ವೈಭವದಿಂದ ಜರುಗಿದ ಹಂಪಿ ವಿರೂಪಾಕ್ಷೇಶ್ವರ ಮಹಾರಥೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ಮತ್ತು ಪಂಪಾಂಬಿಕಾ ದೇವಿಯರ ಭವ್ಯ ಮಹಾರಥೋತ್ಸವ ಮತ್ತು ಚಂದ್ರಮೌಳೇಶ್ವರ ಸಹಿತ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರಿದ್ದ ಸಣ್ಣ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಶನಿವಾರ ಸಂಜೆ ನೆರವೇರಿತು.

ಹೈದರಾಬಾದ್‌ನ ನಿಜಾಮ ಕಾಣಿಕೆಯಾಗಿ ನೀಡಿದ ಕಿರೀಟ ತೊಟ್ಟು ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಗೌನು ಧರಿಸಿ ಚಂದ್ರಮೌಳೇಶ್ವರನ ಜೊತೆಗೆ ಚಿಕ್ಕ ರಥ ಏರಿದರೆ, ವಿರೂಪಾಕ್ಷ-ಪಂಪಾಂಬಿಕೆಯರ ಉತ್ಸವ ಮೂರ್ತಿಗಳು ದೊಡ್ಡ ರಥದಲ್ಲಿ ರಾರಾಜಿಸಿದವು.

ದೇವಸ್ಥಾನದ ಪಟ್ಟದ ಆನೆಯ ಮುಂದಾಳತ್ವದಲ್ಲಿ ಜೋಡಿ ರಥಗಳು ಒಂದರ ಹಿಂದೆ ಮತ್ತೊಂದರಂತೆ ಸಾಗಿದಾಗ ಭಕ್ತರು ಹರ್ಷೋದ್ಗಾರ ಮುಗಿಲು ಮುಟ್ಟಿತು. ರಥಗಳಿಗೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಭಾವದಿಂದ ಪ್ರಾರ್ಥಿಸಿದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರವೂ ಆನೆಗುಂದಿಯಲ್ಲಿ ಸಾಮಂತ ಅರಸರ ಆಳ್ವಿಕೆ ಮುಂದುವರೆದಿತ್ತು.

ಆ ಮನೆತನದವರು ಈಗಲೂ ಇರುವ ಕಾರಣ ರಥೋತ್ಸವದ ದಿನ ಬೆಳಗ್ಗೆ ವಿರೂಪಾಕ್ಷ ದೇವಸ್ಥಾನಕ್ಕೆ ಪೂರ್ವಾಭಿಮುಖವಾಗಿ ಪ್ರವೇಶಿಸಿ, ವಿದ್ಯಾರಣ್ಯ ಗುರುಗಳಿಗೆ ಕಿರೀಟ ತೊಡಿಸುವ ಹಾಗೂ ಮಡಿ ತೇರು ಎಳೆಯುವ ಸಂಪ್ರದಾಯ ನಡೆಯುತ್ತಿದೆ.

ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಬುಕ್ಕದೇವರಾಯ ಕೊಟ್ಟಂತಹ ಕಿರೀಟ ಧರಿಸಿ ಬ್ರಹ್ಮರಥೋತ್ಸವ ಶಾಸ್ತ್ರ ನೆರವೇರಿಸಿದ್ದರು. ಮ್ಯಾಸಕೇರಿಯವರಿಗೆ ರಥದ ಸನ್ನೆ ಹಿಡಿಯುವ ಹೊಣೆ ಸಿಕ್ಕಿತ್ತು. ಹೀಗಾಗಿ, ಹತ್ತಾರು ಸಂಖ್ಯೆಯಲ್ಲಿದ್ದ ಕೇರಿಯ ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತ ಸಂಭ್ರಮಿಸಿದರು.

ಚಿನ್ನದ ಕಿರೀಟ: ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿರೂಪಾಕ್ಷನಿಗೆ ತೊಡಿಸುವ ಚಿನ್ನದ ಮುಖವಾಡ, ಕಿರೀಟ ಕಂಡು ಭಕ್ತರು ಪುಳಕಿತಗೊಂಡರು. ವಿಜಯನಗರದ ಅರಸ ಕೃಷ್ಣದೇವರಾಯ ಮಾಡಿಸಿದ್ದೆನ್ನಲಾದ ಈ ಕಿರೀಟ 6 ಕೆ.ಜಿ. ತೂಕವಿದ್ದು, ಮಹಾಶಿವರಾತ್ರಿ, ರಥೋತ್ಸವ ಸಹಿತ ವಿಶೇಷ ಸಂದರ್ಭಗಳಲ್ಲಿ ಮಾತ್ರ ತೊಡಿಸಲಾಗುತ್ತದೆ. ಇತರ ದಿನಗಳಲ್ಲಿ ಇದು ಲಾಕರ್‌ನಲ್ಲಿರುತ್ತದೆ. ಹಂಪಿಯ ವಿದ್ಯಾರಣ್ಯ ಮಹಾಸ್ವಾಮೀಜಿ ಅವರು ಶಿವನಿಗೆ ಅಭಿಷೇಕ ಮಾಡಿ ಚಿನ್ನದ ಕವಚ ತೊಡಿಸಿದರು.

ಜಾತ್ರೆಗೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳದಿಂದಲೂ ಭಕ್ತರು ಆಗಮಿಸಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತಸಾಗರದ ಮಧ್ಯೆ ಜೋಡಿ ರಥೋತ್ಸವ ನೆರವೇರಿತು. ಜಾತ್ರೆಗೆ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

ಹರಕೆ ಹೊತ್ತವರು ಭಕ್ತರಿಗೆ ಅಲ್ಲಲ್ಲಿ ಮಜ್ಜಿಗೆ, ಪಾನಕ, ಕಬ್ಬಿನ ಹಾಲು ವಿತರಣೆಗೆ ವ್ಯವಸ್ಥೆ ಮಾಡಿದ್ದರು. ಜಾತ್ರೆಗೆ ಬಂದವರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

 

 

Share This Article
error: Content is protected !!
";