ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹನೂರು ಚನ್ನಪ್ಪ ಅವರ “ಕಬ್ಬಿಣದ ಕುದುರೆಗಳು” ಕಾದಂಬರಿಗೆ ಬರೆದಿರುವ ಮುನ್ನುಡಿ…
ಹನೂರು ಚನ್ನಪ್ಪ ಅವರ “ಕಬ್ಬಿಣದ ಕುದುರೆಗಳು” ಕೃತಿ ಬಿಡುಗಡೆ ಸಮಾರಂಭವನ್ನು ‘ಜೋಳಿಗೆ ಪ್ರಕಾಶನ ಚಾಮರಾಜನಗರ‘ ಹಾಗೂ ‘ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ, ಮೈಸೂರು‘ ಸಹಯೋಗದೊಂದಿಗೆ ದಿನಾಂಕ 31-08-2025 ರಂದು ಭಾನುವಾರ ಬೆಳಗ್ಗೆ 10-30 ಗಂಟೆಗೆ, ರಾಣಿ ಬಹದ್ದೂರ್ ಸಭಾಂಗಣ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ನೀವು ಬನ್ನಿ…ನಿಮ್ಮವರನ್ನೂ ಕರೆತನ್ನಿ…
ಮುನ್ನುಡಿ–
‘ಅನ್ನ‘ ಕಥಾಸಂಕಲನದ ಮೂಲಕ ಹನೂರು ಚಿನ್ನಪ್ಪ ಈಗಾಗಲೇ ಕನ್ನಡ ಸಾಹಿತ್ಯಕ್ಕೆ ಪರಿಚಯವಾಗಿರುವ ಪ್ರತಿಭೆ, ‘ಬೆಲ್ಲದ ದೋಣಿ‘ ಎಂಬ ನಾಟಕದ ತರುವಾಯ ಕಾದಂಬರಿಯ ಸೃಜನೆಗೂ ತೊಡಗಿ ‘ಕಬ್ಬಿಣದ ಕುದುರೆಗಳು” ಇಂದು ನಮ್ಮ ಕೈಗಳಲ್ಲಿದೆ. ಇದು ಚನ್ನಪ್ಪನವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಮೂರನೇ ಕಾಣ್ಕೆ.

ಚಾಮರಾಜನಗರ ಸೀಮೆಯ ಜನರು ಆಡುವ ದೇಶಿ ಸೊಗಡಿನ ಸಂಭಾಷಣೆಗಳು, ಅಲ್ಲಿನ ಜನರ ಜೀವನ ವಿವರಗಳು ಈ ಕಾದಂಬರಿಯನ್ನು ಸಂಪೂರ್ಣ ಅವರಿಸಿಕೊಂಡಿದೆ. ಕಾದಂಬರಿಯ ಸಾಂಪ್ರದಾಯಿಕ ನಿರೂಪಣಾ ಶೈಲಿಯನ್ನು ಮತ್ತು ವಾಸ್ತವ ರೂಪವನ್ನು ಬಿಟ್ಟು ಜಾನಪದೀಯ ಕಥಾಕಾವ್ಯದ ರೂಪ ಮತ್ತು ಶೈಲಿಯಲ್ಲಿ ನಿರೂಪಿಸಿರುವುದು ಕೃತಿಯ ವೈಶಿಷ್ಟ್ಯವಾಗಿದೆ. ಇದನ್ನು ದೇವನೂರು ಮಹಾದೇವರವರು ‘ಕುಸುಮಬಾಲೆ‘ ಮತ್ತು ‘ಒಡಲಾಳ‘ ಕೃತಿಗಳಲ್ಲಿ ಈಗಾಗಲೇ ತೋರಿಸಿಕೊಟ್ಟಿದ್ದರಾದರೂ ಕಾದಂಬರಿಯ ಕ್ಯಾನ್ವಾಸ್ ದೃಷ್ಟಿಯಿಂದ ಹನೂರು ಚನ್ನಪ್ಪ ವಿಸ್ತಾರವಾದ ಕಥಾ ಭೂಮಿಕೆಯನ್ನು ಎದುರಿಗಿರಿಸಿಕೊಂಡು ಆಗುಮಾಡಿದ್ದಾರೆ.
ತಳಸ್ತರೀಯ ಸಮುದಾಯಗಳ ಬಡವರು ಸಾಮಾಜಿಕ ಶೋಷಣೆ ಮತ್ತು ಭೂಸಂಬಂಧಿ ವರ್ಗ ಹೋರಾಟದ ಬದುಕಿನಲ್ಲಿ ನಗ್ಗುನುರಿಯಾಗುವಾಗಲೂ ಅವರು ಅಲ್ಲಲ್ಲಿ ತೋರಿಸುವ ತಾಳ್ಮೆ, ಕರುಣೆ, ಪ್ರೀತಿ, ಚಾಲಾಕಿತನ, ಕಿಲಾಡಿತನ, ಮುಂತಾದ ಅಂಶಗಳು ಪ್ರಧಾನವಾಗುತ್ತವೆ. ಬಡವರ ಬದುಕಿನ ಉಜ್ವಲತೆ ಗೋಚರಿಸುವುದು ಇಲ್ಲಿಯೇ.. ಹನೂರು ಚಿನ್ನಪ್ಪನವರು ಅರುಸಯ್ಯ ಪಿಟುರಯ್ಯ ಉರಿಮೀಸ ಸೀಗಯ್ಯ, ಕುನ್ನಗೆಂಪಿ ಚಿಕ್ಕತಾಯಿಯಂತಹ ದುಃಖಿತರನ್ನು ಚಿತ್ರಿಸಿರುವುದ ನೋಡಿದರೆ ದೇವನೂರು ಮಹಾದೇವ ಅವರ ಸಾಕವ್ವ ಮತ್ತು ಗುರುಸಿದ್ದ, ಕುವೆಂಪುರವರ ತಿಮ್ಮಿ, ಕರಿಸಿದ್ದ ಮತ್ತು ಭೈರಿ, ಲಂಕೇಶ್‌ರವರ ದೇವೀರಿ ಮಂಜ, ಕಾರಂತರ ಚೋಮ, ಗುರುವ ಮತ್ತು ಚೆನಿಯ, ಗೀತಾ ನಾಗಭೂಷಣ ಅವರ ‘ಬದುಕು‘ ಕಾದಂಬರಿಯ ಅನೇಕ ಪಾತ್ರಗಳು ‘ಕಬ್ಬಿಣದ ಕುದುರೆಗಳು‘ ಓದಿನೊಂದಿಗೆ ನೆನಪಾಗುತ್ತಾ ನಮ್ಮ ಕಣ್ಣೆದುರು ಚಲಿಸುತ್ತಾರೆ.
ಸಾಹಿತ್ಯ ಕೃತಿಗಳಲ್ಲಿ ಸಾಮಾಜಿಕ ಶೋಷಣೆಗಳು ಮತ್ತು ಬಡತನದ ಅನುಭವಗಳು ಮರುಕ ಹುಟ್ಟಿಸುವಂತೆಯೋ ಅಪಮಾನಕಾರಿಯಾಗಿಯೋ ಪರಿವರ್ತನೆಯಾಗದೆ ಸಂಕಟದ ಅವಸ್ಥೆಗಳನ್ನು ದಾಟುವ ಚೈತನ್ಯವಾಗಿ ಅಭಿವ್ಯಕ್ತವಾಗಬೇಕು. ಈ ಕೃತಿಯಲ್ಲಿ ಮಾದೇಶ ತನ್ನ ಕೇರಿಯ ಜನರ ಪಾಲಿಗೆ ಆದೇಶನಾಗಿ ಹಾಗೂ ಅನಾಥ ಹುಡುಗ ಮಾಲಿಂಗನು ಬಾವಿಗೆ ಈಜುಬಿದ್ದು ಜೀವಗಳನ್ನು ಉಳಿಸುವ ಸಂರಕ್ಷಕನಾಗಿಯೂ ಚೈತನ್ಯಶಾಲಿಗಳಾಗಿ ಚಿತ್ರಿತರಾಗಿದ್ದಾರೆ.
“ಕಬ್ಬಿಣದ ಕುದುರೆಗಳು‘ ಕಾದಂಬರಿಯಲ್ಲಿ ಹೊಲೆಮಾದಿಗರ ಸಮುದಾಯನಿಷ್ಠ ಮೌಲ್ಯಗಳನ್ನು ಹನೂರು ಚನ್ನಪ್ಪ ತಮ್ಮ ಸೃಜನಶೀಲ ಪ್ರತಿಭೆಯ ಮೂಲಕ ಚಿತ್ರಿಸಿರುವ ‘ಕೈಲಾಸಪುರದ ಕಾಮಧೇನು ಕಥಾಪ್ರಸಂಗ‘ ಗಮನ ಸೆಳೆಯುತ್ತದೆ. ಹಸುವನ್ನು ‘ಪವಿತ್ರ ಗೋಮಾತೆ‘ ಎಂದು ಕರೆದು ‘ಗೋಹತ್ಯಾ ನಿಷೇಧಕಾಯ್ದೆ‘ ಹಾರಿಯ ಮೂಲಕ ತಳಸಮುದಾಯಗಳ ಆಹಾರ ಸಂಸ್ಕೃತಿಯ ಮೇಲೆ ಇಂದಿಗೂ ಅಲ್ಲಲ್ಲಿ ಹಲ್ಲೆ ನಡೆಯುತ್ತಿರುವಾಗ ಇದೇ ‘ಕಾಮಧೇನುವಿನ ಕತೆ‘ ಹಲ್ಲೆಕೋರ ಮನಸ್ಸುಗಳಿಗೆ ಎದುರಾಗಿ ನಿಲ್ಲುತ್ತದೆ. ಪಾರಂಪರಿಕವಾಗಿ ದನದ ಮಾಂಸಾಹಾರ ಸಂಸ್ಕೃತಿಯನ್ನು ರೂಢಿಸಿಕೊಂಡಿರುವ ಹೊಲೆಮಾದಿಗರು ‘ಪವಿತ್ರ ಗೋಮಾತೆಯ‘ ಮಾಂಸವನ್ನು ಪವಿತ್ರವೆಂದೇ ಭಾವಿಸಿ ತಿನ್ನುತ್ತಿದ್ದಾರೆಂದು. ಇದಕ್ಕೆ ಬೆಳ್ಳಿಗುಡ್ಡದ ವಾಸಿ ಮೂಲೋಕದ ಒಡೆಯ ಪರಶಿವನ ಅಪ್ಪಣೆ ಅನುಮೋದನೆಯು ಇದೆಯೆಂಬುದನ್ನು ತಿಳಿಸುತ್ತದೆ.
ಕುಲೀನ ಲೋಕದೆದುರು ದನದ ಮಾಂಸಾಹಾರ ಸಂಸ್ಕೃತಿಯ ಕಥನವನ್ನು ಹೆಚ್ಚುಗಾರಿಕೆಯಂತೆ ಇಲ್ಲಿ ಚಿತ್ರಿಸಿ ನಿರೂಪಿಸಿರುವುದು ದಲಿತರ ಆತ್ಮಾಭಿಮಾನದ ದ್ಯೋತಕವಾಗಿಯೂ ಕಾಣಿಸುತ್ತದೆ. ಇಲ್ಲದಿದ್ದರೆ ಅಂತವರು ಹೇರಿರುವ ಪಾನಕ ಪನಿವಾರಗಳನ್ನೇ ಮೆಚ್ಚುವ ಸಾಂಸ್ಕೃತಿಕ ಬಳಲಿಕೆಗೆ ಈಡಾಗಬೇಕಾಗುತಿತ್ತು. ಆಳುವ ವರ್ಗಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸದೆಯೇ ‘ಪವಿತ್ರ ಗೋಮಾತೆಯ‘ ಮಾಂಸ ಕೂಡಾ ಪವಿತ್ರವೆಂದು ಪುರಾಣಗಳ ಮೂಲಕ ಒಪ್ಪಿಸುವ ಚಾಲಾಕಿತನವನ್ನು ಇಲ್ಲಿ ಮೆಚ್ಚಲೇಬೇಕಾಗುತ್ತದೆ.
ದಲಿತರು ಕೂಡಾ ಹಿಂದೂಗಳೇ ಹಾಗಾಗಿ ಹಿಂದೂಗಳ ಪವಿತ್ರ ಪ್ರಾಣಿಯಾಗಿರುವ ಗೋವನ್ನು ದಲಿತರು ತಿನ್ನಬಾರದೆಂದು ಹೂಂಕರಿಸುವ ಕೆಲ ಶಿಷ್ಟ ಜನರು ಇಂತಹ ಪರಿಶಿಷ್ಟ ಪುರಾಣಗಳನ್ನು ಸುಲಭವಾಗಿ ಅರಗಿಸಿಕೊಳ್ಳಲಾರರು. ಆದರೆ ಹನೂರು ಚನ್ನಪ್ಪನವರ ಗಮನ ಇರುವುದು ಇಂತಹ ಶಿಷ್ಟ ಜನರು ‘ಗೋಮಾತೆ‘ಯನ್ನು ಕುರಿತು ಇರಿಸಿಕೊಂಡಿರುವ ಧಾರ್ಮಿಕ ಭಾವನೆಗಳ ಕಡೆಗಲ್ಲ. ಬದಲಾಗಿ ದಲಿತರು ಗೋಮಾಂಸವನು ಸೇವಿಸಲು ಕಾರಣವೆನಿಸಿರುವ ‘ಕಾಮಧೇನುವಿನ ಪುರಾಣದಂತ ಕಥೆಯನ್ನು ಕಟ್ಟಿರುವ ಸೃಜನಶೀಲ ಜಾಣೆಯ ಕಡೆಗೆ ಹಾಗೂ ಅಂತಹ ಸ್ವಾಭಿಮಾನಿ ಕಥನಗಳನ್ನು ಸಮಾಜದ ಮುಂದೆ ಘನತೆಯಿಂದ ನಿರೂಪಿಸಿರುವ ಕಿಲಾಡಿತನದ ಕಡೆಗೆ.
ಅನಾದಿ ಕಾಲದಿಂದಲೂ ಹೊಲೆಮಾದಿಗರಿಗಿರುವ ಅಣ್ಣತಮ್ಮಿಕೆ ಸಂಬಂಧದ ಎಳೆಯು ಇದೇ ಕಾಮಧೇನು ಕಥೆಯಲ್ಲಿ ಕಸೂತಿಯಂತೆ ನೇಯ್ದುಕೊಂಡಿದೆ. “ಲೋಕ ಚಮತ್ಕಾರದಿಂದ ಬದುಕಿದ್ದ ಕಾಮಧೇನು ಸತ್ತಾಗ ಅದನು ಸುಡುವುದು ಬೇಡ, ಹೂಳುವುದೂ ಬೇಡ ಎನ್ನುವ ಶಿವ ಅದನು ಅಳುದು ಊಟ ಮಾಡಿ ಎನ್ನುತಾನೆ. ಬೆದರಿದ ಹೊನ್ನ-ಚೆನ್ನರಿಗೆ ‘ಕಾಮಧೇನುವ ಅಳುದು ಉಂಡು ಅರಗಿಸಿಕೊಳ್ಳುವ ಶಕುತಿ ಲೋಕದಲಿ ನಿಮಗಲ್ಲದೆ ಬೇರೆ ಯಾರಿಗೂ ಇಲ್ಲ‘ ಎಂದು ಅಪ್ಪಣೆ ಮಾಡುತ್ತಾನೆ.
‘ಗೋಮಾಂಸ ತಿನ್ನಲು ಹೊಲೆಯರ ಹೊನ್ನಯ್ಯನಿಗೂ ಮಾದಿಗರ ಚೆನ್ನಯ್ಯನಿಗೂ ಶಿವನೇ ವರವನ್ನು ಕೊಟ್ಟು ತಥಾಸ್ತು ಮಾಡಿರುವ ದಲಿತರ ಪುರಾಣ ಕಥೆಯನ್ನು ಹನೂರು ಚನ್ನಪ್ಪ ಇಲ್ಲಿ ದೊಡ್ಡಕೇರಿ ಯಜಮಾನ್ ಅರುಸಯ್ಯನ ಪಾತ್ರದ ಮೂಲಕ ಬಹಳ ನಯವಾಗಿ ನಿರೂಪಿಸಿದ್ದಾರೆ. ವಚನಕಾರ ಉರಿಲಿಂಗಪೆದ್ದಿಯ ಪುಣ್ಯಸ್ತ್ರೀ ವಚನಕಾರ್ತಿ ಕಾಳವ್ವ ಕೂಡಾ, ‘ಶಿವಗೆ ಪಂಚಾಮೃತವ ಕರೆಯುವ ಪಶುವ ತಿಂಬುವ ನೀವೆಂತು ಕೀಳಾದಿರೋ ?’ ಎಂದು ಪ್ರಶ್ನಿಸುವ ಮೂಲಕ ಗೋಮಾಂಸ ತಿನ್ನುವವರು ಕೀಳಲ್ಲವೆಂದು ಸಮರ್ಥಿಸಿದ್ದಾಳೆ. ಅಂತೆಯೇ ಇಲ್ಲಿ ಸಂಪ್ರದಾಯವಾದಿ ಜನರು ಪೂಜಿಸುವ ಗೋಮಾತೆ ಕೇರಿ ಜನರ ಪುರಾಣದೊಳಗೆ ಪವಿತ್ರ ನೈವೇದ್ಯವಾಗುತ್ತದೆ. ಆ ಮೂಲಕ ದಲಿತರ ಆತ್ಮಾಭಿಮಾನವನ್ನು ಆಹಾರ ಸಂಸ್ಕೃತಿಯನ್ನು ಸಾಮಾಜಿಕ ಘನತೆಯನ್ನು ಈ ಕಥೆ ಮರುಸ್ಥಾಪಿಸುತ್ತದೆ.
ಈ ಹಿನ್ನೆಲೆಯಲ್ಲಿ ಇವತ್ತಿನ ಸಮಕಾಲೀನ ಕನ್ನಡದ ಲೇಖಕರಲ್ಲಿ ಹನೂರು ಚನ್ನಪ್ಪ ನಮಗೆ ಬಹುಮುಖ್ಯರಾಗಿ ಕಾಣಿಸುತ್ತಾರೆ. ಮೆಚ್ಚುಗೆಗೂ ಪಾತ್ರರಾಗುತ್ತಾರೆ. “ಕಬ್ಬಿಣದ ಕುದುರೆಗಳು” ಕಾದಂಬರಿಯ ಉದ್ದಕ್ಕೂ ಚನ್ನಪ್ಪ ತನ್ನ ಸಾಮಾಜಿಕ ಕಳಕಳಿಯ ತೀವ್ರತೆಯನ್ನು ಕಾಯ್ದುಕೊಂಡಿದ್ದಾರೆ. ಪರಂಪರೆಯಿಂದ ಸಾಗಿಬಂದಿರುವ ದಲಿತರ ಭೌತವಾದಿ ಪುರಾಣಗಳನ್ನು ವರ್ತಮಾನದ ಸಾಮಾಜಿಕ ಬಿಕ್ಕಟ್ಟುಗಳಿಗೆ ತಕ್ಕಂತೆ ಎದುರಾಗಿಸಿ ದುಡಿಸಿಕೊಳ್ಳುವ ಛಾತಿಯನ್ನು ತೋರಿಸಿದ್ದಾರೆ.
ಹಾಗಂತ ಲೇಖಕರು ದಲಿತ ಪುರಾಣಗಳ ಭಾರವನ್ನು ನೆತ್ತಿಯ ಮೇಲೆ ಹೊತ್ತುಕೊಂಡಿಲ್ಲ. ಇದೇ ರೀತಿಯ ಕೆಲವು ಪುರಾಣ ಕಥನಗಳು ಹೊಲೆಮಾದಿಗರನ್ನು ಎಡಗೈ ಬಲಗೈ ಎಂಬ ಪಣಭೇದಗಳಿಂದ ಸೀಳಿರುವುದನ್ನು ಸಹಿಸಿಕೊಳ್ಳಲಾರದೆ ಎರಡೂ ಸಮುದಾಯಗಳನ್ನು ಒಂದೇ ತಾಯಿಯ ಮಕ್ಕಳೆಂಬ ಸೋದರ ಭಾವನೆಯನ್ನು ಮೂಡಿಸಲು ಯತ್ನಿಸಿದ್ದಾರೆ. ಅದಕ್ಕೆ ನಿದರ್ಶನವಾಗಿ ಹೊಳಕರ ಮಾರಮ್ಮನ ಪಂತಿಸೇವೆಯ ಸಹಪಂಕ್ತಿ ಭೋಜನದಲ್ಲಿ ಗಮನಿಸಬಹುದು. ಮಾಲಿಂಗನ ತಂದೆತಾಯಿಗಳ ಸಂಬಂಧವನು ಬೆಸೆದಿರುವುದರಲ್ಲಿ ಕಾಣಬಹುದು… ಅಪ್ಪ ದೊಡ್ಡಕೇರಿ ಹೊಲೆಯರ ದೊಡ್ಡಾಳು. ಅವ್ವ ಚಿಕ್ಕೇರಿ ಮಾದಿಗರ ಹೆಣ್ಣುಮಗಳು. ಇವರಿಬ್ಬರಿಗೂ ಹುಟ್ಟಿದ ಮಾಲಿಂಗ ಎರಡೂ ಕೇರಿಯ ಹಟ್ಟಿಗಳಲ್ಲಿ ಓಡಾಡಿಕೊಂಡು ಬೆಳೆದವನು. ಮಾಲಿಂಗನನ್ನು ಕುರಿತು ಚೆನ್ನಿ ಹೇಳುವಂತೆ. “ಅವುನೇನೋ ಬುಡವ್ವಾ… ಜಾತಿ ಮೀರಿದ ಗಂಡು”.
“ಕಬ್ಬಿಣದ ಕುದುರೆಗಳು” ಕಾದಂಬರಿಯು ಕಥೆಯ ಹಂದರದ ದೃಷ್ಟಿಯಿಂದ ತೊಂಭತ್ತರ ದಶಕದಲ್ಲಿ ಚಾಮರಾಜನಗರ ಸೀಮೆಯ ಗ್ರಾಮಜಗತ್ತು ಅನುಭವಿಸಿದ ಸಾಮಾನ್ಯ ವಸ್ತು. ಕಣ್ಣೂರು ಎಂಬ ಗ್ರಾಮದ ಧಣಿಯಾದ ಸಾತ್ಕಾರ ಸೀನಪ್ಪ – ಭಾಗ್ಯಮ್ಮ ದಂಪತಿಯ ಮಗಳಾಗಿ ಅನಿತಾ ಮೈಸೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾ ದೂರದ ಊರಿನ ದಲಿತರ ಪೈಕಿಯ ಮಾದೇಶನನ್ನು ಪ್ರೀತಿಸಿ, ಅಂತರ್ಜಾತಿ ವಿವಾಹವಾಗಿ ಅವನೊಂದಿಗೆ ಆರು ತಿಂಗಳು ಸಂಸಾರ ಮಾಡಿ ಜಾತಿಯ ಕಟ್ಟುಗಳನ್ನು ಉಲ್ಲಂಘನೆ ಮಾಡಿದವಳ ವ್ಯಥೆ ಇದು. ಹಾಡುಗಾರ ಮಾದೇಶ (ಕಥಾರಂಗದಲ್ಲಿ ನೇರವಾಗಿ ಕಾಣಿಸದಿರುವ ಪಾತ್ರ) ಮತ್ತು ಹಳ್ಳಿಗನಾಗಿ ಪಟ್ಟಣದ ಶ್ರೀಮಂತ ವಿದ್ಯಾರ್ಥಿಗಳ ಎದುರು ಖೋ ಖೋ ಪಂದ್ಯದಲ್ಲಿ ಸೆಣೆಸಿ ಚಾಂಪಿಯನ್ ಶಿಪ್ ಗೆದ್ದುಕೊಂಡ ಅನಾಥ ಜೀತದ ಹುಡುಗ ಮಾಲಿಂಗ, ಸೀನಪ್ಪನ ಹೊಲಗದ್ದೆಗಳಲ್ಲಿ ದುಡಿಯುತ್ತಾ ಕೂಲಿಹೆಣ್ಣುಗಳಿಂದ ಕೆಲಸ ಮಾಡಿಸುವ ಮನೆಯಾಳು ಚೆನ್ನಿ.ಮಾದೇಶನ ಜನ್ಮದಾತೆ ಚಿಕ್ಕತಾಯಿ, ಕಥೆಯ ದಿಕ್ಕನ್ನೆ ದಿಕ್ಕಾಪಾಲು ಮಾಡುವ ಕುನ್ನಗೆಂಪಿ.ಮಲ್ಲಿ ಕೆಂಪಿಯರ ಪಾಡಿದು. ಹೊಲೆಯರ ದೊಡ್ಡಕೇರಿ ಯಜಮಾನರಾದ ಆರುಸಯ್ಯ ಮತ್ತು ಪಿಟುರಯ್ಯ, ಮಾದಿಗರ ಚಿಕ್ಕೇರಿ ಯಜಮಾನರಾದ ಉರಿಮೀಸ ಸೀಗಯ್ಯ ಮತ್ತು ರಾಚ ಹಾಗೂ ಎರಡೂ ಕೇರಿಗಳ ಓದಿರ ಗಂಡುಗಳು ಇವರ ಬದುಕಿನ ಸುತ್ತಲೂ, ಹೊಳಕರ ಮಾರಮ್ಮನಿಗೆ ಸಾತ್ಕಾರ ಸೀನಪ್ಪನು ಹೊತ್ತುಕೊಂಡು ಹರಕೆ ಪಂತಿಸೇವೆಯನ್ನು ದಲಿತರು ನೆರವೇರಿಸುವ ಘಟನೆಯ ಸುತ್ತಲೂ ಹೆಣೆದಿರುವ ಕಥೆ ಇದು.
ಬಹುಮುಖ್ಯವಾಗಿ ಸಾತ್ಕಾರ ಸೀನಪ್ಪ ತನ್ನ ಜಾತಿ ಮತ್ತು ವರ್ಗ ಪ್ರಜ್ಞೆಯ ರಚನೆಗಳನ್ನು ಉಳಿಸಿಕೊಳ್ಳಲು ಸಭ್ಯಸ್ಥನ ಮುಖವಾಡ ಧರಿಸಿಕೊಂಡು ಕ್ರೌರ್ಯವನ್ನು ತಣ್ಣಗೆ ಎಸಗುತ್ತಾ ಹೆಣಗಿದುದು ಹಾಗೂ ಇವನ ಮಗಳಾದ ಅನಿತಾ ಹೊಸ ತಲೆಮಾರಿನವಳಾಗಿ ಇಂತಹ ಘನೀಕೃತ ಸಾಮಾಜಿಕ ಕಟ್ಟುಪಾಡುಗಳ ರಚನೆಗಳನ್ನು ಛಿದ್ರಗೊಳಿಸುವ ಭಂಜಕಿಯಾಗಲು ಸ್ಪೋಟಗೊಂಡವಳ ಕಥೆ ಇದು. ಅವಳಾದರೂ ಎಂತವನ ಜೊತೆಯಾಗುತಾಳೆ ಎಂಬುದನು ಕುನ್ನಗೆಂಪಿಯು ಕಂಡರಿಸುವ ಮಾತುಗಳಲ್ಲೇ ಕೇಳಬೇಕು. “ಅಮ ಮಾದೇಸ ಅಲ್ಲ. ನಮ್ಮೂರ ಆದೇಶ ಕವೈ… ಗಂಡಲ್ಲ ಕವೈ… ಆಮ ನಮ್ಮ ಕೇರಿಯ ಸಿಡಿಗುಂಡು ಕವೈ… ಆಮ ಒಂದು ಕಾಜಗ ಬರುದ್ರೂ ಸಾಕು ನಮ್ಮ ಕೇರಿ ಗಲ್ಲಿಗಲ್ಲಿಗಳು ಸುದ್ದ ಆಗವು. ಕಂಬದ ಲೈಟುಗಳು ಬೆಳಗವು. ಸೊಸೈಟಿಲಿ ಅಕ್ಕಿ ಸಕ್ಕರವ ಕರುದು ಕರುದು ಕೊಡವು”. ಹೀಗೆ ಹೊಸ ತಲೆಮಾರಿನ ಸಾಮಾಜಿಕ ನ್ಯಾಯದ ಚಳವಳಿಯ ಧ್ವನಿಯಾದ ಮಾದೇಶ ಮಾಯವಾದ ಕತೆ ಇದು.
ತೊಂಭತ್ತರ ದಶಕಕ್ಕೂ ಹಿಂದಿನ ನಮ್ಮ ಗ್ರಾಮಸಮಾಜದ ತಲೆಮಾರಿನವರಿಗೆ ಹಾಗೂ ಆ ಕಾಲದ ಸಾಹಿತ್ಯ ಕೃತಿಗಳ ಓದುಗರಿಗೆ ಸಾತ್ಕಾರ ಸೀನಪ್ಪ, ಭಾಗ್ಯಮ್ಮ, ಅರುಸಯ್ಯ, ಉರಿಮೀಸ ಸೀಗಯ್ಯ, ರಾಚ, ಪಿಟುರಯ್ಯ, ಮಲ್ಲಮ್ಮ, ಚೆನ್ನಿ, ಚಿಕ್ಕತಾಯಮ್ಮರಂತಹ ಪಾತ್ರಗಳು ಚೆನ್ನಾಗಿಯೇ ಗೊತ್ತು. ಆದರೆ ತೊಂಭತ್ತರ ದಶಕದೀಚೆಗೆ ಹೊಸತಲೆಮಾರಿನ ಪಾತ್ರವಾಗಿ ‘ಪಂತಿಸೇವ ಊಟಕ್ಕೆ ಬರಲು ಖರ್ಚಾಗುವ ದುಡ್ಡಿನಲಿ ಇಲ್ಲೆ ಮಾಂಸ ತಕ್ಕಂದು ಉಣ್ಣಬಹುದು‘ ಎಂಬುವ ಮನಸ್ಥಿತಿಯ ಕುಳ್ಳಮ್ಮನ ಮಗ ನಟ್ರಾಜು ಗೊತ್ತಿಲ್ಲ. ಹಾಡುಗಾರನಾಗಿ ತನ್ನ ವಾರಿಗೆಯ ಮೇಲ್ವಾತಿಯ ಶ್ರೀಮಂತ ಹುಡುಗಿ ಅನಿತಾಳನ್ನು ಒಲಿಸಿಕೊಂಡು ತನ್ನ ಹಟ್ಟಿಕೇರಿಗೆ ಕರೆದುಕೊಂಡು ಬಂದು ಸಂಸಾರ ಮಾಡಬಲ್ಲ ಧೈರ್ಯವಂತ ಆದೇಶನೆಂಬ ಮಾದೇಶ ಗೊತ್ತಿಲ್ಲ. ಹೊಲೆಮಾದಿಗರ ತಂದೆತಾಯಿಗಳಿಗೆ ಹುಟ್ಟಿದ ಮಗನಾಗಿ ಹಳ್ಳಿಯ ಗವರ್ಮೆಂಟ್ ಕಾಲೇಜಿನವನಾದರೂ ಪಟ್ಟಣದ ವಿದ್ಯಾರ್ಥಿಗಳಿಗೆ ಸೆಡ್ಡು ಹೊಡೆದು ಓದುವ ಓಡುವ ಅನಾಥ ಮಾಲಿಂಗನ ಛಲ ತಿಳಿದಿಲ್ಲ. ಮಾದೇಶನ ಸಾವಿನ ನಂತರವೂ ಜೀವಪ್ರೀತಿಯ ಬೇರುಗಳನ್ನು ಸಡಿಲಿಸದೆ ಜೀವನ್ಮುಖಿಯಾಗಿ ಮಾಲಿಂಗನ ಹೃದಯಸೇತುಗಾಗಿ ಹಂಬಲಿಸಿ ಬಾವಿಗೆ ಬೀಳಲು ಕೂಡಾ ಸಿದ್ದಳಾಗುವ ಅನಿತಾಳ ಅರುಮಾನವನ್ನು ಹಳೆತಲಮಾರುಗಳಷ್ಟೇ ಅಲ್ಲದೆ ಈಗಿನ ಸಾಹಿತ್ಯವೂ ಸಹ ಕಂಡರಿತಿಲ್ಲ. ಈಗಿನ ತಲೆಮಾರಿಗೆ ಮತ್ತು ಸಾಹಿತ್ಯಕ್ಕೆ ದಲಿತರೊಂದಿಗೆ ಬಾಳುವೆ ನಡೆಸಲು ಸಿದ್ಧಳಾಗಿ ಬರುವ ಅನಿತಾಳ ಎದೆಗಾರಿಕೆ, ದಂಗೆ ಏಳುವ ಮಾದೇಶನ ಧೈರ್ಯ. ಓದುತ್ತಾ ಓಡಬಲ್ಲ ಮಾಲಿಂಗನ ಛಲ ಚೆನ್ನಾಗಿಯೇ ಅರ್ಥವಾಗುತ್ತಿದೆ. ಸಾಹಿತ್ಯ ಕೃತಿಯ ಮೂಲಕ ಲೇಖಕರು ತರುವ ಸಾಮಾಜಿಕ- ರಾಜಕೀಯ ಪರಿಣಾಮದ ಪ್ರಶ್ನೆಯೂ ಇಲ್ಲಿದೆ.
ಚಾಮರಾಜನಗರ ಸೀಮೆಯ ಗ್ರಾಮಸಮಾಜದ ಎರಡು ತಲೆಮಾರುಗಳ ಕತೆಯನ್ನು ಗದ್ಯಕಾವ್ಯ ಭಾಷೆಯಲ್ಲಿ ನಿರೂಪಿಸುವಲ್ಲಿ ಹನೂರು ಚನ್ನಪ್ಪ ತೋರಿರುವ ಅಪಾರ ಕಲಾತ್ಮಕ ಜಾಣೆ ಕೃತಿಯ ಉದ್ದಕ್ಕೂ ಎದ್ದು ಕಾಣುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅಪಾರ ಮಾನವ ಪ್ರೀತಿಯಿಂದ ಈ ಕತೆಯನ್ನು ಚನ್ನಪ್ಪ ನಿರೂಪಿಸಿದ್ದಾರೆ. ಸಾತ್ಕಾರ ಸೀನಪ್ಪ, ಚೆನ್ನಿ, ಕುನ್ನಗೆಂಪಿ, ಚಿಕ್ಕತಾಯಮ್ಮ, ಉರಿಮೀಸ ಸೀಗಯ್ಯ, ಅರುಸಯ್ಯ ಮುಂತಾದ ಹಳೆತಲೆಗಳ ಬಗ್ಗೆ ಸಾಕಷ್ಟು ಪ್ರೀತಿಯಿದ್ದೂ ಸಾಮಾಜಿಕ- ರಾಜಕೀಯ ಪರಿಣಾಮದ ದೃಷ್ಟಿಯಿಂದ ಹನೂರು ಚನ್ನಪ್ಪನವರು ತನ್ನ ಗಮನವನ್ನು ಅನಿತಾ, ಮಾದೇಶ ಮತ್ತು ಮಾಲಿಂಗನ ಕಡೆಗೆ ಹೆಚ್ಚಿನದಾಗಿ ಕೇಂದ್ರೀಕರಿಸಿ ತನಗಿರುವ ಸಾಮಾಜಿಕ ಬದ್ಧತೆಯನ್ನು ತೋರಿಸಿದ್ದಾರೆ.
ಸಾಮಾಜಿಕ ಕಟ್ಟುಪಾಡುಗಳನ್ನು ಉಲ್ಲಂಘಿಸುವ ಹಾಗೆಯೇ ಪ್ರಶ್ನಿಸುವ ಹೊಸ ತಲೆಮಾರು ಎಂಭತ್ತರ ದಶಕದೀಚೆಗಿನ ಸಾಹಿತ್ಯಕ್ಕೆ ಪರಿಚಯವಾಯಿತು. ಇಂತಲ್ಲಿ ಸಾತ್ಕಾರ ಸೀನಪ್ಪನವರು ಹೊಳಕರ ಮಾರಮ್ಮನಿಗೆ ಹರಕೆ ಹೊತ್ತು, ಆ ಹರಕೆಯನ್ನು ತೀರಿಸುವ ಜವಾಬ್ದಾರಿಯನ್ನು ದಲಿತರ ಮೇಲೆ ಹೊರಿಸಿದಾಗ ಓದಿರ ಗಂಡು ನಿಂಗ್ರಾಜು, “ಅವೈ.. ಹರುಕ ಹೊತ್ತಿರದು ಅವರು. ಅದುನ್ನ ತೀರಿಸೋದು ನಾಮ ?” ಎಂದು ಪ್ರಶ್ನಿಸುತ್ತಾನೆ. ಓದಿರ ಇನ್ನೊಬ್ಬ ಗಂಡು ಕಪಿಲು, “ಇದುನ್ನ ಯಾವ ಕಾಲ ಅನ್ನಂಡಿದ್ದರಿ? ನಮಗೂ ಸ್ವಾಭಿಮಾನ ಅದ. ಅವುರು ಹೇಳ್ವಂಗೆಲ್ಲಾ ಕೇಳ್ತ ಕೂತಿರಕ ಇದು ನಿಮ್ಮ ಕಾಲವಲ್ಲ” ಎಂದು ಸಿಡಿಮಿಡಿಗೊಳ್ಳುತ್ತಾನೆ. ಕುಡಿದ ಅಮಲಿನಲ್ಲಿ ಸಾತ್ಕಾರ ಸೀನಪ್ಪನ ಸಾಮಾಜಿಕ ಹೆಚ್ಚುಗಾರಿಕೆಯನ್ನು ಪ್ರಶ್ನಿಸುವ ಚಿಕ್ಕೇರಿ ಹೆಂಡ್ಗುಡುಕ ಮಾದ, “ಮೇಲು ಕೀಳುನ ಬಾಲ ಹಿಡುಕ ಹೋದರ ಅವುನಿಗಿಂತ ನಾನೇ ಮೇಲು ಕಣಯ್ಯ !‘ ಎಂದು ತಾನೊಬ್ಬ ‘ದೇವರಗುಡ್ಡ‘ನಾಗಿ ‘ಹುಟ್ಲಿಂಗ‘ ಎಂದು ಕರೆಯಲಾಗಿರುವ ಪ್ರಕೃತಿ ಮೂಲದ ರುದ್ರಾಕ್ಷಿಯನ್ನು ಕಟ್ಟಿಕೊಂಡು ಶಿವನ ಮಗನಾಗಿದ್ದೇನೆಂಬ ಗುರುತಿಗೆ ತನ್ನ ಕುತ್ತಿಗೆಯಲ್ಲಿರುವ ಲಾಂಛನವನ್ನು ತೋರಿಸುತ್ತಾನೆ. ” ನಿಮ್ಮ ಸಾತ್ಕಾರ ಹಾಕಿದ್ದಾನಲ್ಲ ಅದೇನಾ ಹೇಳಿ ಮಂತ?” ಎಂದು ಪ್ರಶ್ನಿಸುತ್ತಲೇ ಮೇಲು ಕೀಳೆಂಬ ಸಾಮಾಜಿಕ ಚೌಕಟ್ಟನ್ನು ಮೀರಲು ಹವಣಿಸುತ್ತಾನೆ. ಪ್ರಕೃತಿ ನಿರ್ಮಿತ ರುದ್ರಾಕ್ಷಿ ಎದುರಿಗೆ ಸಾತ್ಕಾರ ಸೀನಪ್ಪ ಕಟ್ಟಿರುವುದು ಮನುಷ್ಯ ನಿರ್ಮಿತ ಕೃತಕ ಎಂಬುದನ್ನು, ಮೇಲುಕೀಳಿನ ಜಾತಿ ಪದ್ಧತಿ ಕೂಡಾ ಮನುಷ್ಯ ನಿರ್ಮಿತವೆಂಬ ದರ್ಶನ ಮಾಡಿಸುತ್ತಾನೆ.
ಇನ್ನು ಹೊಸ ತಲೆಮಾರು ಪ್ರಶ್ನಿಸುವ ಬಗೆಯನ್ನು ಗುರುತಿಸುವುದಾದರೆ, ಸಾತ್ಕಾರ ಸೀನಪ್ಪನ ಜಾತಿ ಅಹಂಕಾರ, ಮಂಗಳಾರತಿ ತಟ್ಟೆಕಾಸು ಕದ್ದ ಆರೋಪ ಹೊರಿಸಿ ಹೊಲೆಮಾದಿಗರ ಓದಿರ ಐಕಳನ್ನು ಹುಣಸೆ ಚಬ್ಬದಿಂದ ಬಾರಿಸುವ ಹೊಳಕರ ಮಾರಮ್ಮನ ಗುಡಿಯ ಪೂಜಾರಿಯ ಧಾರ್ಮಿಕ ಠೇಂಕಾರ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದ ಕೆಳಗೆ ತಾಳಿಕೆ ಬಾಳಿಕೆಗೆ ಬರಲಾರವು.
“ಹೊಳಕರ ಮಾರಮ್ಮ ಹೆಣ್ಣು ದೇವರು ತಾನಾ ? ಹೆಣ್ಣು ಅಂತಾದ್ರಾ ಗಂಡಸು ಮೇಲ ಅದ್ಯಾಗುಡ ಬಂದದು ?” ಎಂದು ಪ್ರಶ್ನಿಸುವ ಕಪಿಲು- ನಾಗನಂತಹ ಓದಿರ ಗಂಡುಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆಯೂ ಬಲಿಯುತ್ತಿದೆ. “ಉಡೋ ದೇವುವೆ ಪುಯ್ಯ ಬುಟ್ಟದಾ ?” ಎಂದು ಮೈಮೇಲೆ ದೇವರು ಬರಿಸಿಕೊಳ್ಳೋ ಪೂಜಾರಿಯನ್ನು ಲೇವಡಿ ಮಾಡಿಕೊಂಡು ನಗುವ ಶಿವುಲಂಕಾರಿ ಮತ್ತು ಪಕಾಟಿಯಂತಹ ಇವತ್ತಿನ ಹುಡುಗರು ಧಾರ್ಮಿಕ ಅಧಿಕಾರ ರಚನೆಗಳನ್ನು ಪ್ರಶ್ನಿಸತೊಡಗಿದ್ದಾರೆ.
ಕತೆಯ ಹಂದರದ ದೃಷ್ಟಿಯಿಂದ ‘ಕಬ್ಬಿಣದ ಕುದುರೆಗಳು‘ ತೊಂಭತ್ತರ ದಶಕದ ತಲೆಮಾರಿನ ಕಥನವಾದರೂ ಹನೂರು ಚನ್ನಪ್ಪನವರು ಇಲ್ಲಿ ಕಟ್ಟಿರುವ ಕಥಾರೂಪ ಹಾಗೂ ಪಾತ್ರಗಳನು ಹಿಗ್ಗಿಸಿರುವ ಆಂತರಿಕ ಕಥಾ ವಿಸ್ತಾರ ತೀವ್ರ ಬೆರಗು ಮೂಡಿಸುತ್ತದೆ. ಇದು ಕನ್ನಡದ ಕಥನ ಸಾಹಿತ್ಯದಲ್ಲಿ ಕವಿಯೊಬ್ಬನು ರೂಪಕಗಳನ್ನು ನಿರೂಪಿಸಿರುವ ಜಾಣೆಯ ಬಗೆಗೆ ಹೆಚ್ಚಿನ ಕುತೂಹಲ ಹುಟ್ಟಿಸುತ್ತದೆ. ಇಲ್ಲಿ ಚನ್ನಪ್ಪನವರು ಪ್ರಯೋಗಿಸಿರುವ ಪ್ರತಿಮೆಯ ಪ್ರತೀಕಗಳು, ರೂಪಕಗಳು ಕೃತಿಯ ಕಥಾರೂಪಕ್ಕೂ ಮತ್ತು ಆಂತರಿಕ ಕಥಾ ವಿಸ್ತಾರಕ್ಕೂ ನಡುವೆ ಇರುವ ಸಾವಯವ ಸಂಬಂಧದ ಪ್ರಶ್ನೆಗಳನ್ನು ಕೂಡಾ ಎತ್ತಬಲ್ಲವಾಗಿವೆ. ಅಂತಹ ಹಲವಾರು ರೂಪಕಗಳಿಂದಾಗಿಯೇ ಕತೆಯ ನಿರೂಪಣೆಯು ದೇಶಿ ಗದ್ಯಕಾವ್ಯ ಶೈಲಿಯಲ್ಲಿ ಆವರಿಸಿಕೊಂಡಿದೆ. ಜಾನಪದೀಯ ಮಲೆಮಹದೇಶ್ವರ ಕಾವ್ಯ ಮತ್ತು ಮಂಟೇಸ್ವಾಮಿ ಕಾವ್ಯದ ಪ್ರೇರಣೆಯೂ ಇದರ ಹಿನ್ನೆಲೆಯಲ್ಲಿದೆ. ಕಾವ್ಯರೂಪಕಗಳನ್ನು ಕಾದಂಬರಿಯಲ್ಲಿಯೂ ಪ್ರಯೋಗಿಸಿರುವ ನೆಲೆಯಲ್ಲಿ ಈ ಕೃತಿಯನ್ನು ವಿಶ್ಲೇಷಿಸಿದರೆ ಇದರ ಮಹತ್ವ ನಮಗೆ ತಿಳಿಯುತ್ತದೆ.
ಸಾತ್ಕಾರ ಸೀನಪ್ಪನ ಕಬ್ಬಿನ ಗದ್ದೆಯ ಮಧ್ಯದಲ್ಲಿ ಕೆಟ್ಟು ನಿಂತಿದ್ದ ಬಿಳಿ ಬಣ್ಣದ ಜೀಪೊಂದು ತುಕ್ಕು ಹಿಡಿಯಲು ಕಾತುರವಾಗಿರುತ್ತದೆ. ಇಲ್ಲಿ ಪ್ರಯೋಗಿಸಲಾಗಿರುವ ಜೀಪಿನ ರೂಪಕವು ತಂದೆಯಾಗಿ ತನ್ನ ಮಗಳಾದ ಅನಿತಾಳ ಬದುಕನ್ನೇ ತುಕ್ಕು ಹಿಡಿಸಲು ಪ್ರಯತ್ನಿಸಿದ ಸಂಚನ್ನು ಬೇಧಿಸುತ್ತದೆ. ಅನಿತಾಳನ್ನು ಪ್ರೀತಿಸಿ ಕೈಹಿಡಿದ ಹಾಡುಗಾರ ಮಾದೇಶನ ದಲಿತರ ಕೇರಿಗೆ ಬಂದ ಸಾತ್ಕಾರ ಸೀನಪ್ಪ ಮತ್ತು ಭಾಗ್ಯಮ್ಮ, ಮಗಳನ್ನು ಮನೆಗೆ ಕಳಿಸಿಕೊಂಡಬೇಕೆಂದು ಬಿನೈಸಿಕೊಳ್ಳುವಾಗ ನಿಂಗಯ್ಯನ ಕೈಗಳಿಗೆ ಗರಿಗರಿ ನೋಟಿನ ಎರಡು ಕಂತೆಗಳನ್ನಿಟ್ಟು ಜೀಪಿನಲ್ಲಿ ಹೊರಟುಹೋಗುತ್ತಾರೆ. ‘ಜೀಪು ಧೂಳು ಎಬ್ಬಿಸಿಕೊಂಡು ಹೊರಡಲು ಅದರ ಕಣಗಳು ಮಾತ್ರ ಗರಿ ನೋಟುಗಳ ಮೇಲೆ ಕೂರಲು ಆತುರಪಡುತ್ತಿತ್ತು‘.ಎನುವಾಗ ಮಾದೇಶನ ಮೇಲೆ ಕರಾಳ ರಾತ್ರಿಯಲ್ಲಿ ಇದೇ ಜೀಪು ಹರಿದುಹೋಗಿ ಬಲಿ ಪಡೆದು ನಂತರದಲ್ಲಿ ಕಬ್ಬಿನ ಗದ್ದೆಯ ಸೋಗು ಮುಚ್ಚಿಕೊಂಡು ತುಕ್ಕು ಹಿಡಿಯಲು ಕಾತರಪಡುತ್ತದೆ. ತುಕ್ಕು ಜೀಪಿನ ರೂಪಕವು ಹಳೆ ತಲೆಮಾರಿನ ಮೌಲ್ಯಗಳ ಮಾದರಿ ಸಹ ತುಕ್ಕು ಹಿಡಿಯುವುದನ್ನು ಸಂಕೇತಿಸುತ್ತಲೇ ಈ ಕಥೆಯ ಒಳನೇಯ್ದೆಯ ವಿಸ್ತಾರಕ್ಕೂ ರೂಪಕವಾಗಿ ನಿಲ್ಲುತ್ತದೆ.
ಕತೆಯ ಆಂತರಿಕ ವಿಸ್ತಾರ ಈ ಕೃತಿಯ ಪ್ರಧಾನ ಲಕ್ಷಣ. ಇಲ್ಲಿಯೇ ಇನ್ನೊಂದು ರೂಪಕವನ್ನು ನೋಡುವುದಾದರೆ ಮನೆಯಾಳು ಚೆನ್ನಿಯೊಂದಿಗೆ ಕಡಲೇಕಾಯಿ ಹೊಲದಲ್ಲಿ ನಿಂತುಕೊಂಡಿದ್ದ ಅನಿತಾ, “ಕಡಲೇಕಾಯಿ ಕೀಳೋದು ಯಾವಾಗ ಚೆನ್ನಿ ?” ಎಂದು ಪ್ರಶ್ನಿಸುತ್ತಾಳೆ. “ಕೀಲ್ವೇಕು ಅಮ್ಮಾ… ಇನ್ನಿಪ್ಪತ್ತು ದಿನ. ಅವುಸಿಕೊಂಡಿರೋ ಕಾಳುನ ಹಾಗೆ ಬಿಡಕಾಗದು ! ಫಲ ಒಳಗೆ ಬಲಿತು ಬಿಟ್ಟರೆ ಕಷ್ಟ‘ ಎನ್ನುತ್ತಾಳೆ ಚೆನ್ನಿ. ಚೆನ್ನಿಯ ಮಾತಿಗೆ ಕಂಪಿಸಿದ ಅನಿತಾ ತನಗರಿವಿಲ್ಲದಂತೆ ತನ್ನ ಕೈಯನ್ನು ಹೊಟ್ಟೆಯ ಮೇಲಿನ ಬಟ್ಟೆಯ ಮೇಲಾಡಿಸಿ ತಕ್ಷಣಕೆ ಕೆಳಗಿಳಿಸಿಕೊಳ್ಳುತ್ತಾಳೆ.. ಹೊಟ್ಟೆಯ ಮೇಲೆ ಕೈಯಾಡಿಸಿ ಕೆಳಗಿಳಿಸಿಕೊಳ್ಳುವ ರೂಪಕವು ಅನಿತಾಳ ಬಸುರಿನ ಸಮಸ್ಯೆಯನ್ನು ಸೂಚಿಸುತ್ತದೆ.
ಕಬ್ಬಿನ ಗದ್ದೆಯಲ್ಲಿ ಕೆಟ್ಟುನಿಂತು ತುಕ್ಕು ಹಿಡಿಯುತ್ತಿರುವ ಬಿಳಿ ಜೀಪನ್ನು ನೋಡಿದ ಅನಿತಾ, “ಬಹುಶಃ ಅದರ ಸ್ಥಿತಿ ನನಗಿಂತ ಭಿನ್ನವಿಲ್ಲ ! ಅದನ್ನಾದರೂ ರಿಪೇರಿ ಮಾಡಿ ಮತ್ತೆ ಓಡಿಸಬಹುದೇನೋ ? ಆದರೆ ನನ್ನನ್ನು?” ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಾಳೆ. ಹೀಗೆ ಗದ್ಯ ಕೃತಿಯಲ್ಲಿಯೂ ಕಾವ್ಯದ ಪ್ರತಿಮೆ ಪ್ರತೀಕಗಳನ್ನು ಅಳವಡಿಸಿರುವ ಚನ್ನಪ್ಪ ಪ್ರಯೋಗಿಸಿರುವ ರೂಪಕಗಳು ನಮ್ಮ ನಮ್ಮ ಕಲ್ಪನೆ ಮತ್ತು ಊಹೆಗೆ ನಿಲುಕುವ ತೆರದಲ್ಲಿ ಆಂತರಿಕ ಕಥಾವಿಸ್ತಾರವನ್ನು ಕಂಡುಕೊಳ್ಳಲು ಸಾಧ್ಯವಾಗಿಸಿವೆ.
ಗ್ರಾಮಸಮಾಜದ ಬದುಕೆಂದರೆ ಬಲು ಸುಂದರವೆಂಬ ಭ್ರಮೆ ಹಪಹಪಿಕೆಗೆ ಬೀಳುವ ನಗರಗಳ ಯಾಂತ್ರೀಕೃತ ಬದುಕಿನ ಜನರಿಗೆ ಗ್ರಾಮಭಾರತದ ಬದುಕು ದುಃಖ, ದುರಂತ, ಸಣ್ಣತನ, ಹಿಂಸೆ. ಮೋಸ ವಂಚನೆಗಳಿರದ ರೊಮಾಂಟಿಕ್ ಜೀವನವೆಂದು ಒಪ್ಪಿಸದೆ ಗ್ರಾಮಬದುಕು ಸಹ ಕೆಸರಿನ ಕೂಪವೆಂದು ಈ ಕಾದಂಬರಿ ದುರಂತ ಸತ್ಯಗಳನ್ನು ಒಪ್ಪಿಕೊಳ್ಳಲು ನಮ್ಮನ್ನು ಸಿದ್ದರನ್ನಾಗಿಸುತ್ತದೆ.
ದೊಡ್ಡಕೇರಿ ಹೊಲೆಯರ ಮತ್ತು ಚಿಕ್ಕೇರಿ ಮಾದಿಗರ ನಡುವೆ ಹೊಳಕರ ಮಾರಮ್ಮ ದೇವತೆಯ ಪಂತಿಸೇವೆಯ ಬಾಡು ಅಟ್ಟುಣ್ಣುವ ವಿಷಯದಲ್ಲಿ ಬಿಕ್ಕಟ್ಟು ಉದ್ಭವಿಸಿದಾಗ ಸಾತ್ಕಾರ ಸೀನಪ್ಪನು, ಬಂಜಾರರ ಲಚ್ಚುಮನಾಯ್ಕನಿಗೆ ಅಡುಗೆ ಮಾಡಿ ಊಟಕ್ಕೆ ಬಡಿಸುವ ಜವಾಬ್ದಾರಿಯನ್ನು ವಹಿಸುತ್ತಾನೆ. ಅಟ್ಟುಣ್ಣುವ ವಿಷಯದಲ್ಲಿಯೂ ಜಾತಿಯ ಪರಸ್ಪರ ಮೇಲಾಳ್ವಿಕೆಯನ್ನು ಕಾಯ್ದುಕೊಳ್ಳುವ ಜಿಗುಟುತನ ತೋರಿಸುವ ಹೊಲೆಮಾದಿಗರು, ಬಂಜಾರ ಸಮುದಾಯದ ಲಚ್ಚುಮನಾಯ್ಕ ಅಟ್ಟಿಕ್ಕಿದ ಬಿಸಿ ಬಾಡೆಸರು ಬಿಸಿ ರಾಗಿಮುದ್ದೆಯನ್ನು ಪಂತಿಸೇವೆಯ ಸಹಪಂಕ್ತಿಯಲ್ಲಿ ಉಣ್ಣುವಾಗ ಮಾತ್ರ ಐಕ್ಯತೆ ಪ್ರದರ್ಶಿಸುತ್ತಾರೆ. ಪಂತಿಸೇವೆಯ ಕಥನದ ಮೂಲಕ ನಮ್ಮ ಗ್ರಾಮಸಮಾಜದಲ್ಲಿ ಇಂದಿಗೂ ಆಚರಣೆಯಲ್ಲಿರುವ ಜಾತಿ ಪದ್ಧತಿಯ ಮೂಲರೂಪಿ ಸೂಕ್ಷ್ಮಾತಿಸೂಕ್ಷ್ಮ ಸತ್ಯಗಳನ್ನು ಚನ್ನಪ್ಪ ಮರೆಮಾಚದೆ ದಾಖಲಿಸುತ್ತಾರೆ.
ಹೊಳಕರ ಮಾರಮ್ಮನ ಗುಡಿಯೊಳಗಿನ ಹಜಾರದಲ್ಲಿ ಲಚುಮನಾಯ್ಕನ ಬಳಗ ನಿಂತಿದ್ದರೆ ಗುಡಿಯ ಹೊರಗಡೆ ದೊಡ್ಡಕೇರಿ ಮತ್ತು ಚಿಕ್ಕೇರಿ ಜನ ನಿಂತಿರುತ್ತಾರೆ. ಇಂತಹ ಕೊಂಚ ಸಾಮಾಜಿಕ ಮೇಲಾಧಿಕಾರ ಅನುಭವಿಸುವ ಬಂಜಾರರ ಲಚುಮನಾಯ್ಕ ಪಂತಿಸೇವೆಗೆ ಅಟ್ಟಿಕ್ಕುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾನೆ. ತನಗಿಂತಲೂ ಸಾಮಾಜಿಕವಾಗಿ ಕೆಳಗಿರುವ ಹೊಲೆಮಾದಿಗರಿಗೆ ಅಡುಗೆ ಬೇಯಿಸಿ ಬಡಿಸುವ ಬಗ್ಗೆ ಮೂರು ದಿನ ನಿದ್ದೆ ಕೆಡಿಸಿಕೊಳ್ಳುವಷ್ಟು ಅವನು ಅಸಹಿಷ್ಣುತೆ ಅನುಭವಿಸುತ್ತಾನೆ. ಮೆಡ್ಡ ಎಂಬುವವನು “ಆಯ್ತಿನಿ ಎಲ್ಲಾ?” ಎಂದು ಅಡುಗೆ ಸಿದ್ಧತೆಯ ಬಗ್ಗೆ ಲಚುಮನಾಯ್ಕನನ್ನು ಪ್ರಶ್ನಿಸಿದರೆ ಮೆಡ್ಡನ ಪ್ರಶ್ನೆ ಉರಿಯುತ್ತಿರುವ ಒಲೆ ಉರಿಗಿಂತ ಹೆಚ್ಚಾಗಿ ಕಿವಿಗೆ ಬಡಿದಷ್ಟು ಅಸಹನೆ ತುಂಬಿಕೊಂಡ ಲಚ್ಚುಮನಾಯ್ಕ, “ಆಯ್ತಾವ ಕಣ ಬರ್ಬೆಡಾ… ಅಲ್ಲೆ… ನಿಂತೊ” ಎಂದು ಗದರಿಸುತ್ತಾನೆ. ಈ ಪರಿಯ ಗದರಿಕೆಯು ಬಂಜಾರರಿಗಿಂತಲೂ ಕೆಳಗಿರುವ ಹೊಲೆಮಾದಿಗರು ಅಡುಗೆ ಸ್ಥಳಕ್ಕೆ ಬರಬಾರದೆಂಬ ಎಚ್ಚರಿಕೆಯೇ ಆಗಿದೆ. ಎಡಗೈ-ಬಲಗೈ ಎಂದು ಸೀಳಿಕೊಂಡಿರುವ ಹೊಲೆಮಾದಿಗರು ಮೇಲ್ಟಾತಿಗಳ ಸೇವಾ ವರ್ಗದವರಾಗಿ ಕುಳವಾಡಿಕೆ ಬಿಟ್ಟಿ ಚಾಕರಿಯನ್ನು ಒಟ್ಟಿಗೆ ಬೆರೆತು ನಿರ್ವಹಿಸುತ್ತಿದ್ದರೂ ಇವರ ನಡುವೆಯೇ ಸಹಪಂಕ್ತಿ ಭೋಜನ ಮತ್ತು ಮದುವೆ ಸಂಬಂಧಗಳು ಏರ್ಪಡದಿರುವ, ನಿಷೇಧ ಹೇರಿಕೊಂಡಿರುವ ಸಾಮಾಜಿಕ ವಾಸ್ತವಾಂಶಗಳನ್ನು ಮರೆಮಾಚದಿರುವ ಹನೂರು ಚನ್ನಪ್ಪ, ಈ ಸೋದರ ಸಮುದಾಯಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬಾರದೆಂಬ ಹಾಗೂ ಒಂದಾಗಿ ಬೆರೆತುಹೋಗಬೇಕೆಂಬ ಕಳಕಳಿ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ಉರಿಮೀಸ ಸೀಗಯ್ಯನ ಮೂಲಕ “ಎಲ್ಲಾ ಉಣ್ಣದು ಒಂದೇ ಅನ್ನ. ಕುಡಿಯೋದು ಒಂದೇ ನೀರು. ಅದುಕ್ಕ ಯಾಕ ಹೇಳಿ ಭಿನ್ನ ಭೇದ?” ಎಂಬ ತಾತ್ವಿಕ ಸಂದೇಶವನ್ನು ರವಾನಿಸಿದ್ದಾರೆ.
ವಿಸ್ತಾರವಾದ ಕಥಾ ಭೂಮಿಕೆ ಇರುವ “ಕಬ್ಬಿಣದ ಕುದುರೆಗಳು” ಕಾದಂಬರಿಯು ತನ್ನ ಜಾನಪದೀಯ ಕಥಾ ನಿರೂಪಣಾ ಶೈಲಿ, ಕಾವ್ಯಾತ್ಮಕ ಭಾಷೆ, ಆಂತರಿಕ ಕಥಾ ವಿಸ್ತಾರ ಮುಂತಾದ ಗುಣಾತ್ಮಕ ಸಮೃದ್ಧಿಯ ಜೊತೆಜೊತೆಗೆ ಅಮೂರ್ತವಾದ ತಾತ್ವಿಕ ಸಮಸ್ಯೆಗಳನ್ನು ಕೂಡಾ ಹೊರಹಾಕಿದೆ.
ಕುಳ್ಳಮ್ಮ ತನ್ನ ಮಗ ನಟರಾಜು ಜೊತೆ ಸಂಭಾಷಿಸುತ್ತಿದ್ದ ಟೆಲಿಫೋನ್ ಕಾಯಿನ್‌ಬೂತ್ ಕಾಲಘಟ್ಟ ಸರಿದುಹೋಗಿ ಎಷ್ಟೋ ಕಾಲವಾಯಿತು. ಈಗೇನಿದ್ದರೂ ಲ್ಯಾಪ್ಟಾಪ್, ಆಂಡ್ರಾಯ್ಡ್ ಸ್ಮಾರ್ಟ್ ಫೋನ್, ಗೂಗಲ್ ಜಾಲತಾಣದಲ್ಲಿ ಜಾಲಾಡುವುದೇ ವಿಜೃಂಭಿಸುತ್ತಿದೆ. ಇಂತಹ ಹೊತ್ತಿನಲ್ಲಿಯೂ ಲೇಖಕರು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದಿನ ಕಾಲಬಿಂದುವಿನಲ್ಲಿ ನಿಂತು ಇಡೀ ಕಥೆಯನ್ನು ನಿರೂಪಿಸಬೇಕಾದ ಜರೂರತ್ತು ಏನಿತ್ತು ?
ಜಾತಿ ಪದ್ಧತಿಯ, ಸೋಷಿಯಲ್ ಡೈನಾಮಿಕ್ಸ್ ಸ್ಥಿತ್ಯಂತರವಾಗುತ್ತಿರುವಾಗಲೂ ಕಾರ್ಪೋರೇಟ್ ಕ್ಯಾಪಿಟಲಿಸಂ ಬಂಡವಾಳಿಗರ ಎದುರು ಆರುಸಯ್ಯ, ಸೀಗಯ್ಯ, ಪಿಟುರಯ್ಯ, ರಾಚ ಅಷ್ಟೇ ಯಾಕೆ ಸಾತ್ಕಾರ ಸೀನಪ್ಪನೇ ತರಗೆಲೆಗಳಾಗಿ ತೂರಿಕೊಂಡು ಹೋಗುತ್ತಿರುವಾಗ ವರ್ತಮಾನದ ಹೊಸ ತಲೆಮಾರು ನಿರೀಕ್ಷಿಸುತ್ತಿರುವ ಅಗತ್ಯಗಳೇನು ? ಎದುರಿಸುತ್ತಿರುವ ಆತಂಕಗಳೇನು ? ಅಂಬೇಡ್ಕರೋತ್ತರ ಸಾಮಾಜಿಕ ಚಳವಳಿಗಳ ಬಗ್ಗೆಯಾಗಲೀ ಜಾತಿಯ ರಚನೆಗಳನ್ನು ಭಂಜಿಸಲು ಬೇಕಾದ ಸಾಂವಿಧಾನಿಕ ಹತಾರಗಳಾಗಲೀ, ದಲಿತರ ಸಾಮಾಜಿಕ ಬಿಡುಗಡೆಗೆ ಅಂಬೇಡ್ಕರ್ ತೋರಿಸಿದ ರಾಜಕೀಯ ಅಧಿಕಾರ ಸ್ಥಾನಗಳ ತೋರುಬೆರಳಾಗಲೀ ನಮಗಿಲ್ಲಿ ಕಾಣಿಸುವುದಿಲ್ಲ. ಇವು ಈ ಕಾಲದ ಶೋಷಿತರ ಬೇಡಿಕೆಗಳೇ ಆಗಿದ್ದವು. ಸಮುದಾಯಗಳ ಒಳಗಿನಿಂದಲೇ ಈ ಒತ್ತಾಸೆಗಳಿರುವಾಗ ಕಾದಂಬರಿಯಲ್ಲಿ ಬರುವ ಓದಿರ ಐಕಳಾದರೂ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿತ್ತಲ್ಲವೇ ? ಇದು ಲೇಖಕರೇ ತೋರಬೇಕಿದ್ದ ನಿರ್ದಿಷ್ಟ ಮೌಲ್ಯಪ್ರಜ್ಞೆಯಾಗಿತ್ತಲ್ಲವೇ? ಯಾಕೆಂದರೆ ಸಾಮಾಜಿಕ ಸುಡುವಾಸ್ತವಗಳಿಗೆ ಮುಖಾಮುಖಿಯಾಗಿ ಅಸ್ಪೃಶ್ಯತೆಯ ಸಂಕಟವನ್ನು ಮೀರುವ ತೆರಪುಗಳ ಹುಡುಕಾಟಕ್ಕೂ ಲೇಖಕರ ಜೀವನ ಗ್ರಹಿಕೆಗೂ ನಡುವೆ ಸಂಬಂಧವಿರುತ್ತದೆ.
ಅಹೋರಾತ್ರಿಯ ದಾರಿಯಲ್ಲಿ ಬಿಳಿ ಜೀಪಿಗೆ ಸಿಕ್ಕಿ ಹೆಣವಾಗಿ ಬಿದ್ದ ಮಾದೇಶನ ಸಾವನ್ನು ಪೊಲೀಸರು ತನಿಖಿಸುವುದಾಗಲೀ, ಸಾತ್ಕಾರ ಸೀನಪ್ಪನು ಅಂತಹ ತನಿಖೆಯ ಸಾಧ್ಯತೆಯನ್ನು ಬೆಳಕಿಗೆ ಬರದಂತೆ ನೋಡಿಕೊಂಡಿರುವ ಬಗ್ಗೆಯಾಗಲೀ ಈ ಕಥೆಯಲ್ಲಿ ಸುಳಿವಿಲ್ಲ. ಮಾದೇಶನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದು ಸಾಂತ್ವನ ನೀಡುವುದು ಸಾಮಾಜಿಕ ಸುಭದ್ರತೆಯ ದೃಷ್ಟಿಯಿಂದ ತೀರಾ ಅಗತ್ಯ. ಆದರೆ ಕಾಡು ಹೆಣವಾದ ಮಾದೇಶನ ಸಾವಿಗೆ ನ್ಯಾಯ ಸಿಗಲಿಲ್ಲ. ಇದು ಸಾಮಾಜಿಕ ಶೋಷಿತರ ಪಾಡಿನ ಯಥಾಸ್ಥಿತಿ. ಲೇಖಕನ ಕೈಹಿಡಿದು ಮಾದೇಶ ನಡೆಸಬೇಕಿತ್ತೋ ? ಅಥವಾ ಲೇಖಕನೇ ಮಾದೇಶನನ್ನು ಕೈಹಿಡಿದು ನಡೆಸಬೇಕಿತ್ತೋ ? ಅಂತೂ ಕಥೆಯಲ್ಲಿ ಮಾದೇಶನ ನಡಿಗೆಯೆ ಕಾಣಿಸುವುದಿಲ್ಲ. ಆಳುವ ವರ್ಗಗಳು ಬಹು ಹಿಂದಿನಿಂದಲೂ ಕ್ರೌರ್ಯಗಳನ್ನೆಸಗುತ್ತಾ ಸಾಮಾಜಿಕ ಹಿಂಸೆಯನ್ನು ಸಂಪ್ರದಾಯದಂತೆ ಪಾಲಿಸುತ್ತಿರುವಾಗ ಅದನ್ನು ಶೋಷಿತರು ತಾಳ್ಮೆಯಿಂದ ಸಹಿಸಿಕೊಳ್ಳಬೇಕೆಂಬ ಇಂಗಿತಕ್ಕೆ ಪ್ರಸ್ತುತ ಕಾದಂಬರಿಯ ಕಥಾರೂಪ ಒಪ್ಪಿಗೆ ಸೂಚಿಸಿದೆಯೇ ? ಅಂತಹ ಕಥಾರೂಪವನ್ನು ಲೇಖಕರು ಪಟ್ಟುಬಿಡದೆ ಉಳಿಸಿಕೊಳ್ಳಬೇಕಿತ್ತೆ ? ಈಗಿರುವ ಜಾತಿಪದ್ದತಿಯನ್ನು ಉಳಿಸಿಕೊಂಡೇ, ಅದರೆಲ್ಲಾ ಮಾರಿ ಮಸಣಿಯರ ಆಚರಣೆಗಳನ್ನು ಕೈಗೊಳ್ಳುತ್ತಲೂ ದಲಿತರ ಬದುಕಿನ ಸುಧಾರಣೆ ಸಾಧ್ಯವೇ ? ಎಂಬ ಪ್ರಶ್ನೆಯೂ ಇಲ್ಲಿದೆ.
ಹನೂರು ಚನ್ನಪ್ಪನವರು ಇಲ್ಲಿನ ಕಥಾರೂಪದಲ್ಲಿ ನೀಡಿರುವ ಮೌಲ್ಯಪ್ರಜ್ಞೆಯಿಂದ ಈಗಿರುವ ವ್ಯವಸ್ಥೆಯನ್ನು ಕ್ರಾಂತಿಕಾರಕವಾಗಿ ಸುಧಾರಿಸಲು ಆಗುವುದಿಲ್ಲ. ಕಾದಂಬರಿಯೊಳಗೆ ಪ್ರತಿಕ್ರಾಂತಿಯನ್ನು ನಿರ್ಮಿಸಿ ತೋರಬಲ್ಲಷ್ಟು ಕಸುವು ಕಾಣಿಸುವುದೂ ಇಲ್ಲ. ಆದರೆ “ಕಬ್ಬಿಣದ ಕುದುರೆಗಳು” ಕಥಾನಕದಲ್ಲಿ ಅಂತರ್ಗತವಾಗಿರುವ ಮೌಲ್ಯಪ್ರಜ್ಞೆಯು ಪೂರ್ವಿಕ ಸಂಪ್ರದಾಯಗಳ ಇತಿಹಾಸವನ್ನು ಕುರಿತು ಬೆಳಕಿಗೆ ತರುವ ತಾಳ್ಮೆ ವಹಿಸುವ ಮತ್ತು ಉದಾರ ಒಪ್ಪಿಗೆ ನೀಡುವ ಕಡೆಗೇ ಹೆಚ್ಚು ವಾಲಿಕೊಂಡಿದೆ.
ಇಲ್ಲಿ ನಿಜವಾಗಿಯೂ ಗೆಲ್ಲಬೇಕಿದ್ದು ಕೇರಿ ಜನರ ಪಾಲಿಗೆ ಆದೇಶ ಎಂದು ಕಾಣಿಸುವ ಮಾದೇಶ. ಅಂತಹ ಮಾದೇಶನೇ ಮಾಯಾದ ಬಿಳಿಜೀಪಿಗೆ ಸಿಕ್ಕಿ ಬಲಿಯಾಗಿ ಹೋಗುತ್ತಾನೆ. ಇಲ್ಲಿ ಗೆಲ್ಲಬೇಕಿರುವುದು ಜೀತದ ಅನಾಥ ಗಂಡು ಮಾಲಿಂಗನ ಓದು ಮತ್ತು ಓಟ. ಅಂತಹ ಮಾಲಿಂಗನ ಓದು ಮತ್ತು ಓಟಕ್ಕೆ ಅನಿತಾ ಇಂಬಾಗಿ ನಿಲ್ಲುವ ಬದಲು ತನ್ನ ಕಣ್ಣೆದುರಿಗೆ ಉಳಿಸಿಕೊಳ್ಳಲು ಬಯಸುತ್ತಾಳೆ. ಬಡವರ ಮಕ್ಕಳು ಬೆಳೆಯಬೇಕು, ಬೆಳಗಬೇಕು. ಆದರೆ ಮಾದೇಶ ಮತ್ತು ಮಾಲಿಂಗ ಬೆಳೆಯದ, ಮುಂದಕ್ಕೆ ಓಡದ ಕಬ್ಬಿಣದ ಕುದುರೆಗಳಾಗಿ ಎಲ್ಲರನೂ ತೀವ್ರವಾಗಿ ಕಾಡುತ್ತಾರೆ !!
ಲೇಖನ:ಡಾ.ವಡ್ಡಗೆರೆ ನಾಗರಾಜಯ್ಯ 8722724174

