ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕರ್ನಾಟಕ ರಾಜ್ಯ ಸಚಿವ ಸಂಪುಟದ ನಿರ್ಣಯಗಳ ಒಂದಿಗೆ, ಚಳ್ಳಕೆರೆ ತಾಲ್ಲೂಕಿನಾದ್ಯಂತ ಪಸರಿಸಿರುವ ವೇದಾವತಿ ನದಿಗೆ ನಾಲ್ಕೈದು ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡಲು ನೂರು ಕೋಟಿ ರೂ.ಗೂ ಹೆಚ್ಚು ನೀಡಲು ಸಂಪುಟಸಭೆ ಒಪ್ಪಿಗೆ ನೀಡಿದೆ.
ಬರ ಪೀಡಿತ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿಗೆ ಚೆಕ್ ಡ್ಯಾಂ ನಿರ್ಮಿಸಲು ಅನುದಾನ ನೀಡಿದ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾಗರಾಜ್.ಎ ಪರಶುರಾಮಪುರ ಅವರು ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ಪರಶುರಾಮಪುರ ಹೋಬಳಿ ಸೇರಿದಂತೆ ಇತರೆ ಭಾಗಗಳಿಗೆ ಚೆಕ್ ಡ್ಯಾಂ ಕಾಮಗಾರಿಗಳು ಆಗಬೇಕೆನ್ನುವುದು ರೈತರ ಬಹುದಿನಗಳ ಕನಸಾಗಿದ್ದು ನನಸಾಗಿರುವುದು ರೈತರ ಮೊಗದಲ್ಲಿ ಮಂದಹಾಸ ತಂದಿರುವುದು ನಿಜಕ್ಕೂ ಅದೃಷ್ಟದ ಬಾಗಿಲು ತೆರೆದಂತೆ ಆಗಿದೆ ಎಂದು ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.
ವೇದಾವತಿ ನದಿಯ ಒಡಲು ಐದಾರು ವರ್ಷಗಳ ಹಿಂದೆ ಜಾಲಿ ಮರಗಳೇ ತುಂಬಿತ್ತು. ದಂಧೆಕೋರರ, ಕಳ್ಳ ಕಾಕರ, ಇಸ್ಪೀಟ್ ಆಡುವವರ, ಮುಖ್ಯವಾಗಿ ಮರಳು ದಂಧೆಕೋರರ ಅಡಗುತಾಣವಾಗಿತ್ತು ಎಂದರೆ ಅತಿಶಯೋಕ್ತಿ ಆಗಲಾರದು.
ಚಳ್ಳಕೆರೆ ಕ್ಷೇತ್ರದ ಭಾಗ್ಯವಿಧಾತ, ರೈತರ ಮಿತ್ರ, ಅಭಿವೃದ್ಧಿಯನ್ನೇ ಮಂತ್ರವಾಗಿರಿಸಿ ಕ್ಷೇತ್ರದ 224 ಬೂತ್ ಗಳಲ್ಲೂ ಯಾವುದೇ ಬಿಗುಮಾನವಿಲ್ಲದೆ, ಸಾರ್ವಜನಿಕದೊಂದಿಗೆ ಸ್ಪಂದಿಸುವ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರಿಗೆ ಕಿಸಾನ್ ಕಾಂಗ್ರೆಸ್ ನಾಗರಾಜ್ ಪರಶುರಾಮಪುರ ಅವರು ಅಭಿನಂದನೆಗಳನ್ನು ತಿಳಿಸಿ ಮಾತನಾಡಿ,
ತಾಲೂಕಿನ ಗೋಸಿಕೆರೆ, ನಾರಾಯಣಪುರ ಹಳ್ಳಿಗಳ ಹತ್ತಿರ ವೇದಾವತಿ ನದಿಗೆ ಒಂದು ಕಡೆ ಬ್ರಿಡ್ಜ್, ಇನ್ನೊಂದು ಕಡೆ ಬ್ರಿಡ್ಜ್ ಕಂ ಬ್ಯಾರೇಜ್, ಮತ್ತೊಂದು ಕಡೆ ಚೆಕ್ ಡ್ಯಾಂ ಹೀಗೆ ಹಲವಾರು ಕಾಮಗಾರಿಗಳನ್ನು ಮಾಡಿಸುವ ನದಿಯ ಪಾತ್ರದ ನೂರಾರು ಹಳ್ಳಿಗಳ ಅಂತರ್ಜಲ ಮಟ್ಟ ಹೆಚ್ಚಿಸಿ ರೈತರ ಬದುಕನ್ನು ಹಸನು ಮಾಡಿದ್ದಾರೆ. ಈಗಾಗಲೇ ತಾಲೂಕಿನ ಹಲವು ಹಳ್ಳಿಗಳ ಯುವ ಮತ್ತು ಕೃಷಿಕ ರೈತರು ಈಗಾಗಲೇ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರ ಜೊತೆಗೆ ರಾಗಿ ಭತ್ತದಂತಹ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ.
ಜೊತೆಗೆ ಬಡವರ ಬಾದಾಮಿ ಎಂದೇ ಪ್ರಖ್ಯಾತವಾಗಿರುವ ಶೇಂಗಾ ದುಬಾರಿ ವೆಚ್ಚದ ಬೆಳೆಯಾಗಿ ಮಾರ್ಪಟ್ಟು ಆರ್ಥಿಕ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ. ಇತ್ತೀಚೆಗೆ ಶೇಂಗಾ ಬೆಳೆಯನ್ನು ಬಿಟ್ಟು ಮೆಕ್ಕೆಜೋಳದ ಕಡೆ ರೈತರು ಹೆಚ್ಚು ಆಸಕ್ತಿ ತೋರಿಸುತ್ತಿದ್ದು ಸಾವಿರಾರು ಹೆಕ್ಟೇಟ್ ಗಳಲ್ಲಿ ಮೆಕ್ಕೆಜೋಳ ಬೆಳೆಯಲು ತೊಡಗಿದ್ದಾರೆ.
ಚಳ್ಳಕೆರೆ ಮೊಳಕಾಲ್ಮೂರು ಹಿರಿಯೂರು ಭಾಗದಲ್ಲಿ ಮಳೆಯ ಪ್ರಮಾಣ ತುಂಬಾ ಕಡಿಮೆಯಾಗಿದ್ದು ಬಿತ್ತನೆ ಕಾರ್ಯ ಇನ್ನೂ ಆರಂಭವಾಗದೇ ಇರುವುದು ರೈತರಲ್ಲಿ ಆತಂಕ ಮೂಡಿಸಿದೆ. ಆದಕಾರಣ ಕೃಷಿ ಅಧಿಕಾರಿಗಳು ಬೆಳೆ ವಿಮೆ ಪರಿಹಾರ ದಂತಹ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲು ಚಿತ್ರದುರ್ಗ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಎ ಪರಶುರಾಮಪುರ ಅವರು ಶಾಸಕ ಟಿ.ರಘುಮೂರ್ತಿ ಮತ್ತು ಸಚಿವ ಡಿ.ಸುಧಾಕರ್ ಅವರಲ್ಲಿ ಮನವಿ ಮಾಡಿದ್ದಾರೆ.