ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಸ್ತೆ, ಚರಂಡಿ ನಿರ್ಮಾಣದಿಂದ ಜನ ಉದ್ಧಾರ ಆಗ್ತಾರಾ? ಎಂದು ಸಚಿವ .ಜಿ ಪರಮೇಶ್ವರ್ ಅವರು ಹೇಳಿಕೆ ನೀಡಿದ್ದು ಅಲ್ಲಿಗೆ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು! ಎಂದು ವಿಪಕ್ಷ ನಾಯಕ ಆರ್.ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರ ನಡೆಸುವುದು, ಅಭಿವೃದ್ಧಿ ಮಾಡುವುದು ಅಂದರೆ 3 ತಿಂಗಳಿಗೋ, 6 ತಿಂಗಳಿಗೋ ಒಮ್ಮೆ ಗೃಹಲಕ್ಷ್ಮಿ ಹಣ ಅಕೌಂಟಿಗೆ ಹಾಕೋದು, ಬಾಕಿ ಸಮಯದಲ್ಲಿ ರಾಜಕೀಯ ಮಾಡೋದು, ಕುರ್ಚಿಗಾಗಿ ಕಿತ್ತಾಡೋದು ಅಂದುಕೊಂಡಿದ್ದಾರೆ ಕಾಂಗ್ರೆಸ್ ನಾಯಕರು.
ರಸ್ತೆ, ಚರಂಡಿ, ಮೂಲಸೌಕರ್ಯ ನಿರ್ಮಾಣದಿಂದ ಬಡವರು ಉದ್ಧಾರ ಆಗಿಲ್ಲ ಅನ್ನೋ ಮನಸ್ಥಿತಿ ಇರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕದ ಜನತೆ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ರಸ್ತೆ, ಚರಂಡಿ ಬೇಡ ಅಂದಮೇಲೆ, ತುಮಕೂರಿನವರೆಗೂ ಮೆಟ್ರೋ ಯಾಕೆ ಬೇಕು ಪರಮೇಶ್ವರ್ ಅವರೇ? ಎಸ್ಸಿಎಸ್ಪಿ, ಟಿಎಸ್ಪಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವಂತೆ, ಮೆಟ್ರೋ ಕಾಮಗಾರಿಯ ಹಣವನ್ನೂ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡು ಬಿಡಿ.
ಒಟ್ಟಿನಲ್ಲಿ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ರಾಜ್ಯದಲ್ಲಿ ಅಭಿವೃದ್ಧಿ ಅಸಾಧ್ಯ. ಇದಂತೂ ಗ್ಯಾರಂಟಿ ಎಂದು ಅಶೋಕ್ ಭವಿಷ್ಯ ನುಡಿದ್ದಾರೆ.

