ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬಗ್ಗೆ ಅವಹೇಳನ- ಹಾಲಸ್ವಾಮಿ ಖಂಡನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪದವೀಧರ ಕ್ಷೇತ್ರದಿಂದ ಗೆದ್ದು ವಿಧಾನ ಪರಿಷತ್ ಸದಸ್ಯರಾಗಿರುವ ಡಿ.ಟಿ.ಶ್ರೀನಿವಾಸ್ ಇವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಪ್ರಭಾರೆ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ಸಹಿಸಿಕೊಳ್ಳದ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಪಕ್ಷದ ನಿಷ್ಠಾವಂತರಿಗೆ ಸ್ಥಾನ ಸಿಗಬೇಕಾಗಿತ್ತೆಂದು ದೃಶ್ಯ ಮಾಧ್ಯಮದ ಎದುರು ಹಗುರವಾಗಿ ಮಾತನಾಡಿರುವುದನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರಾಗಿ ಡಿ.ಟಿ.ಶ್ರೀನಿವಾಸ್ ನೇಮಕಗೊಂಡಿರುವುದನ್ನು ಪಕ್ಷದ ವರಿಷ್ಠರು ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ. ಮಾಜಿ ಸಚಿವ ಎ.ಕೃಷ್ಣಪ್ಪನವರು ಗೊಲ್ಲ ಜನಾಂಗದ ಸಂಘಟನೆಗಾಗಿ ರಾಜ್ಯಾದ್ಯಂತ ಸಂಚರಿಸಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅಂತಹ ಕುಟುಂಬದ ಬಗ್ಗೆ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್‌ಗೆ ಅವಹೇಳನವಾಗಿ ಮಾತನಾಡುವ ಯಾವ ನೈತಿಕತೆ ಇದೆ ಎಂದು ಕೆ.ಎಂ.ಹಾಲಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.

೨೦೧೩ ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಕೈ ತಪ್ಪಿದ ಕಾರಣಕ್ಕಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ೨೦೦೦ ಮತಗಳ ಅಂತರದಿಂದ ಎ.ಕೃಷ್ಣಪ್ಪನವರು ಪರಭಾವಗೊಂಡಾಗ ನಾಗರಾಜ್ ಯಾದವ್‌ಗೆ ಜನಾಂಗದ ಬಗ್ಗೆ ಅಭಿಮಾನವಿರಲಿಲ್ಲವೇ? ಚುನಾವಣೆಯಲ್ಲಿ ಸೋತೆನೆಂದು ಎ.ಕೃಷ್ಣಪ್ಪನವರು ಎದೆಗುಂದದೆ ಜನಾಂಗದ ಸಂಘಟನೆಗೆ ಕಟಿಬದ್ಧರಾಗಿದ್ದರು.

ಇವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್ ರವರು ೨೦೧೮ ರಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಶಾಲಿಯಾಗಿ ಅಂದಿನಿಂದ ಇಂದಿನವರೆಗೂ ಜನಾಂಗದ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರಥಮ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಪರಭಾವಗೊಂಡಿದ್ದ ಪೂರ್ಣಿಮಾ ಶ್ರೀನಿವಾಸ್‌ರವರ ಪತಿ ಡಿ.ಟಿ.ಶ್ರೀನಿವಾಸ್‌ರವರು ೨೦೨೪ ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡು ಪಕ್ಷಕ್ಕೆ ಗೆಲುವು ತಂದು ಕೊಟ್ಟಿದ್ದಾರೆ.

ಇಡೀ ಕುಟುಂಬವನ್ನೇ ರಾಜಕೀಯಕ್ಕಾಗಿ ಮುಡುಪಾಗಿಟ್ಟಿರುವ ಪೂರ್ಣಿಮಾ ಶ್ರೀನಿವಾಸ್ ಹಾಗೂ ಡಿ.ಟಿ. ಶ್ರೀನಿವಾಸ್ ಇವರ ಬಗ್ಗೆ ಹಗುರವಾಗಿ ಮಾತನಾಡುವ ನಾಗರಾಜ್ ಯಾದವ್‌ನಿಂದ ಸಮಾಜಕ್ಕೆ ಹಾಗೂ ಜನಾಂಗಕ್ಕೆ ಯಾವ ಕೊಡುಗೆಯಿದೆಕಾಡುಗೊಲ್ಲ ಹಾಗೂ ಊರುಗೊಲ್ಲ ಎಂಬ ಗೊಂದಲದಲ್ಲಿರುವವರನ್ನು ಒಂದುಗೂಡಿಸಲು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಇನ್ನು ಮುಂದೆ ನಾಗರಾಜ್ ಯಾದವ್ ಇಂತಹ ಅವಹೇಳನಕಾರಿ ಮಾತುಗಳನ್ನಾಡಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಎಚ್ಚರಿಸಿದ್ದಾರೆ.

ಜೆಡಿಎಸ್ ನಿಂದ ಕಾಂಗ್ರೆಸ್‌ಗೆ ಬಂದ ಮಧುಬಂಗಾರಪ್ಪರವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಪಕ್ಷ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿತ್ತು.

ಆದರೆ ಮಧುಬಂಗಾರಪ್ಪನವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವುದರಿಂದ ಕೆ.ಪಿ.ಸಿ.ಸಿ. ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಡಿ.ಟಿ.ಶ್ರೀನಿವಾಸ್‌ರವರನ್ನು ಪ್ರಭಾರೆಯನ್ನಾಗಿ ನೇಮಕ ಮಾಡಿರುವುದನ್ನು ಅರಗಿಸಿಕೊಳ್ಳಲು ಆಗದ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಹೊಡೆದಾಳುವ ನೀತಿಯನ್ನು ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದು ಕೆ.ಎಂ.ಹಾಲಸ್ವಾಮಿ ತೀರುಗೇಟು ನೀಡಿದ್ದಾರೆ.

 

- Advertisement -  - Advertisement - 
Share This Article
error: Content is protected !!
";