ಜಿಪಂ, ತಾಪಂ, ಬಿಬಿಎಂಪಿಗೆ ಚುನಾವಣೆ ನಡೆಸಿ ಪ್ರಜಾಪ್ರಭುತ್ವ ಉಳಿಸಿ-ಹೆಚ್ ಡಿಕೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನವ ಸರಪಳಿ ನೆಪದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪ್ರಜಾಪ್ರಭುತ್ವ ಉಳಿಸುವ ಕಾಳಜಿಯೇ ಇಲ್ಲ. ಇದ್ದರೆ ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ ಎಂದು ಕೇಂದ್ರ ಸರ್ಕಾರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿ ಅಧಿಕಾರಕ್ಕೇರಿದಾಗಿನಿಂದ ಪ್ರಜಾಪ್ರಭುತ್ವದ ಸರಪಳಿಯ ತಳಮಟ್ಟದ ಆಧಾರ ಸ್ತಂಭಗಳಾದ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಹಾಗೂ ಬಿಬಿಎಂಪಿ ಚುನಾವಣೆ ನಡೆಸಿಲ್ಲ, ಯಾಕೆ? ಸ್ಥಳೀಯ ಸರ್ಕಾರಗಳ ಕತ್ತು ಹಿಸುಕಿ ನೀವು ವಿಧಾನಸೌಧದಲ್ಲಿ ಮೆರೆದರೇನು ಭಾಗ್ಯ? ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ.. ನೀವು ಅಧಿಕಾರಕ್ಕೆ ಬಂದು ವರ್ಷದ ಮೇಲೆ 4 ತಿಂಗಳಾಯಿತು. ಈವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ನಿಮ್ಮ ಪ್ರಜಾಪ್ರಭುತ್ವ, ಜನಪರತೆ, ಜಾಹೀರಾತುಗಳಲ್ಲಷ್ಟೆ ಝಗಮಗಿಸುತ್ತಿದೆ!! ನಿಮ್ಮದು ಪ್ರಚಾರ ಜಾಸ್ತಿ, ಆಚಾರ ನಾಸ್ತಿ ಎಂದು ಅವರು ಟೀಕಿಸಿದ್ದಾರೆ.
ವಿಚ್ಚಿಧ್ರ ಶಕ್ತಿಗಳನ್ನು ದಮನ ಮಾಡುವುದು ಎಂದರೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಕ್ಕೆ ತಿಲಾಂಜಲಿ ಇಡುವುದೇ? ಮಾನವ ಸರಪಳಿಯಿಂದ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಜನರ ತೆರಿಗೆ ಹಣದ ಪೋಲು ಪ್ರಜಾಪ್ರಭುತ್ವಕ್ಕೆ ಭೂಷಣವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಮೊದಲು ಸ್ಥಳೀಯ ಸಂಸ್ಥೆ ಚುನಾವಣೆ ಘೋಷಿಸಿ. ನೈಜ ಪ್ರಜಾಪ್ರಭುತ್ವದ ಸರಪಳಿಯನ್ನು ಗಟ್ಟಿಗೊಳಿಸಿ, ಪ್ರಜಾಪ್ರಭುತ್ವ ಉಳಿಸಿ ಎಂದು ಟ್ಯಾಗ್ ಲೈನ್ ಹಾಕಿ ಕುಮಾರಸ್ವಾಮಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.