ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿಂದೂ ವಿರೋಧಿ ಕಾಂಗ್ರೆಸ್ಸರ್ಕಾರದ ಆಡಳಿತದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ನಿಷೇಧ ಹೇರಲಾಗಿದೆಯೇ ಎನ್ನುವ ಅನುಮಾನ ರಾಜ್ಯದ ಜನತೆಯನ್ನು ಕಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ.
ಗಣೇಶ ಮೆರವಣಿಗೆಗೂ ಕಲ್ಲು ತೂರಾಟ, ಹನುಮ ಮಾಲಾಧಾರಿಗಳ ಮೇಲೂ ಕಲ್ಲುತೂರಾಟ, ನವರಾತ್ರಿ ಮೆರವಣಿಗೆಗೂ ಅಡ್ಡಿ, ಅಯ್ಯಪ್ಪ ಮಾಲಾಧಾರಿಗಳಿಗೂ ಆಕ್ಷೇಪ, ಓಂ ಶಕ್ತಿ ಪೀಠದ ಪಲ್ಲಕ್ಕಿ ಮೆರವಣಿಗೆ ಮೇಲೂ ಕಲ್ಲೆಸೆತ, ಈಗ ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆಯಲ್ಲೂ ಮತಾಂಧ ಪುಂಡರು ಕಲ್ಲೆಸೆದಿದ್ದಾರೆ.
ಹಿಂದೂ ವಿರೋಧಿ ಸಿದ್ದರಾಮಯ್ಯ ಸರ್ಕಾರವು ತನ್ನ ಅಧೀನದಲ್ಲಿ ಕಲ್ಲೆಸೆಯುವ ಇಲಾಖೆ ತೆರೆದು ಅದರ ಮೂಲಕ ಮತಾಂಧ ಪುಡಾರಿಗಳಿಗೆ ಗೌರವಧನ ನೀಡುತ್ತಿದೆಯೇ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಗೃಹ ಸಚಿವ ಡಾ.ಜಿ ಪರಮೇಶ್ವರ ಅವರಿಗೆ ಬಾಗಲಕೋಟೆಯ ಘಟನೆ ಬಗ್ಗೆ ಏನಾದರೂ ಮಾಹಿತಿ ತಲುಪಿದೆಯೋ? ಅಥವಾ ಇನ್ನೂ “ಗೊತ್ತಿಲ್ಲ”ವೋ? ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

