ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸರ್ಕಾರಿ ಶಾಲೆಗಳ ಪರೀಕ್ಷಾ ಫಲಿತಾಂಶ ಖಾಸಗಿ ಶಾಲೆಗಳಿಗಿಂತ ಕಡಿಮೆ ಇರುವುದಕ್ಕೆ ಯಾರನ್ನು ದೂಶಿಸಬೇಕು ಎಂದು ಆದಿಜಾoಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿಎಸ್ ಮಂಜುನಾಥ್ ಪ್ರಶ್ನಿಸಿದರು.
ನಗರದ ನೆಹರೂ ಮೈದಾನದಲ್ಲಿ ಡಾ ಬಾಬು ಜಗಜೀವನ್ ರಾಂ ಗ್ರಾಮೀಣ ಮತ್ತು ನಗರಾಭಿವೃದ್ಧಿ ಹಾಗೂ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನುಭವಿ ಮತ್ತು ಬುದ್ದಿವಂತ ಶಿಕ್ಷಕರಿಂದ ಆಯ್ಕೆಗೊಂಡ ಸರ್ಕಾರಿ ಶಾಲೆಯ ಶಿಕ್ಷಕರು ಇಂದು ಕಡಿಮೆ ಫಲಿತಾಂಶ ಕೊಡುತ್ತಿದ್ದಾರೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಖಾಸಗಿ ಶಾಲೆಗಳ ಶಿಕ್ಷಕರು ಅತ್ಯುತ್ತಮ ಫಲಿತಾಂಶ ಬರಲು ಕಾರಣರಾಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣಗಳೇನು ಎಂಬುದರ ಬಗ್ಗೆ ಸರ್ಕಾರ ಗಮನಹರಿಸಬೇಕಾಗಿದೆ ಎಂದು ಮಂಜುನಾಥ್ ಆಗ್ರಹ ಮಾಡಿದರು.
ರಾಜಕಾರಣಿಗಳ ಮತ್ತು ಸರ್ಕಾರಿ ಅಧಿಕಾರಿಗಳ ಬಹುತೇಕ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿಲ್ಲ. ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮಕ್ಕಳನ್ನು ಸಾರಾ ಸಗಟಾಗಿ ಸರ್ಕಾರಿ ಶಾಲೆಯಲ್ಲಿಯೇ ಓದಿಸುವಂತೆ ಆದೇಶ ಮಾಡಿದರೆ ಮಾತ್ರ ಸರ್ಕಾರಿ ಶಾಲೆಗಳ ಸ್ಥಿತಿಗತಿ ಸುಧಾರಿಸುತ್ತದೆ. ಸರ್ಕಾರಗಳು ಸಹ ಕನ್ನಡ ಶಾಲೆಗಳ ಪ್ರಗತಿಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು. ವರ್ಷಪೂರ್ತಿ ಕನ್ನಡದ ಹಬ್ಬ ಆಚರಿಸುವ ದಿನಗಳು ಬರುವ ಕಾಲ ದೂರವೇನಿಲ್ಲ ಎಂದರು.
ಮಾದಾರ ಚನ್ನಯ್ಯ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ ಮತ್ತು ಶಕ್ತಿಯಿದ್ದು ಅದನ್ನು ಎಂದೆಂದಿಗೂ ಅಳಿಸಲಾಗದು. ಕನ್ನಡಿಗರೆಲ್ಲರೂ ತಮ್ಮ ದೈನಂದಿನ ಬದುಕು, ವ್ಯವಹಾರದಲ್ಲಿ ಅತೀ ಹೆಚ್ಚಿನದಾಗಿ ಕನ್ನಡ ಭಾಷೆ ಬಳಸುವ ಮೂಲಕ ಕನ್ನಡ ಪ್ರಜ್ಞೆಯನ್ನು ಜಾರಿಯಲ್ಲಿಡಬೇಕು. ಕನ್ನಡ ಜಾಗೃತಿ ಕಾರ್ಯಕ್ರಮಗಳು ಹೆಚ್ಛೆಚ್ಚು ಆಗುವ ಮೂಲಕ ಕನ್ನಡದ ಏಳ್ಗೆ ಮತ್ತು ಬೆಳವಣಿಗೆಗೆ ಪ್ರತಿಯೊಬ್ಬ ಕನ್ನಡಿಗನೂ ಶ್ರಮಿಸಬೇಕಿದೆ ಎಂದರು.
ಕಾರ್ಯಕ್ರಮ ಆಯೋಜಕ ಜಿ ಎಲ್ ಮೂರ್ತಿ, ಮುಖಂಡರಾದ ವಿಜಯ ಕುಮಾರ್, ಡಾ. ಸುಜಾತಾ, ಮಾನಸಗೌಡ, ರಜಿಯಾ ಸುಲ್ತಾನ್, ಗೌಡಪ್ಪ, ಕೃಷ್ಣಮೂರ್ತಿ, ನಾಗರಾಜ್, ಚಂದ್ರು ಬ್ಯಾರಮಡು, ಕರ್ಣಕುಮಾರ್, ನಂದಕುಮಾರ್, ಮಹಾಂತೇಶ್, ವಿಶ್ವನಾಥ್, ಸದಾನಂದ್, ಲೋಕೇಶ್, ಮಹೇಶ್, ಶಿವಲಿಂಗಪ್ಪ ಮುಂತಾದವರು ಹಾಜರಿದ್ದರು.