ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದಲಿತರು ಹಬ್ಬ, ಹರಿದಿನ, ಜಾತ್ರೆಗೆ ದುಂದು ವೆಚ್ಚ ಮಾಡದೆ, ಖರ್ಚನ್ನು ಮಿತಗೊಳಿಸಿ, ಮಕ್ಕಳಿಗೆ ಶಿಕ್ಷಣ ನೀಡಿ ಮಕ್ಕಳನ್ನು ತನ್ನ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಕರೆ ನೀಡಿದರು.
ತಾಲ್ಲೂಕಿನ ಸಕ್ಕರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ಬಾಬುಜಗಜೀವನ್‌ರಾಂ ಸಾಂಸ್ಕೃತಿಕ ಕಲಾ ಕ್ರೀಡಾ ಯುವಕ ಸಂಘ ಸಕ್ಕರ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬುಜಗಜೀವನ್‌ರಾಂ ರವರ ೧೧೮ನೇ ಜನ್ಮ ದಿನಾಚರಣೆಯನ್ನು ಹಾಗೂ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ರವರ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ದಮನಿತರು, ಶೋಷಿತರು, ಮೊದಲು ಮದ್ಯಪಾನ, ಧೂಮಪಾನ ಬಿಡಬೇಕು, ಅಕ್ಷರ ಕಲಿತು ಸುಸಂಸ್ಕೃತ ನಾಗರೀಕರಾಗಿ ಬಾಳಬೇಕು, ಹಳ್ಳಿಗಳಲ್ಲಿ ಎಲ್ಲಾ ಸಮುದಾಯದವರೊಂದಿಗೆ ಸೌಹಾರ್ದತೆ ಮತ್ತು ಐಕ್ಯತೆಯಿಂದ ಬದುಕಬೇಕು. ಡಾ. ಬಿ.ಆರ್.ಅಂಬೇಡ್ಕರ್‌ರವರು ಹೇಳಿದಂತೆ, ಸ್ವ-ಸುಧಾರಣೆ, ಸ್ವ-ನಂಬಿಕೆ, ಸ್ವ-ಏಳಿಗೆ, ಸ್ವಾವಲಂಬನೆಯ ಬದುಕನ್ನು ಸಾಗಿಸಿ ಶಿಕ್ಷಣ ಸಂಘಟನೆ ಮತ್ತು ಹೋರಾಟ ಕ್ಕೆ ಹೆಚ್ಚು ಒತ್ತು ಕೊಡಬೇಕು.
ತಮ್ಮ ಮತಶಕ್ತಿಯಿಂದ ಉತ್ತಮ ಅಧಿಕಾರಪಡೆದು, ಗ್ರಾಮ ಪಂಚಾಯಿತಿ, ವಿಧಾನಸಭೆ, ಲೋಕಸಭೆ, ರಾಜ್ಯಸಭೆ ಪ್ರವೇಶ ಪಡೆದು, ಅದರ ಮೂಲಕ ನಿರ್ಗತಿಕರಿಗೆ, ಅಸಹಾಯಕರಿಗೆ ವೃದ್ಧರಿಗೆ ಸಹಾಯ ಮಾಡಬೇಕು. ಅವುಗಳ ಮೂಲಕ ಅಂಬೇಡ್ಕರ್ ಹಾಗೂ ಡಾ. ಬಾಬುಜಗಜೀವನ್‌ರಾಂ ರವರ ತತ್ವ ಆದರ್ಶಗಳನ್ನು ಇಂದಿನ ಯುವಜನತೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕೆ.ಪಿ.ಸಿ.ಸಿ ಸದಸ್ಯ ಕಂದಿಕೆರೆ ಸುರೇಶ್‌ಬಾಬು ಮಾತನಾಡಿ, ತಾಲ್ಲೂಕು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್.ಈರಲಿಂಗೇಗೌಡ ಮಾತನಾಡಿ, ಡಾ. ಅಂಬೇಡ್ಕರ್‌ರವರು ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿಯನ್ನು ನೀಡಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಹಾಗೆ, ದೇಶದಲ್ಲಿ ವಾಸಿಸುವ ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ, ನೀಡಿ ಹಿಂದುಳಿದ ವರ್ಗ ಹಾಗು ಮಹಿಳೆಯರಿಗೆ ವಿಶೇಷ ಮೀಸಲಾತಿಯನ್ನು ನೀಡುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿ.ಡಿ.ಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಾಗಮಣಿ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಎಸ್.ಕೆ.ನಾಗರಾಜು ಸಕ್ಕರ, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಜಿ.ದೇವರಾಜು, ಎಸ್.ಪಿ.ದಯಾನಂದ, ನೇತ್ರಾವತಿ ರಂಗಯ್ಯ, ನಾಗರಾಜ್, ರಾಜು, ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಸಮಿತಿಯ ಎಸ್.ಸಿ. ಘಟಕದ ಅಧ್ಯಕ್ಷ ಜಿ.ಎಲ್.ಮೂರ್ತಿ, ಯುವ ಮುಖಂಡರಾದ ಎಸ್.ಆರ್.ಭೂತೇಶ್, ಕಲ್ಲಹಟ್ಟಿ ಹರೀಶ್, ಕೃಷ್ಣಮೂರ್ತಿ, ಕೆ.ಪಿ. ಶ್ರೀನಿವಾಸ್,
ದ್ವಾರನಕುಂಟೆ ಲಕ್ಷ್ಮಣ್, ಪ್ರದೀಪ್, ಹೆಚ್.ಎಸ್. ಮಾರುತೇಶ್, ಎಸ್.ಎನ್.ರಘುನಾಥ್, ಎಸ್.ಆರ್.ರಂಗನಾಥಪ್ಪ, ಎಸ್.ಆರ್.ಮಂಜುನಾಥ್, ಎಸ್.ಎನ್.ರಂಗಯ್ಯ, ಎಸ್.ಆರ್.ರಂಗರಾಜು, ಎಸ್.ಎ. ನಟರಾಜು , ಎಸ್.ಎ. ತಿಪ್ಪೇಸ್ವಾಮಿ, ಡಿವಿ ಫಯಾಜ್, ಎಸ್.ಟಿ.ರಾಘವೇಂದ್ರ, ಎಸ್.ಪಿ.ತಿಪ್ಪೇಸ್ವಾಮಿ, ಎಸ್.ಟಿ.ದಯಾನಂದ, ಎಸ್.ಟಿ.ಕೃಷ್ಣಮೂರ್ತಿ, ಯಕಾಶಿ, ಮುಕಂದಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.