ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು 66
ಹೆತ್ತವರ ಕಟ್ಟುಪಾಡುಗಳ ಆಚೆಗೂ ಮೀರಿ, ನನ್ನದೇ ಆದಂತಹ, ಕದ್ದೊ, ಕಾಣಿಸಿಯೋ ಒಂದಿಷ್ಟು ಖಾಸಗಿ ಸಮಯವನ್ನ ಉಳಿಸಿಕೊಳ್ಳುತ್ತಿದ್ದೆ. ಇದು ನನ್ನ ಸಂಘ ಸಮಯವೆಂದರೂ ಸರಿ, ಈ ಸಮಯಕ್ಕಾಗಿಯೇ ಅವರಿಬ್ಬರಿಂದ ನಾನು ಅನೇಕ ಬಾರಿ ಒದೆಯನ್ನೂ ತಿಂದಿದ್ದೇನೆ.
ಅವ್ವ ಓದ್ಕೊ ಅಂದಾಗ ಕೇಳದೇ ಆಡೋಕೆ ಹೋಗ್ತಿದ್ದ ಸಂದರ್ಭ,ಅಪ್ಪನ ಕಣ್ಣಿಗೆ ದಿನದ ಸಗಣಿ ಗುಪ್ಪೆ ಕಾಣಿಸದಿದ್ದ ಸಂದರ್ಭ,ಕೈ ಇಲ್ಲವೇ ಕೋಲು ನನ್ನ ಮೈಮೇಲೆ ಲೆಕ್ಕವಿಲ್ಲದ ಬಾರಿ ಹರಿದಾಡಿವೆ.ಆ ಉಳಿ ಏಟುಗಳಿಗೆ,ಇಂದಿಗೂ ನನ್ನನ್ನ ಕಾಡುವ,ಆ ಬಾಲ್ಯದ ಆಟಗಳನ್ನು ಮರೆಸಲು ಸಾಧ್ಯವಾಗಿಲ್ಲ.
ಅವು ನನ್ನ ಸಾಂಗತ್ಯ,ಅವೇ ನನ್ನ ಬದುಕಿನ ಬೆಳಕು. ಗೆಳೆಯರೆಂದರೆ ಇಂದಿಗೂ ಹಪಿಸುವ ನಾನು,ಅವು ಚಿಗುರಿ ಟಿಸಿಲೊಡೆದು ಮರವಾಗಿದ್ದು ಆ ದಿನಗಳಲ್ಲೇ.
ನನ್ನೆಲ್ಲಾ ನೋವುಗಳನ್ನ ಅವು ಮರೆಸುತ್ತಿದ್ವು,ನನ್ನೊಟ್ಟಿಗಿದ್ದವರೆಲ್ಲಾ ನನ್ನಂಥವರೇ, ಸ್ಥಿತಿವಂತರಲ್ಲದ ಗೆಳೆಯರು, ರಾತ್ರಿಯ ತಂಗಳಿಗೆ,ಬೆಳಗಿನ ತಿಂಡಿಯಾಗಿಸಿಕೊಂಡು, ಬದುಕಿದ್ದ ಮಹಾರಾಜರು.
ಮನೆಗಳಲ್ಲಿ ಏನಾದ್ರೂ ವಿಶೇಷ ಹಬ್ಬವೆಂದರೆ,ಒಂದೊತ್ತು ಉಪವಾಸವಿದ್ದೂ,ಆ ಊಟಕ್ಕಾಗಿ ಕಾದು ಉಣ್ಣುತ್ತಿದ್ದ ದಿನಗಳವು, ಇನ್ನೊಂದೊತ್ತಿಗೆ ಅದು ಬೇಕೆಂದರೂ ಇರುತ್ತಿರಲಿಲ್ಲ,ನಮಗೆಲ್ಲ ಊಟವಿಟ್ಟು ನಾವು ಸಂತೋಷದಿಂದ ಉಣ್ಣುತ್ತಿದ್ದರೆ,ಅವ್ವನ ಮುಖ ಲಾಸ್ಯದ ಮಂದಹಾಸವನ್ನ, ಚಿಮಣಿ ಬುಡ್ಡಿ ಬೆಳಕಲ್ಲಿಯೇ ಗಮನಿಸುತ್ತಿದ್ದೆ,ರಾಜ್ಯ ಗೆದ್ದಷ್ಟು ಬಿಗುಮಾನ ಅವರ ಮುಖದಲ್ಲಿ ನೆಲೆಸಿರುತಿತ್ತು,
ನಮ್ಮ ಬಾಯಿ ತುತ್ತುಗಳು, ತಾನೇ ಉಂಡಷ್ಟು ಸಂತೋಷ ಅವ್ವನಿಗೆ, ಇನ್ನೂ ಸ್ವಲ್ಪ ಅಂದ್ರೂನೂ ಬಡಿಸಿಬಿಡೋರು,ಅದೇನು ಖುಷಿನೊ ಏನೋ, ತನಿಗೊಂದಿಷ್ಟು ಇದೆಯೋ ಇಲ್ಲವೋ,ಯಾವುದನ್ನೂ ಗಮನಿಸುತ್ತಿರಲಿಲ್ಲ,ನನಗಿಲ್ವಲ್ಲ ಅಂತ ಆ ದೇವತೆ ಯಾವತ್ತಾದ್ರೂ ಹೇಳಿಕೊಂಡಿದ್ದಾಗಲಿ ನನಗಂತೂ ನೆನಪಿಲ್ಲ.
ನೆಹರು ನಗರದ ಉತ್ತರದ ಕೆಳಭಾಗ,ಬರಿಗೇರಿಯ ಕೆರೆ ಬಯಲು,ಆಗಿನ್ನು ಚಂದ್ರವಳ್ಳಿ ಕೆರೆ ನಿರ್ಮಾಣವಾಗಿರಲಿಲ್ಲ, ಮಳೆ ಬಂದರೆ ಗುಡ್ಡದ ನೀರು,ಬರಗೇರವ್ವನ ಗುಡಿಯ ಹಿಂಭಾಗದ ಹಳ್ಳದಿಂದ,ಅಗಸನ ಕಲ್ಲು ಮುಂಭಾಗದ ಬಯಲಿನ ಹೊಲಗಳಿಂದ ಹಾದು, ಬರಗೇರಿ ಕೆರೆಯ ಅರ್ಧ ಮೈಲು ಅಗಲಕ್ಕೂ ಹರಿಯುತ್ತಿತ್ತು.
ರಭಸದ ಮಳೆಗೆ ಒಮ್ಮೊಮ್ಮೆ ದನ ಕರುಗಳೂ ನೀರಿನ ಸೇಳೆತಕ್ಕೆ ಸಿಕ್ಕು ಕೆರೆ ಪಾಲಾಗುತ್ತಿದ್ದವು. ದೊಡ್ಡವರಿಂದ ಸಣ್ಣವರಿಗೂ, ಆ ಹರಿವ ನೀರಿನೊಂದಿಗಿನ ಆಟ,ಮಳೆ ನಿಂತಾಗ ನೀರಿಗೆ ಹರಿದು ಬಂದ ಮರಳಿನ ಮೇಲೆ ಮನೆ ಕಟ್ಟುವ ಆಟ, ನಾನಂತೂ ಕಾಲಿಟ್ಟು ಅದರ ಮೇಲೆ ಹಸಿ ಮರಳನ್ನ ಒತ್ತಿ ಒತ್ತಿ ಮನೆ ಕಟ್ಟಿ,ಸುತ್ತ ಮರಳಿನ ಕಾಂಪೌಂಡ್ ಕಟ್ಬಿಡ್ತಿದ್ದೆ, ಅದಕ್ಕೊಂದು ಕಡ್ಡಿಯ ಬಾಗಿಲು,ನನ್ನ ಕನಸಿನ ಮನೆ ಅದು,ಒಬ್ಬನೇ ಕೂತು ದೃಷ್ಟಿಸಿ ನೋಡುತ್ತಿದ್ದೆ,ಬಹಳ ಖುಷಿಯಾಗೋದು, ಅದೆಂತಹ ಖುಷಿಯೆಂದ್ರೆ,
ನಾನು ಬಹುಕೋಟಿ ಮನೆ ಕಟ್ಟಿದರೂ ಸಿಗಲಾರದಂತದ್ದು,ಬೆಲೆಗೆ ನಿಲುಕಲಾರದ ಮನೆಯದು, ಯಾರಾದ್ರೂ ಗೆಳೆಯರು ಮರೆಯಾಗಿ ಬಂದು,ಅದನ್ನು ಕೆಡವಿ ಬೀಳಿಸಿ ಬಿಡೋರು, ಓಡಿಸಿಕೊಂಡ್ಹೋಗಿ ಒಡೆದು ಬಿಡ್ತಿದ್ದೆ,ದುಃಖಿಸುತ್ತಿದ್ದೆ,ಮತ್ತೇ ಕಟ್ಟುವ ಪ್ರಯತ್ನ,ಅದೇನೋ ಗೊತ್ತಿಲ್ಲ,ನನ್ನ ಈ ನೆಲದ ಕಲ್ಲು,ಮಣ್ಣು,ಮರಳು,ನೀರು, ಗಿಡ,ಮರ,ಕೋಟೆ,ಕಾಡು, ಮನಸ್ಸಿನ ಮಾತುಗಳು,ಗೆಳೆತನ, ಸಂಬಂಧಗಳು ಎಲ್ಲವೂ ನನ್ನೊಳಗೆ ಬೆಚ್ಚಗಿದ್ದೇ ಕಾವಿಟ್ಟು ಬೆಸೆದುಕೊಂಡಿವೆ.
ನನ್ನ ಗೆಳೆಯರೊಂದಿಗಿನ ಲಗೋರಿ,ಲಡ್ಡು ಲಡ್ಡು ತಿಮ್ಮಣ್ಣ,ಗುಲ್ಟೋರಿಯ, ಗಾಳಿಪಟ,ಟೈರ್ಗಾಲಿ,ಸೈ ಗೋಲಿ,ಟಿಕ್ಕಿ,ಜೀರಂಗಿ, ಕೊಕ್ಕೋ, ಕಬಡ್ಡಿ,ಕಳ್ಳಪೋಲಿಸ್, ಕುಂಟಾಬಿಲ್ಲೆ,ಕಪ್ಪೆಆಟ,ಕಣ್ಣು ಮುಚ್ಚಾಲೆ,ಉಯ್ಯಾಲೆ, ಮರಕೋತಿ,ಬುಗುರಿ, ಚೆಂಡಾಟ,ರತ್ತೊ ರತ್ತೋ ರಾಯನ ಮಗಳೇ,ಚಿನ್ನಿದಾಂಡು ಇನ್ನೂ ಮುಂತಾದವುಗಳು.ಐವತ್ತು ವರ್ಷಗಳ ಹಿಂದಿನ ಬಾಲ್ಯಕ್ಕೆ ಕಚುಗುಳಿಯಿಟ್ಟು, ಮುದಕೊಟ್ಟು,ಖುಷಿ ಲೋಕಕ್ಕೆ ಕರೆದೊಯ್ಯುತ್ತಿದ್ದ ಅಮೂಲ್ಯ ನೆನಪುಗಳವು.ಇವು ಇತ್ತೀಚೆಗೆ, ಒಮ್ಮೊಮ್ಮೆ ಬಂದು ಹಾಗೆ ಸರಿದಾಗ,ಆ ದಿನಗಳು ಮತ್ತೆ ಗರಿಗೆದರಿಕೊಳ್ಳುತ್ತವೆ, ಓಡುವುದು,ಮುಟ್ಟುವುದು, ಹತ್ತುವುದು,ಜಿಗಿಯುವುದು, ಕುಂಟುವುದು,ಒಂದೇ ಎರಡೇ,ತುಳಿದ ಹಾದಿಯನ್ನ ತಿರುಗಿ ನೋಡುತ್ತ ಬಂದಿದ್ದರಿಂದಲೇ,ಜೋಗಿ ಜಾಡು ಈ ದಿನಗಳಲ್ಲಿ ನನಗೆ ದೊರಕ್ಕಿದ್ದು,ಹಾಗೂ ದಕ್ಕಿದ್ದು,ನನ್ನ ಪಾಲಿಗೆ ಆರೋಗ್ಯದ ಜಾಡು,
ಪ್ರಕೃತಿಯಲ್ಲಿ ಅರಳುವ ಅಕ್ಷರದ ಗೂಡು,ಅನುಭವಿಗಳ ಸಾಂಗತ್ಯದ ಹೆಜ್ಜೆಗಳವು. ಗೆಳೆತನ ಹಾಗೂ ಸಂಬಂಧಗಳು,ಪ್ರತಿಯೊಬ್ಬರ ಸುತ್ತಲೂ,ಹತ್ತಾರು ದಿಕ್ಕುಗಳಲ್ಲಿ ಚಲಿಸುತ್ತಿರುತ್ತವೆ, ಸಂಪೂರ್ಣವಲದ್ದಿದ್ದರೂ ಮುಖವಾಡಗಳೇ, ಸ್ಪಟಿಕಗಳು ಬಹು ವಿರಳ.ಎಷ್ಟೇ ಹತ್ತಿರದ ಸಂಬಂಧ ಗೆಳೆತನವಿದ್ದರೂ, ಮುಡಿಗೇರಿರುವುದು ಕಡಿಮೆಯೇ,ಮಾತಾಡಿಸಿದ್ರೆ ಮರ್ಯಾದೆ ಹೋಗುತ್ತೆ ಅನ್ನುವ ಗುಣಗಳೇ,
ನಮ್ಮ ಸುತ್ತ ಮುತ್ತಲಿನ ಹುಲುಸಾದ ಬೆಳೆಗಳು,ಅವುಗಳಿಗೆ ದುಃಖಿಸುವುದಕ್ಕಿಂತ, ಸಕರಾತ್ಮಕವಾಗಿ ನೋಡಿ, ಅವೇ ಚೈತನ್ಯದ ಚಿಲುಮೆ, ಕತ್ತಲಿಗೆ ಎದುರಾಗುವ ಬೆಳಕುಗಳವು,ಆಸ್ತಿ, ಅಂತಸ್ತುಗಳ ಜೊತೆ ಸಂಬಂಧಗಳು ಬೆಳೆಯುತ್ತವೆ, ಧರಿಸುವ ಬಟ್ಟೆ, ಆಭರಣಗಳೇ, ಇಂತಹವರೊಳಗೆ ನಿಮ್ಮ ಗೌರವವನ್ನೂ ಹೆಚ್ಚಿಸಬಿಡಹುದು, ಆತ್ಮರತೀಯ ಅನುಭಾವಕ್ಕೆ ಯಾರು ಸರಿಯುವುದಿಲ್ಲ.
ಬಿ.ತಿ ಅವರ ಜೊತೆ,ಅನೇಕ ಬಾರಿ ಇಂತಹ ವಿಚಾರಗಳನ್ನ ಇಬ್ಬರೇ ಕುಳಿತಾಗ ಹಂಚಿಕೊಂಡಿದ್ದೇವೆ.ಹಾಸ್ಯದ ತುಣುಕಾಗಿ ನಕ್ಕಿದ್ದೇವೆ. ಗೆಳೆತನದ ಬಗ್ಗೆ,ಅವರು ಹೇಳುತ್ತಿದ್ದ ಒಂದು ಮಾತು, ಇಂದಿಗೂ ನನ್ನನ್ನ ಬಿಡದೇ ಕಾಡಿದೆ.
ಕುಮಾರ್ ಈ ವಯಸ್ಸಿನವರೆಗೂ,ನನಗೆ ಒಬ್ಬ ಹೃದಯ ಗೆಳೆಯ ಸಿಗಲಿಲ್ಲ ಅಂತ ಹೇಳುತ್ತಲೇ, ಅಂತವರೊಬ್ಬರು ಸಿಕ್ರೆ ಬಂಗಾರದ ದಾರದಲ್ಲಿ ಕಟ್ಕೊಂಡು ಜೊತೆಗಿರಬೇಕು ಅಂತ ಹೇಳೋರು.
ಅವರ ಗೆಳೆತನದ ಗುಂಪೇನು ಕಮ್ಮಿ ಇರಲಿಲ್ಲ,ಜೊತೆಗ್ಹೋದ ಸಂದರ್ಭಗಳಲ್ಲೆಲ್ಲಾ ಬಹುತೇಕರನ್ನು ಪರಿಚಯಿಸಿದ್ದಾರೆ,ಸಾಹಿತ್ಯ ಚಿಂತನೆಗಳ ಜೊತೆ ಓಡಾಡಿಕೊಂಡಿದ್ದವರೇ,ನಾ ಕಂಡ ಹಾಗೆ ಅವರೆಲ್ಲಾ ಉತ್ತಮರೆ,ಆದರೂ ಅವರೊಳಗೊಬ್ಬ ಹೃದಯ ಗೆಳೆಯ ಅವರಿಗಿರ್ಲಿಲ್ಲ,ಹಾಗಾದ್ರೆ ಬಿ.ತಿ ಹುಡುಕುತ್ತಿದ್ದ ಆ ಗೆಳೆಯ ಯಾರು?ಇದು ನನ್ನ ಪ್ರಶ್ನೆಯಲ್ಲ,ಸಮಸ್ತಕ್ಕೆ ಬಿಟ್ಟ ವಿಚಾರ.
ನಾನು ಇನ್ನೊಬ್ಬರನ್ನು ಹುಡುಕುವ ಬದಲು, ಇನ್ನೊಬ್ಬರಿಗೆ ನಾನು ಅಂತಹ ಗೆಳೆಯನೇ?ಈ ಪ್ರಶ್ನೆ ಪ್ರತಿಯೊಬ್ಬರಲ್ಲೂ ಬಂದ್ರೆ, ಗೆಳೆತನಗಳು ಮತ್ತಷ್ಟು ಗೌರವದಿಂದ ಜೀವಿಸುತ್ತವೆ. ಸಂಬಂಧಗಳು ಅಷ್ಟೇ ಇದರ ಹೊರತಾಗಿರುವುದಿಲ್ಲ. ಇತ್ತೀಚಿಗೆ ಸಂಬಂಧಗಳಲ್ಲಿ ಘಟಿಸಿದ್ದು,ಕೆಲಸಕ್ಕೆ ಬಾರದ ಒಂದು ಬೆಳ್ಳಿಯ ತುಂಡು,ಬದುಕಿನ ಮೌಲ್ಯಕ್ಕೆ ಎಡತಾಕಿ ಕದಲಿಸಿ,ಬೆಚ್ಚಿಸಿ, ದುರುಗುಟ್ಟಿದೆ.
ಹೊಸ ಅನುಭವಕ್ಕೆ ಸಾಕ್ಷಿಯಾದದ್ದು, ಒಂದೇ ಬಳ್ಳಿಯ,ಆ ದಿನದ ಮೊಗ್ಗುಗಳ ಸಾಮ್ಯತೆಗೂ, ಇಂದಿಗೂ ಬಹು ಅಜಗಜಾಂತರವಿದೆ. ಎಲ್ಲವೂ ಒಂದರ್ಥದಲ್ಲಿ ಬಳ್ಳಿಗಂಟಿದ ಸಂಬಂಧಗಳೇ.
ಮುಂದುವರೆಯುವುದು…..
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.