ಅಭಿನೇತ್ರಿ ಸಾಂಸ್ಕೃತಿಕ ಸಂಘದಿಂದ ಗುರುವಂದನಾ ಹಾಗೂ ವಾರ್ಷಿಕೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಕ್ಕಳಲ್ಲಿನ ಸಾಂಸ್ಕೃತಿಕ ಆಸಕ್ತಿಯನ್ನು ಗುರ್ತಿಸಿ ಪ್ರೋತ್ಸಾಹ ನೀಡುವುದರಿಂದ ಅವರ ಸೃಜನಶೀಲ ಆಲೋಚನೆಗಳ ಅಭಿವ್ಯಕ್ತಿಗೆ ಅವಕಾಶ ದೊರೆಯುತ್ತದೆ ಎಂದು ಅಭಿನೇತ್ರಿ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಬಿ.ಎ.ಅಭಿನೇತ್ರಿ ವಿಜಯ್‌ಹೇಳಿದರು.

ಇಲ್ಲಿನ ಅಭಿನೇತ್ರಿ ಸಾಂಸ್ಕೃತಿಕ ಸಂಘ, ಭಜನೆಹಟ್ಟಿ ಲಕ್ಷ್ಮಯ್ಯ ಚಾರಿಟಬಲ್ ಟ್ರಸ್ಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕನ್ನಡ ಜಾಗೃತ ಭವನದಲ್ಲಿ ನಡೆದ ಗುರುವಂದನಾ ಹಾಗೂ ಸಂಘದ 22ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

- Advertisement - 

ಸಮಯದ ಹಿಂದೆ ಓಡುತ್ತಿರುವ ಜಗತ್ತು ಅನೇಕ ಅವಕಾಶಗಳನ್ನು ನೀಡುತ್ತಿದೆಯಾದರೂ ಬಳಕೆ ಮಾಡಿಕೊಳ್ಳುವ ಸೂಕ್ಷ್ಮಮತಿ ಇಲ್ಲದಾಗುತ್ತಿದೆ. ಪರಿಶ್ರಮ, ತಾಳ್ಮೆ ಮತ್ತು ಆಸಕ್ತಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ಪ್ರತಿಯೊಬ್ಬರಿಗೂ ದಾರಿದೀಪವಾಗಬೇಕು. ಗುರುಗಳ ಮಹತ್ವವನ್ನು ಅರಿತು ಗೌರವಿಸುವುದು ಮುಖ್ಯ ಎಂದರು.

ಲಯನ್ಸ್‌ಕ್ಲಬ್‌ಅಧ್ಯಕ್ಷ ಪ್ರೊ.ರವಿಕಿರಣ್ ಕೆ.ಆರ್ ಮಾತನಾಡಿ, ಸಾಂಸ್ಕೃತಿಕ ಚಿಂತನೆಗಳನ್ನು ಕೇವಲ ಪ್ರದರ್ಶನ ಅಥವಾ ಅವಕಾಶಗಳಿಗಾಗಿ ಮಾತ್ರ ರೂಢಿಸಿಕೊಂಡರೆ ಪ್ರಯೋಜನವಿಲ್ಲ. ಅಭಿಜಾತ ಮಾದರಿಯಲ್ಲಿ ಕಲೆಗಳನ್ನು ಅಭ್ಯಾಸ ಮಾಡುವುದು ಅಗತ್ಯ. ಈ ನಿಟ್ಟಿನಲ್ಲಿ ಕಳೆದ 22 ವರ್ಷಗಳಿಂದ ಅಭಿನೇತ್ರಿ ಸಾಂಸ್ಕೃತಿಕ ಸಂಘ ದೊಡ್ಡಬಳ್ಳಾಪುರದಲ್ಲಿ ಮಕ್ಕಳ ಸಂಗೀತ, ನೃತ್ಯ ಕಲೆಗಳ ಆಸಕ್ತಿಗೆ ಪ್ರೋತ್ಸಾಹ ನೀಡಿ ಉತ್ತಮ ಮಾರ್ಗದರ್ಶನ ನೀಡುತ್ತಿದೆ ಎಂದರು.

- Advertisement - 

ಶ್ರೀವಾಣಿ ಪಿಯು ಕಾಲೇಜಿನ ಉಪನ್ಯಾಸಕ ಬಸವಕುಮಾರ್‌ಮಾತನಾಡಿ, ಸಾಧನೆಗೆ ಕೊನೆ ಮೊದಲುಗಳಿರುವುದಿಲ್ಲ. ಗುರುವನ್ನು ಶಿಷ್ಯರು ಮೀರಿಸಿ ಬೆಳೆದಾಗ ಮಾತ್ರ ಸಾಧನೆಗೆ ಅರ್ಥವಿರುತ್ತದೆ. ಪ್ರತಿಯೊಬ್ಬರೂ ಸಾಧಕರಾಗಿ ಹೊರಹೊಮ್ಮುವುವುದು ಅಗತ್ಯ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಎಚ್.ಎಸ್.ರೇವತಿ ಅನಂತರಾಮ್ ಅಧ್ಯಕ್ಷತೆ ವಹಿಸಿದ್ದರು. ಶ್ರೀವಾಣಿ ಪಿಯು ಕಾಲೇಜಿನ ಉಪನ್ಯಾಸಕ ನವೀನ್‌ಕುಮಾರ್, ದೇವರಾಜ್ ಅರಸ್‌ಪಿಯು ಕಾಲೇಜು ಉಪನ್ಯಾಸಕ ಜೆ.ವಿ.ಚಂದ್ರಶೇಖರ್‌ಮಾತನಾಡಿದರು.

ದರ್ಗಾಜೋಗಿಹಳ್ಳಿ ಗ್ರಾಪಂ ಸದಸ್ಯೆ ಭಾಗ್ಯ, ಜಿಲ್ಲಾ ಕೆಂಪೇಗೌಡ ಮಹಿಳಾ ಒಕ್ಕಲಿಗರ ಸಂಘದ ಉಪಾಧ್ಯಕ್ಷೆ ಮಂಗಳ, ನಿರ್ದೇಶಕಿ ಮಂಜುಳಾ, ಸಲಹೆಗಾರರಾದ ರಾಧಾ, ಸಂಘದ ವ್ಯವಸ್ಥಾಪಕ ಬಿ.ಅನಂತರಾಮ್, ಭರತನಾಟ್ಯ ಶಿಕ್ಷಕಿ ಅಪೂರ್ವ ಅರವಿಂದ್, ಚಿನ್ಮಯಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಗುರುವಂದನಾ ಕಾರ್ಯಕ್ರಮ, ಮಹಿಳಾ ಅತಿಥಿಗಳಿಗೆ ಬಾಗೀನ ಸಮರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

 

 

 

Share This Article
error: Content is protected !!
";