ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಧರ್ಮಸ್ಥಳದಲ್ಲಿ ಎರಡು ಗುಂಪುಗಳ ನಡುವೆ ನಡೆದಿರುವ ಘರ್ಷಣೆ ಕುರಿತು ತನಿಖೆ ಮಾಡಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ತಲೆಬುರಡೆ ಪ್ರಕರಣ ಸಂಬಂಧ ಎರಡು ಗುಂಪುಗಳ ಮಧ್ಯೆ ಘರ್ಷಣೆ ಆಗಿದೆ. ಯಾಕಾಯ್ತು? ಕಾರಣ ಏನು? ಉದ್ದೇಶವೇನು? ಇದನ್ನು ಪರಿಶೀಲಿಸಿ ತನಿಖೆ ಮಾಡಲು ಹೇಳಿದ್ದೇವೆ ಎಂದು ಗೃಹ ಸಚಿವರು ತಿಳಿಸಿದರು.
ಧರ್ಮಸ್ಥಳದಲ್ಲಿ ಏನೋ ಸಂಘರ್ಷ ನಡೆಯುತ್ತಿದೆ. ಯಾವ ಕಾರಣಕ್ಕೆ ಆಗ್ತಿದೆ ಗೊತ್ತಿಲ್ಲ. ಒತ್ತಾಯ ಬಂದಿದ್ದಕ್ಕೆ ಎಸ್ಐಟಿ ಮಾಡಲಾಗಿತ್ತು. ಪರಿಶೀಲನೆ ಮಾಡಿ ಎಚ್ಚರಿಕೆಯಿಂದ ರಚಿಸಿದ್ದೆವು. ವ್ಯಕ್ತಿ ಆರೋಪದ ಮೇಲೆ ತನಿಖೆ ನಡೆದಿದೆ. 13 ಸ್ಥಳಗಳಲ್ಲಿ ಹೆಣ ಹೂತಿದ್ದೆ ಎಂದಿದ್ದ. ಅದರಂತೆ ಅಲ್ಲಿ ತನಿಖೆ ನಡೆಯುತ್ತಿದೆ. ಒಂದು ಕಡೆ ಅಸ್ಥಿಪಂಜರ ಸಿಕ್ಕಿದೆ. ಇದರ ಹಿನ್ನೆಲೆ ಘರ್ಷಣೆ ಸಂಭವಿಸಿದೆ ಎಂದು ಡಾ.ಪರಮೇಶ್ವರ್ ತಿಳಿಸಿದರು.
ಎರಡು ಗುಂಪುಗಳ ಮೇಲೆ ಕೇಸ್ ಮತ್ತು ಕೌಂಟರ್ ಕೇಸ್ ಆಗಿದೆ. ಎಲ್ಲ ಪರಿಶೀಲನೆ ಮಾಡಿ ತನಿಖೆ ನಡೆಸುತ್ತಾರೆ. ತನಿಖೆಯ ನಂತರ ಯಾವ ರೀತಿ ಕ್ರಮ ಆಗಬೇಕು, ಅದರಂತೆ ಎಸ್ಐಟಿಯವರು ತೆಗೆದುಕೊಳ್ಳುತ್ತಾರೆ. ಸತ್ಯ ಹೊರಗೆ ಬರಬೇಕು ಅನ್ನೋದು ಮುಖ್ಯ. ಈಗಲೇ ಎಸ್ಐಟಿಯವರನ್ನು ಪ್ರಶ್ನಿಸೋದು, ತನಿಖೆ ಸರಿಯಾಗಿ ನಡೆದಿಲ್ಲ ಅಂತ ಹೇಳೋದು ಸರಿಯಲ್ಲ ಎಂದು ಗೃಹ ಸಚಿವರು ತೀಕ್ಷ್ಣವಾಗಿ ಹೇಳಿದರು.
ನಮ್ಮ ಪೊಲೀಸರು ಸಮರ್ಥರಿದ್ದಾರೆ. ಎಲ್ಲ ರೀತಿಯಲ್ಲೂ ತನಿಖೆ ಮಾಡುತ್ತಾರೆ. ಅಸ್ಥಿ ಪಂಜರಗಳು ಸಿಕ್ಕಿದ ಬಗ್ಗೆ ತನಿಖೆ ಆಗುತ್ತಿದೆ. ಎಸ್ಐಟಿ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತಾರೆ ಎಂದು ಸಚಿವರು ತಿಳಿಸಿದರು.

