ಮಾದಿಗರ ಹೆಸರಿನಲ್ಲಿ ಸಾವಿರಾರು ಸಂಘಟನೆಗಳು ಅಧಿಕಾರಿಗಳ ಹೆದರಿಸಿ ಬ್ಲಾಕ್‌ಮೇಲ್ ಮಾಡುತ್ತಿವೆ-ಜಿಎಸ್ಎಂ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚುನಾವಣೆ ಬಂದಾಗ ನೀವುಗಳು ಯ್ಯಾವ್ಯಾವ ಪಕ್ಷದಲ್ಲಿ ಬೇಕಾದರೂ ಇದ್ದುಕೊಂಡು ರಾಜಕೀಯ ಮಾಡಿಕೊಳ್ಳಿ. ಆದರೆ ಸಮಾಜದ ಪ್ರಶ್ನೆ ಬಂದಾಗ ಅಪಸ್ವರ ಬೇಡ ಎಲ್ಲರೂ ಒಂದಾಗಿ ಎಂದು ಸಂಸದ ಗೋವಿಂದ ಕಾರಜೋಳ ಮಾದಿಗ ಜನಾಂಗದವರಲ್ಲಿ ಮನವಿ ಮಾಡಿದರು.

ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದಿಂದ ತ.ರಾ.ಸು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ ಹಾಗೂ ಸಮುದಾಯದ ಪ್ರತಿಭಾವಂತ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸುಪ್ರೀಂಕೋರ್ಟ್‌ನ ಏಳು ನ್ಯಾಯಾಧೀಶರ ಪೀಠ ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯಗಳಿಗಿದೆಯೆಂದು ತೀರ್ಪು ನೀಡಿರುವುದು ಸಂವಿಧಾನದ ತಿದ್ದುಪಡಿಯಿದ್ದಂತೆ ಎಲ್ಲರೂ ಪಾಲಿಸಬೇಕು. ಮೂರು ದಶಕಗಳ ಕಾಲ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬಂದವರು ಈಗ ಸುಪ್ರೀಂಕೋರ್ಟ್ ತೀರ್ಪು ಸರಿಯಿಲ್ಲ ಎಂದು ಗೊಂದಲ ಸೃಷ್ಠಿಸುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಅನಿರೀಕ್ಷಿತವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ನನ್ನನ್ನು ನೀವುಗಳೆಲ್ಲಾ ಸೇರಿಸಿ ಗೆಲ್ಲಿಸಿದ್ದೀರಿ. ನಿಮ್ಮಗಳ ಋಣ ನನ್ನ ಮೇಲಿದೆ. ನ್ಯಾಯಯುತವಾದ ಹಕ್ಕುಗಳಿಗೆ ಹೋರಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಮಕ್ಕಳು ತೊಂದರೆಯನುಭವಿಸಬೇಕಾಗುತ್ತದೆ. ಮಾದಿಗ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯಿರುವುದು ನೋವಿನ ಸಂಗತಿ. ಪರಿಶಿಷ್ಟ ಜಾತಿಯಲ್ಲಿನ ನೂರ ಒಂದು ಜಾತಿಗಳಿಗೂ ನ್ಯಾಯ ಒದಗಿಸುವುದು ನನ್ನ ಕರ್ತವ್ಯ. ಒಳ ಮೀಸಲಾತಿ ಜಾರಿಯಿಂದ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಅನುಷ್ಟಾನಗೊಳಿಸುತ್ತದೆ. ಇಲ್ಲವಾದಲ್ಲಿ ಇನ್ನು ಮೂವತ್ತು ವರ್ಷಗಳ ಕಾಲ ಕಾಯಬೇಕಾಗುತ್ತದೆಂದು ಮಾದಿಗ ಸಮುದಾಯವನ್ನು ಎಚ್ಚರಿಸಿದರು.

ಒಳ ಮೀಸಲಾತಿ ಜಾರಿಗೆ ಅಡ್ಡಿಪಡಿಸುತ್ತಿರುವವರು ಯಾರು ಎನ್ನುವುದು ಬಯಲಿಗೆ ಬರಲಿ. ನಿಮ್ಮ ಹೋರಾಟದ ಜೊತೆ ಸದಾ ನಾನಿರುತ್ತೇನೆ. ಯಾರಿಗೂ ಹೆದರುವ ಅಗತ್ಯವಿಲ್ಲ. ಇದುವರೆವಿಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಯಾವ ಮುಖ್ಯಮಂತ್ರಿಯೂ ಧೈರ್ಯ ಮಾಡಲಿಲ್ಲ. ಬಸವರಾಜ್‌ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಎಸ್ಸಿ.ಎಸ್ಟಿ.ಗಳಿಗೆ ಮೀಸಲಾತಿಯನ್ನು ಹೆಚ್ಚಿಸಿದರು. ರಾಜಕಾರಣಿಗಳಾದ ನಾವುಗಳು ಚುನಾವಣೆಯಲ್ಲಿ ಅನಿವಾರ್ಯವಾಗಿ ಪಕ್ಷದ ಕೆಲಸ ಮಾಡಬೇಕು. ಆದರೆ ನೀವುಗಳು ಮಾತ್ರ ಯಾರು ನಿಮಗೆ ನ್ಯಾಯ ಒದಗಿಸುತ್ತಾರೋ ಅಂತಹವರ ಪರವಾಗಿರಿ ಎಂದು ಮಾದಿಗ ಜನಾಂಗಕ್ಕೆ ಕರೆ ನೀಡಿದರು.

ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಕಳೆದ ನಲವತ್ತು ವರ್ಷಗಳ ಹಿಂದೆ ಯಾರಿಗೆ ಬೇಕಾದರೂ ಸರ್ಕಾರಿ ನೌಕರಿ ಸಿಗುತ್ತಿತ್ತು. ಆದರೆ ಈಗ ಶಿಕ್ಷಣ, ಉದ್ಯೋಗದಲ್ಲಿ ಪ್ರಬಲ ಸ್ಪರ್ಧೆಯಿದೆ. ಒಳ ಮೀಸಲಾತಿ ಜಾರಿಯಿಂದ ಮಾತ್ರ ಎಲ್ಲರಿಗೂ ನೌಕರಿ ಸಿಗಲು ಸಾಧ್ಯ. ಮೂವತ್ತು ವರ್ಷಗಳ ಸುಧೀರ್ಘ ಹೋರಾಟದ ಫಲವಾಗಿ ಸುಪ್ರೀಂಕೋರ್ಟ್ ಒಳ ಮೀಸಲಾತಿ ವಿಚಾರದಲ್ಲಿ ಐತಿಹಾಸಿಕ ತೀರ್ಪು ನೀಡಿ ಮಾದಿಗರ ಮನೆಯ ಕದ ತಟ್ಟುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಡ ಮಾಡದೆ ಅನುಷ್ಟಾನಗೊಳಿಸಬೇಕು. ಅಲ್ಲಿಯವರೆಗೂ ಯಾವುದೇ ಹುದ್ದೆಗಳಿಗೆ ನೇಮಕ ಮಾಡಬಾರದೆಂದು ಒತ್ತಾಯಿಸಿದರು.

ಬಡತನ, ಹಸಿವು ನಿವಾರಣೆಗೆ ಶಿಕ್ಷಣ ಅಸ್ತ್ರ ಎನ್ನುವುದನ್ನು ಮಾದಿಗ ಜನಾಂಗದ ಮಕ್ಕಳು ನೆನಪಿನಲ್ಲಿಟ್ಟುಕೊಳ್ಳಬೇಕು. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ನಾಲ್ಕು ನೂರು ವಸತಿ ಶಾಲೆಗಳು, ಎಂಟು ನೂರು ಹಾಸ್ಟೆಲ್‌ಗಳನ್ನು ಕಟ್ಟಿಸಿದ್ದೇನೆ. ಇದುವರೆವಿಗೂ ರಾಜ್ಯದಲ್ಲಿ ಯಾರೂ ಮಾಡಿಲ್ಲ. ಎಸ್ಸಿ.ಪಿ. ಟಿ.ಎಸ್ಪಿ. ಯೋಜನೆಯಡಿ ಕೋಟ್ಯಾಂತರ ರೂ.ಗಳನ್ನು ಮಂಜೂರು ಮಾಡಿದ್ದೇನೆ. ಎಲ್ಲಾ ಜಾತಿ ಜನಾಂಗಕ್ಕೂ ಅಭಿವೃದ್ದಿ ನಿಗಮಗಳನ್ನು ತೆರೆದು ಅನುದಾನ ನೀಡಿರುವೆ. ಮನೆ, ಭೂಮಿ ಇಲ್ಲದವರಿಗೂ ಮುಂದಿನ ದಿನಗಳಲ್ಲಿ ವಸತಿ ಸಿಗುವಂತಾಗಬೇಕೆಂದರು.

ಮಾಜಿ ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ಸಿಗಲಿ ಎನ್ನುವ ಕಾರಣಕ್ಕಾಗಿ ಮೀಸಲಾತಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ತಿರಸ್ಕಾರ, ಶೋಷಣೆಗೊಳಗಾದವರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ರಾಜಕೀಯವಾಗಿ ಶಕ್ತಿ ತುಂಬಬೇಕಾಗಿದೆ. ಅಧಿಕಾರಿಗಳು ಧೈರ್ಯ ಮಾಡಿ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘ ಕಟ್ಟಿರುವುದು ಮನಸ್ಸಿಗೆ ತುಂಬಾ ಖುಷಿಯಾಗಿದೆ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳು ಬಲಿಷ್ಟರ ಕೈಗೆ ಸಿಕ್ಕಿರುವುದರಿಂದ ಮಾದಿಗ ಸಮಾಜದ ಮಕ್ಕಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಸಿ.ಇ.ಟಿ.ಯಲ್ಲಿಯೂ ಭ್ರಷ್ಟಾಚಾರ. ಹಾಗಾಗಿ ಒಳ ಮೀಸಲಾತಿಯನ್ನು ಗಂಭೀರವಾಗಿ ಪರಿಗಣಿಸಿ ಹೋರಾಟಕ್ಕೆ ಇಳಿಯದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ. ಶಿಕ್ಷಣದಲ್ಲಿ ಮಕ್ಕಳು ಏಕ್ರಾಗತೆ, ಬದ್ದತೆಯನ್ನಿಟ್ಟುಕೊಳ್ಳಬೇಕು. ಶಿಕ್ಷಣದ ಜೊತೆ ತಾಂತ್ರಿಕ ಜ್ಞಾನವಿರಬೇಕು. ಒಳ ಮಿಸಲಾತಿಗಾಗಿ ಬೀದಿಗಿಳಿದು ಹೋರಾಡೋಣ ಎಂದು ಕರೆ ಕೊಟ್ಟರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಸುಪ್ರೀಂಕೋರ್ಟ್ ಒಳ ಮೀಸಲಾತಿ ಕುರಿತು ಮಹತ್ವದ ತೀರ್ಪು ನೀಡಿದೆ. ಹೋರಾಟದ ಮೂಲಕ ಪಡೆದುಕೊಳ್ಳಬೇಕಾಗಿದೆ. ಸಹೋದರ ಸಮಾಜದವರು ಒಳ ಮೀಸಲಾತಿಯಿಂದ ಅನ್ಯಾಯವಾಗುತ್ತಿದೆ ಎಂದು ಅವರವರೆ ಮಾತನಾಡಿಕೊಳ್ಳುತ್ತಿರುವುದರಲ್ಲಿ ಅರ್ಥವಿಲ್ಲ. ಪರಿಶಿಷ್ಟ ಜಾತಿಯಲ್ಲಿನ ನೂರೊಂದು ಜಾತಿಗಳಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಸನ್ಮಾನ ಸ್ವೀಕರಿಸಿ ಮಾತನಾಡಿ ರಾಜ್ಯದಲ್ಲಿ ಮಾದಿಗರ ಸಂಘಟನೆ ಕ್ಷೀಣಿಸುತ್ತಿದೆ. ಮಾದಿಗರ ಹೆಸರಿನಲ್ಲಿ ಹುಟ್ಟಿಕೊಂಡಿರುವ ಸಾವಿರಾರು ಸಂಘಟನೆಗಳು ಅಧಿಕಾರಿಗಳನ್ನು ಹೆದರಿಸಿ ಬ್ಲಾಕ್‌ಮೇಲ್ ಮಾಡುತ್ತಿವೆ. ಜೀವನ ಬದುಕು ಕಟ್ಟಿಕೊಳ್ಳುವ ಕೆಲಸವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾದಿಗ ಜನಾಂಗದ ರಾಜಕಾರಣಿಗಳ ಶಕ್ತಿ ಮಾದಿಗರ ಉದ್ದಾರಕ್ಕೆ ಬಳಕೆಯಾಗಬೇಕಿದೆ. ಇಂದಲ್ಲ ನಾಳೆ ಒಳ ಮೀಸಲಾತಿ ಸಿಕ್ಕೆ ಸಿಗುತ್ತದೆ. ಮೊದಲು ಅಸೂಯೆ ಬಿಟ್ಟು ಮಾದಿಗರು ಒಂದಾಗಿ ಎಂದು ಕಿವಿಮಾತು ಹೇಳಿದರು.

ಹಿರಿಯೂರು ಆದಿಜಾಂಬವ ಗುರುಪೀಠದ ಷಡಕ್ಷರಮುನಿ ಸ್ವಾಮೀಜಿ  ಆಶೀರ್ವಚನ ನೀಡಿ ರಾಜಕೀಯ ದೊಂಬರಾಟ, ಇಬ್ಬಗೆಯ ಮಾತುಗಳಿಂದ ಮಾದಿಗ ಸಮುದಾಯಕ್ಕೆ ಧಕ್ಕೆಯಾಗುತ್ತಿದೆ. ಒಳ ಮೀಸಲಾತಿ ಕುರಿತು ಮಾದಿಗ ಸಮುದಾಯದ ರಾಜಕಾರಣಿಗಳು ಸದನದಲ್ಲಿ ಧ್ವನಿ ಎತ್ತಬೇಕು. ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಡಬೇಕಾಗುತ್ತದೆ. ಅದಕ್ಕಾಗಿ ಮೊದಲು ಮಾದಿಗ ಸಮಾಜದ ಮಕ್ಕಳು ಶಿಕ್ಷಣವಂತರಾಗಬೇಕೆಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಕೆ.ಜಿ.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗ ಕಾರ್ಯಪಾಲಕ ಇಂಜಿನಿಯರ್ ಎಲ್.ಹನುಮಂತಪ್ಪ, ನಿವೃತ್ತ ಜಂಟಿ ನಿರ್ದೇಶಕ ಎಂ.ರೇವಣಸಿದ್ದಪ್ಪ, ಖಜಾನೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಿ.ಜಯಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ನಿವೃತ್ತ ಕಾರ್ಯಪಾಲಕ ಅಭಿಯಂತರ ದೇವರಾಜ್ ಜಿ.ಆರ್., ಬಿ.ಸಿ.ಎಂ.ಇಲಾಖೆ ನಿವೃತ್ತ ಅಧಿಕಾರಿ ಡಿ.ಟಿ.ಜಗನ್ನಾಥ್, ಡಾ.ಸತೀಶ್, ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್, ನಿವೃತ್ತ ಕೆ.ಎ.ಎಸ್. ಅಧಿಕಾರಿ ಬಿ.ಎಸ್.ಪುರುಷೋತ್ತಮ್ ಸೇರಿದಂತೆ ಮಾದಿಗ ಸಮುದಾಯದ ಅನೇಕ ಮುಖಂಡರುಗಳು ವೇದಿಕೆಯಲ್ಲಿದ್ದರು.

ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸನ್ ಅಧ್ಯಕ್ಷತೆ ವಹಿಸಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";