ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಸಿರಾಸೆ
————–
ವನ ಗಿರಿ ಕಣಿವೆಗಳ ಸಾಲು
ನನ್ನದೂ ಶೃಂಗಾರ ಸ್ವರ್ಗವೇ
ಸುಡದಿರಿ ಕಡಿಯದಿರಿ ನನ್ನ ಚೆಲುವ
ಹಸಿರ ಹೊನ್ನಸಿರಿ ಅಳಿಸದಿರಿ
ನನ್ನೊಡಲ ಬಂಜೆ ಮಾಡದಿರಿ
ಸೆರಗ ಪಕ್ಷಿ ಸಂಕುಲ
ಜೀವ ಜಂತುಗಳ ಕಾಪಾಡಿರಿ
ಮುಗಿಲ ಕಪ್ಪುಗಳು ಬಂದಾಗ
ದೂರ ಸರಿಯುವಂತಾಗಿಸಿ
ಬರ ತರಿಸದಿರಿ
ಹಚ್ಚ ಹಸಿರೊದ್ದ ಮೈ
ನೈದಿಲೆಯಂತೆ ಅರಳಿತಾದರೆ
ಇನಿಯನ ಆಗಮನಕೆ
ಪುಷ್ಪವತಿ ಪುಳಕ
ಸಿಂಗಾರ ಸಿರಿ ಮಗಳು
ತಂಗಾಳಿಗೆ ತೂಗಿ
ಬೀಸಿ ಕರೆವ ಹೆಮ್ಮೆರಗಳು
ಸಿಡಿಲು ಸೆಳೆ ಮಿಂಚು
ಕಾರ್ಮೋಡಗಳ ಮೈಥುನ
ಕೆರೆ ಕಟ್ಟೆ ಉಬ್ಬು ತಗ್ಗುಗಳು ತಣಿಯುವಂತೆ
ನನ್ನಾಳಕ್ಕಿಳಿದು ಸುರಿಯುತಾನೆ
ಮನಮುಟ್ಟುವಂತೆ ಎರಗುತಾನೆ
ಭೋರ್ಗರೆವ ಹಳ್ಳ ತೊರೆಗಳ ಜಲರಾಶಿ
ಹಸಿರ ಬಸಿರಾಸೆಗೆ ಬೆಳದಿಂಗಳ ಚಿಗುರಿಸಿ
ಸಂತಸದ ಕಟ್ಟೆಯಲಿ ತುಳುಕುತಾನೆ
ಸುಡದಿರಿ ನನ್ನ ಕಡಿಯದಿರಿ
ಅಭಯಾರಣ್ಯದ ಹಸಿರು
ಉಳಿಸಿಕೊಳ್ಳಿ ಬೆಳೆಸಿಕೊಳ್ಳಿ
ನನ್ನೊಟ್ಟಿಗೆ ಬದುಕಿಕೊಳ್ಳಿ
ನಾನಿರುವ ಕಡೆಯಲೆಲ್ಲ
ನಿಮ್ಮ ಜೀವ ಉಸಿರು
ಕವಿತೆ-ಕುಮಾರ್ ಬಡಪ್ಪ, ಚಿತ್ರದುರ್ಗ.