ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಚ್ಛ ಹಾಗೂ ಗುಂಡಿಮುಕ್ತ ಬೆಂಗಳೂರು ನಮ್ಮ ಗುರಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ರಸ್ತೆ ಸುಧಾರಣೆ ಹಾಗೂ ಸಂಚಾರ ವಿಷಯಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ನಿವಾಸ ಕಾವೇರಿಯಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವುದು, ಬಾಕಿ ಇರುವ ದುರಸ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಯಿತು. 10,000 ಗುಂಡಿಗಳನ್ನು ನಮ್ಮ ಸಾರ್ವಜನಿಕರು, ಐಎಎಸ್ ಅಧಿಕಾರಿಗಳು, ಪೊಲೀಸರು, ನಮ್ಮ ಇಂಜಿನಿಯರ್ ಗಳು ಪತ್ತೆಹಚ್ಚಿದ್ದಾರೆ.
ಅಕ್ಟೋಬರ್ 30ರೊಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಮುಖ್ಯಮಂತ್ರಿಗಳು ಗಡುವು ನೀಡಿದ್ದಾರೆ. ಬೆಂಗಳೂರಿನ ರಸ್ತೆಗಳನ್ನು ಮೋಟೋರೇಬಲ್ ಮಾಡುವ ಪ್ರಾಜೆಕ್ಟ್ ಬಗ್ಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ನಮ್ಮ ರಾಜಧಾನಿ ಬೆಂಗಳೂರನ್ನು ಗುಂಡಿಮುಕ್ತ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಸಭೆಯಲ್ಲಿ ಸಚಿವರಾದ ಕೆ.ಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ಪಾಲಿಕೆಗಳ ಆಯುಕ್ತರು ಮತ್ತಿತರರು ಭಾಗವಹಿಸಿದ್ದರು.

