ಪ್ರತಿ ವರ್ಷದ ನವೆಂಬರ್ 3, 4, 5 ರಂದು ಹಂಪಿ ಉತ್ಸವ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇನ್ನುಮುಂದೆ ಪ್ರತಿ ವರ್ಷದ ನವೆಂಬರ್ 3
, 4, 5 ರಂದು ಹಂಪಿ ಉತ್ಸವದ ಆಯೋಜನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ವರ್ಣರಂಜಿತ ವೇದಿಕೆಯಲ್ಲಿ ಆಯೋಜಿಸಿದ್ದ “ಐತಿಹಾಸಿಕ ಹಂಪಿ ಉತ್ಸವ – 2026” ಅನ್ನು  ಉದ್ಘಾಟಿಸಿ, ಶುಭ ಹಾರೈಸಿ ಮಾತನಾಡಿದರು.

ರಾಜ್ಯ ಸರ್ಕಾರ ಹಂಪಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದೆ. ಮಾಜಿ ಸಚಿವರಾದ ದಿವಂಗತ ಎಂ ಪಿ ಪ್ರಕಾಶ್ ಅವರು ಹಿಂದೆ ಕನ್ನಡ ಮತ್ತು ಸಂಸ್ಕೃತಿಯ ಸಚಿವರಾಗಿದ್ದ ಸಂದರ್ಭದಲ್ಲಿ, ಮೈಸೂರು ದಸರಾ ಉತ್ಸವದ ವಿಜೃಂಭಣೆಯನ್ನು ಕಂಡು, ಇದೇ ರೀತಿಯ ಉತ್ಸವವನ್ನು ಹಂಪಿಯಲ್ಲಿಯೂ ನೆರವೇರಿಸಬೇಕೆಂದು ಆಶಿಸಿದ್ದರು. ಎಂ ಪಿ ಪ್ರಕಾಶ್ ಅವರು ಕನ್ನಡ ನಾಡು, ನುಡಿ, ಸಾಹಿತ್ಯಗಳಲ್ಲಿ ಅಪಾರ ಆಸಕ್ತಿ ವಹಿಸಿದ್ದರು. ಈ ರೀತಿಯ ಅದ್ಧೂರಿ ಹಂಪಿ ಉತ್ಸವದ ಆಚರಣೆಗೆ ಮೂಲಕಾರಣ ಎಂ ಪಿ ಪ್ರಕಾಶ್ ಅವರು. ಅವರೊಬ್ಬ ಅಪರೂಪದ ವ್ಯಕ್ತಿ ಎಂದು ಸಿದ್ದರಾಮಯ್ಯ ತಿಳಿಸಿದರು.

- Advertisement - 

ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಾಡು ಸಂಪತ್ಭರಿತವಾಗಿತ್ತು. ನಮ್ಮ ಸರ್ಕಾರ ಕೂಡ ಸಾಹಿತ್ಯ, ಸಂಸ್ಕೃತಿ, ಕಲೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ವಿಜಯನಗರ ಕಾಲದಲ್ಲಿ ಸಂಪ್ಭರಿತವಾದ ಹಂಪಿಯ ಹಿರಿಮೆಯನ್ನು ಹಂಪಿ ಉತ್ಸವದಿಂದ ತಿಳಿಯಬಹುದಾಗಿದೆ. ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್‌ರು ವಿಜಯನಗರ ಶ್ರೀಮಂತವಾದ ಸ್ಥಳವಾಗಿತ್ತು ಎಂದು ಉಲ್ಲೇಖಿಸಿದ್ದರು ಎಂದು ಸಿಎಂ ಹೇಳಿದರು.

ಸಮಾಜದಲ್ಲಿ ಬಡವ – ಶ್ರೀಮಂತ, ಉತ್ತಮ ಮತ್ತು ಕೆಳ ಜಾತಿಗಳೆಂಬ ಬೇಧವಿದೆ. ಡಾ.ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನ ರಚಿಸದಿದ್ದರೆ ಸಮಾನ ಅವಕಾಶಗಳು ದೊರೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಅಸಮಾನತೆಯನ್ನು ತೊಡೆದುಹಾಕಿದರೆ ಸಮಸಮಾಜ ನಿರ್ಮಾಣ ಸಾಧ್ಯ. 2013 ರಲ್ಲಿ ಮತ್ತು 2023 ರಲ್ಲಿ ಮುಖ್ಯಮಂತ್ರಿಯಾಗಿ ನಾನು ತಂದಿರುವ ಕಾರ್ಯಕ್ರಮಗಳು ಅಸಮಾನತೆಯ ನಿವಾರಣೆಗೆ ತಂದವುಗಳಾಗಿವೆ.

- Advertisement - 

ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ದು, 2023 ರಿಂದ ಗ್ಯಾರಂಟಿ ಯೋಜನೆಗಳನ್ನು ನೀಡಿದೆ, ಇವು ಅಸಮಾನತೆಯನ್ನು ನಿವಾರಿಸುವ ಉದ್ದೇಶ ಹೊಂದಿದ ಯೋಜನೆಗಳು. ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತರಾಗಿಸಲು ಸಾಧ್ಯವಾಗದೇ ಇದ್ದರೆ, ಜಾತಿ ವ್ಯವಸ್ಥೇ ಹೋಗಲಾಡಿಸಲು ಅಸಾಧ್ಯ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಸುಮಾರು 60 ಸಾವಿರ ರೂ.ಗಳ ಆರ್ಥಿಕ ಬಲವನ್ನು ತುಂಬುತ್ತಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತಿದೆ.

ಸರ್ಕಾರ ಆಚರಿಸುವ ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗುಂದಿ ಉತ್ಸವ, ಬನವಾಸಿ ಉತ್ಸವ, ಮೈಸೂರು ದಸರಾ, ಕರಾವಳಿ ಉತ್ಸವಗಳ ಮೂಲಕ ನಾಡಿನ ಸಾಹಿತ್ಯ, ಕಲೆ, ಸಂಗೀತ ಪರಂಪರೆಗಳನ್ನು ಸಂರಕ್ಷಿಸುವ ದಿಸೆಯಲ್ಲಿ ಮುಖ್ಯವಾಗಿದೆ. ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆ ಕೊಂಡೊಯ್ಯವ ದಿಸೆಯಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಸಚಿವರುಗಳಾದ ಶಿವರಾಜ್ ಎಸ್. ತಂಗಡಗಿ, ಬೈರತಿ ಸುರೇಶ್, ಖ್ಯಾತ ನಟ ಶಿವರಾಜ್ ಕುಮಾರ್, ಸಂಸದರಾದ ತುಕಾರಾಮ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಶಾಸಕರು, ಮುಖಂಡರು ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Share This Article
error: Content is protected !!
";