ಗುರು ಪೂರ್ಣಿಮೆ ಅರಿವೇ ಗುರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುರು ಪೂರ್ಣಿಮೆ…ಅರಿವೇ ಗುರು……ಅರಿತವಂಗೆ ಎಲ್ಲವೂ – ಎಲ್ಲರೂ ಗುರುಗಳೇ….. ಅರಿಯದವಂಗೆ ಅಹಂಕಾರ ಅಜ್ಞಾನವೇ ಗುರು…..

- Advertisement - 

ಅರಿವೆಂಬುದು ಒಂದು ಪ್ರಜ್ಞೆ. ಆದರೆ ಆ ಅರಿವು  ಎಷ್ಟು ಆಳವಾದದ್ದು, ಎಷ್ಟು ತೀವ್ರವಾದದ್ದು, ಎಷ್ಟು ವಿಶಾಲವಾದದ್ದು, ಎಷ್ಟು ಸಹಜವಾದದ್ದು, ಎಷ್ಟು ಸ್ಥಿತಿಸ್ಥಾಪಕ ಗುಣವುಳ್ಳದ್ದು, ಎಷ್ಟು ಬಾಲಿಶವಾದದ್ದು, ಎಷ್ಟು ಸತ್ಯವಾದದ್ದು, ಎಷ್ಟು ವಾಸ್ತವವಾದದ್ದು, ಎಷ್ಟು ಪ್ರಯೋಜನಕಾರಿಯಾದದ್ದು, ಎಷ್ಟು ಅಪಾಯಕಾರಿಯಾದದ್ದು, ಎಷ್ಟು ಮಾನವೀಯವಾದದ್ದು, ಎಷ್ಟು ಸಂಕುಚಿತವಾದದ್ದು ಎಂಬ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ…

- Advertisement - 

ಅರಿವೇ ಗುರು, ಅರಿವೇ ಜ್ಯೋತಿರ್ಲಿಂಗ, ನಾನೆಂಬುದು ಅರಿವಿ ನೆಂಜಲು ಮುಂತಾದ ಅರಿವಿನ ವಿಮರ್ಶೆಗಳು ಅರಿವಿನ ಅರಿವನ್ನು ತಿಳುವಳಿಕೆ, ಜ್ಞಾನಾರ್ಜನೆಯ ಮಾರ್ಗ ಮತ್ತು ಗುರಿ ಮುಂತಾದ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಈ ಅರಿವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮುಂತಾದ ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸಿ ಒಟ್ಟು ವ್ಯಕ್ತಿತ್ವ ಮತ್ತು ಸಾಮಾಜಿಕ ಹಾಗೂ ವೈಯಕ್ತಿಕ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ…

ಅರಿವು ಕೇವಲ ಸಕಾರಾತ್ಮಕ ಮಾತ್ರವಲ್ಲದೆ ನಕಾರಾತ್ಮಕವೂ ಆಗಿರಬಹುದು. ಆದರೆ ಸಾಮಾನ್ಯವಾಗಿ ಅರಿವನ್ನು ತಿಳುವಳಿಕೆಯ ಉತ್ಕೃಷ್ಟ ಮಟ್ಟ ಎಂದೇ ಉಪಯೋಗಿಸಲಾಗುತ್ತದೆ ಅಥವಾ ಭವಬಂಧನಗಳಿಂದ ಮುಕ್ತವಾಗುವ ಪ್ರಕ್ರಿಯೆ ಅಥವಾ ನೆಮ್ಮದಿಯಿಂದ ಸ್ವಾತಂತ್ರ್ಯದಿಂದ ಬದುಕುವ ಪ್ರಜ್ಞೆ ಎಂಬಂತೆಯೂ ಅರ್ಥೈಸಿಕೊಳ್ಳಬಹುದು.

- Advertisement - 

ಅರಿವೆಂಬುದು ಭಾವನಾತ್ಮಕವಾಗಬಾರದು, ಮೌಢ್ಯವಾಗಬಾರದು. ಅದೊಂದು ಸಮಗ್ರತೆಯ ಮತ್ತು ವೈಚಾರಿಕ ಪ್ರಜ್ಞೆಯಾದರೆ ಹೆಚ್ಚು ಉಪಯುಕ್ತವಾಗುತ್ತದೆ, ಮುಕ್ತವಾಗುತ್ತದೆ. ಇಲ್ಲದಿದ್ದರೆ ಜ್ಞಾನದ ಮಿತಿಗೆ ಒಳಪಟ್ಟು ಕೇವಲ ಸಾಹಿತ್ಯಕ ಪರಿಭಾಷೆಯಾಗಿ ಉಳಿದುಬಿಡುತ್ತದೆ.

ನನ್ನ ದೇಹವೇ ನನ್ನ ಗುರು………

ಪಂಚೇಂದ್ರಿಯಗಳನ್ನು ಒಳಗೊಂಡ ಇಡೀ ಶರೀರವೇ ನನ್ನ ಗುರು, ನನ್ನ ತಂದೆ ತಾಯಿ ಬಂಧು ಬಳಗವೇ ನನ್ನ ಗುರುಗಳು, ಶಿಕ್ಷಕ, ಗೆಳೆಯ, ವೈದ್ಯ, ಚಾಲಕ, ಕ್ಷೌರಿಕ, ಅಗಸ, ಚಮ್ಮಾರ, ಪೂಜಾರಿ, ರೈತ, ದಾದಿ, ಪೋಲೀಸ್ ಮುಂತಾದ ಎಲ್ಲರೂ ಗುರುಗಳೇ, ಪುಸ್ತಕ, ಬಳಪ, ವಾಹನ, ಪ್ರಾಣಿ, ಪಕ್ಷಿ, ಆಕಾಶ, ಭೂಮಿ, ನೀರು, ಕಾಡುಗಳು ಇತ್ಯಾದಿಗಳು ಗುರುಗಳೇ, ಊಟ, ಬಟ್ಟೆ, ಜಗಳ, ಕೋಪ, ಜ್ವರ, ನೋವು, ಪ್ರೀತಿ, ಪ್ರೇಮ, ಪ್ರಣಯ, ಕಷ್ಟ, ಸುಖ ಎಲ್ಲವೂ ಗುರುಗಳೇ, ಧರ್ಮ, ಕಾನೂನು, ಇತಿಹಾಸ, ವಿಜ್ಞಾನ, ಸಂಘರ್ಷ, ಟೀಕೆ, ಹೊಗಳಿಕೆಗಳು ಗುರುಗಳೇ, ಕೊಲೆ, ಸುಲಿಗೆ, ವಂಚನೆ, ಅತ್ಯಾಚಾರ, ತ್ಯಾಗ, ಸೌಹಾರ್ದ, ಸಹಕಾರಗಳು ಗುರುಗಳೇ, ಎಲ್ಲಾ ರೀತಿಯ ಸಾಮಾಜಿಕ ಜಾಲತಾಣಗಳು ಗುರುಗಳೇ, ನೀವು, ನಿಮ್ಮ ಅಭಿಪ್ರಾಯಗಳು, ಸಲಹೆಗಳು ಎಲ್ಲವೂ ಗುರುಗಳೇ, ಇಡೀ ಸಮಾಜವೇ ನನ್ನ ಗುರು. ನನ್ನ ಅನುಭವವೇ ನನ್ನ ಗುರು………

ಗುರುವೆಂದರೆ, ಅದೊಂದು, ವ್ಯಕ್ತಿ, ಶಕ್ತಿ, ಅರಿವು, ಗ್ರಹಿಕೆ, ದಾರಿ, ಮಾರ್ಗದರ್ಶನ ಹೀಗೆ ಎಲ್ಲವೂ ಹೌದುರೂಪಗಳು ಬೇರೆ ಬೇರೆ, ಗುರು ಪೂರ್ಣಿಮೆ ಕೇವಲ ಒಂದು ಸಾಂಕೇತಿಕ ದಿನ ಮಾತ್ರ, ಪ್ರತಿಕ್ಷಣವೂ ಗುರು ನಮ್ಮೊಂದಿಗೆ ಇರುತ್ತಾರೆ.

ಇಂದು ಭಯ ಭಕ್ತಿಗಳಿಂದ, ನಿರೀಕ್ಷೆಗಳಿಂದ ದೇವಸ್ಥಾನಗಳಿಗೆ ಹೋಗಿ ಕೈಮುಗಿದು ಪ್ರಾರ್ಥಿಸಿ ಪ್ರಸಾದ ತಿಂದು ಬರುವುದರ ಜೊತೆಗೆ ಅರಿವಿನ, ಗುರುವಿನ ಬಗ್ಗೆ ಆತ್ಮಾವಲೋಕನವಾಗಲಿ. ಏಕೆಂದರೆ ನಮ್ಮ ತಿಳಿವಳಿಕೆಗಳು ನಡವಳಿಕೆಗಳಾಗದೆ ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾದರೆ ಇಂತಹ ಹಬ್ಬಗಳಿಗೆ ಅರ್ಥವೇ ಇರುವುದಿಲ್ಲ.

ಈ ಹಬ್ಬಗಳಲ್ಲಿ, ಈ ಸಂಭ್ರಮಗಳಲ್ಲಿ ನಮ್ಮ ಅಂತರಂಗದ ಶುದ್ಧೀಕರಣವಾದರೆ, ಆ ಮೂಲಕ ನಮ್ಮ ಸಾಮಾಜಿಕ ವ್ಯವಸ್ಥೆ ಒಳ್ಳೆಯ ಹಾದಿಯಲ್ಲಿ ಪರಿವರ್ತನೆ ಹೊಂದಿದರೆ ಗುರು ಪೂರ್ಣಿಮಾ ಎಂಬ ಹಬ್ಬಕ್ಕೆ ಸಾರ್ಥಕತೆ ಸಿಗುತ್ತದೆ. ಕೇವಲ

ಅದ್ದೂರಿತನದ ಪ್ರದರ್ಶನವಾಗಲಿ , ಭಕ್ತಿಯ ಪ್ರದರ್ಶನವಾಗಲಿ, ಸಂಭ್ರಮವಾಗಲಿ ಮೌಢ್ಯವಾಗದೆ ಜ್ಞಾನವಾಗುವ, ಗುರುವಾಗುವ ಪ್ರಕ್ರಿಯೆ ಹೆಚ್ಚು ಅರ್ಥಪೂರ್ಣ. ಈ ಸಂದರ್ಭದಲ್ಲಿ ಎಲ್ಲಾ ಗುರುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ನಾವೂ ಗುರುವಾಗುವತ್ತ ಮುನ್ನಡೆಯೋಣ…….
ಲೇಖನ-ವಿವೇಕಾನಂದ. ಎಚ್. ಕೆ.9663750451

Share This Article
error: Content is protected !!
";