುಕ್ತ ಡಿಸೆಂಬರ್ 11 ರಂದು ಸರ್ಕಾರ ಸಾರ್ವಜನಿಕ ರಜೆಯನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಯುವ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಉಡುಪಿ, ಬೆಳಗಾವಿ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯ ಅಧಿಸೂಚನೆಯಲ್ಲಿ ಮತ ಎಣಿಕೆ ದಿನಾಂಕ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವ ದಿನಾಂಕವನ್ನು ಡಿಸೆಂಬರ್ 11 ರ ಬದಲಿಗೆ ಡಿಸೆಂಬರ್ 12 ರಂದು ನಿಗದಿಪಡಿಸಿ ಆದೇಶಿಸಿದೆ.
ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿಸೆಂಬರ್ 12 ರ ವರೆಗೆ ಜಾರಿಯಲ್ಲಿರುತ್ತದೆ. ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಚುನಾವಣಾಧಿಕಾರಿಗಳು ಮತ್ತು ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಎಣಿಕೆ ದಿನಾಂಕದ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ರಾಜ್ಯ ಚಿನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪ್ರಕಾಶ್ ಎಸ್. ಮರಬಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

