ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳಕಿದ್ದರೂ ಬೆನ್ನಟ್ಟುವಂತಹ ಕತ್ತಲ ಅಂಕಳಿಮಠದ ಗುಹೆಯೊಳಗೆ ಸುತ್ತ ಹಚ್ಚಿಟ್ಟಿದ್ದ ಹರಳೆಣ್ಣೆ ದೀಪಗಳು ಅಷ್ಟಷ್ಟು ಮುಖಗಳನ್ನು ಪರಿಚಯಿಸುವಂತಹ ವ್ಯವಸ್ಥೆಯಲ್ಲಿ ಬೆಳಕನ್ನ ಚೆಲ್ಲಿಕೊಂಡಿದ್ದವು.ಪೂಜಾರಿ ಮತ್ತು ಸಿದಗಯ್ಯ ಹೆದರಿ ಗರಬಡಿದವರಂತೆ ಮೌನಕ್ಕೆ ಶರಣಾಗಿದ್ದರು.ಮೂರು ನಾಲ್ಕು ಮಾರಳತೆಯಲ್ಲಿ ಹಾಕಿದ್ದ ಅರಿಶಿನ ಕುಂಕುಮದ ರಂಗದಲ್ಲಿ, ನಿಂಬೆಹಣ್ಣು ತೆಂಗಿನಕಾಯಿಗಳು ಉರುಳಿಕೊಂಡು ಪದ್ಮಾಸನದಲ್ಲಿದ್ದ ಪೆನ್ನಯ್ಯನೊಂದಿಗೆ ರೌದ್ರತೆಯನ್ನ ಹರಡಿಕೊಂಡಿದ್ದವು.ತುಸು ಸಮೀಪದ ಮೂಲೆಯಲ್ಲಿ ಗೂಟಕ್ಕೆ ಕಟ್ಟಿದ್ದ ಹುಂಜ ಭೀಬತ್ಸೆಗೆ ಹೆದರಿಯೇನೋ ನೆಲಕ್ಕೆ ರಾವಿಕೊಂಡಿತ್ತು.
ನೋಡು ಸಿದ್ದಗಯ್ಯ ದ್ಯಾಮಯ್ಯ ಹೇಳಿದ ಅಂತ ಈ ಪೂಜೆನ ಇಟ್ಕಂಡೀವ್ನಿ, ಇದು ನಿನ್ನ ಕುಟುಂಬ ಉಳಸಾಕೆ ನಡೆಸ್ತಿರೋ ಪೂಜೆ. ಹೌದ್ರಿ ಅಪ್ಪಾರ ಪೂಜಾರಪ್ಪನೋರು ಎಲ್ಲ ಹೇಳ್ಯಾರೆ,ಈ ಪೂಜೆ ಜೊತೆ ನಿಮ್ಮನ್ನ ನೋಡಿದ ಮ್ಯಾಲೆ ನನ್ನ ಮನ್ಸು ಸಮಾಧಾನಕ್ಕ ಬಂದೈತ್ರಿ..ನೀವು ಹೇಳ್ದಂಗೆ ನಡ್ಕಂತೀನ್ರಿಯಪ್ಪ.
ಸಿದಗಯ್ಯ ಗಮನವಿಟ್ಟು ಕೇಳು ಅಮಾವಾಸ್ಯೆ ಸರಿ ರಾತ್ರಿಗೆ ಪೂಜಾರಿ ಜತೇಲಿ ಕಾಳವ್ವನಿಗೆ ಹರಕೆ ಬಿಟ್ಟಿರೋ ನಿನ್ನ ಮಗಳ ಸಮೇತ ಈ ಸ್ಥಳಕ್ಕೆ ಬರಬೇಕು,ಅವಳು ನಿನ್ನ ಮನೆ ಬೆಳಗೋ ಮಹಾಲಕ್ಷ್ಮಿ,ಅವ್ವನ ಅಪ್ಪಣೆ ಪ್ರಕಾರ ಸರಿರಾತ್ರಿಗೆ ಅವಳ ಸ್ವರ್ಗದ ಬಾಗಿಲು ತೆರೆಯುತ್ತೆ..ನಿನ್ನ ಉದ್ಧಾರಕ್ಕೆ ಅವಳು ಅಲ್ಲಿಗೆ ಹೋಗಲೇಬೇಕು.
ಈ ವಿಷಯದಾಗೆ ಪೂಜಾರಿ ಯಿಂದ ಅಷ್ಟಿಷ್ಟು ತಲೆಗೆ ಮೆತ್ತಿ ಕೊಂಡಿದ್ದ ಸಿದಗಯ್ಯ, ಈ ಹೊತ್ತು ಸ್ವಲ್ಪ ಕಾಲ ಮೈಯಲ್ಲ ಬೆವೆತಂತಾಗಿ ನಡುಗಿ ಹೋದ. ಅಪ್ಪಾರೆ ನಾನು ಅಂದ್ರೆ ಅವಳಿಗೆ ಪಂಚಪ್ರಾಣ. ಹೌದು ಮತ್ತೆ,ಆ ಪಂಚ ಪ್ರಾಣದಿಂದಲೇ ನಿನ್ನ ಮನೆ ಬೆಳಗೋ ಕಾಲ ಹತ್ತಿರ ಬಂದೈತಿ,ಬಾ ಇತ್ತ ರಂಗದ ಮುಂದೆ.
ಸಿದಗಯ್ಯ ಹೆದರಿಕೆಯಲ್ಲಿ ಮೆಲ್ಲನೆ ಸರಿಯ ತೊಡಗುತ್ತಿದ್ದಂತೆಯೇ, ಪಕ್ಕದಲ್ಲಿದ್ದ ದ್ಯಾಮಯ್ಯ ರಟ್ಟೆಯನ್ನ ಬಳಿಸಿದವನೇ ರಂಗದ ಮುಂದಕ್ಕೆ ಎಳೆತರುತ್ತ,ತಡವರಿಸ ಬ್ಯಾಡೋ ಅನುಕೂಲ ಆಗತೈತಿ ಅಂದ್ರೆ ಯಾಕ ಹಿಂಜರಿತಿ.
ಮೌನಕ್ಕೆ ಶರಣಾಗಿದ್ದ ಸಿದಗಯ್ಯ ಕೈಜೋಡಿಸಿದವನೇ ಭೀತನಾಗಿ ರಂಗದ ಎದುರು ಬಂದು ನಿಂತ,ಪೆನ್ನಯ್ಯನ ಮಂತ್ರೋಚ್ಚಾರಗಳು ಪಠಿಸತೊಡಗಿದವು,ಕಣ್ಗಳ ಸೂಕ್ಷ್ಮತೆಯನ್ನು ಅರಿತ ದ್ಯಾಮಯ್ಯ ಹುಂಜವನ್ನ ತಂದು ಕತ್ತರಿಸಿ ರಂಗದ ಮಧ್ಯೆ ಎಸೆದ,ರುಂಡ ಬೇರ್ಪಟ್ಟ ಮುಂಡ ಪಟಪಟನೆ ಅತ್ತಿತ್ತ ಹೆಗರಿಕೊಳ್ಳುತ್ತಲೂ ರಕ್ತ ಎರಚಿಕೊಂಡು ರಂಗ ಮತ್ತಷ್ಟು ಭೀಕರವಾಯ್ತು, ಪ್ರಾಣ ಹೋಗುವ ತನಕ ಒದ್ದಾಡುತ್ತಿದ್ದ ಹುಂಜ ಮೆಲ್ಲನೆ ಕಾಲುಗಳನ್ನ ಸೆಟೆಸಿ ನಿಸ್ತೇಜವಾಯಿತು, ಸಿದ್ದಗಯ್ಯನಿಗಂತೂ ಪ್ರಾಣಪಕ್ಷಿಯೇ ಹೋದಂತಾಗಿತ್ತು.
ಸಿದಗಯ್ಯಾ….. ಪೆನ್ನಯ್ಯನಿಂದ ಹೊರಟ ಧ್ವನಿ ಸಿದಗಯ್ಯನ ಗುಂಡಿಗೆಯನ್ನ ಕ್ಷಣ ಕಾಲ ನಿಲ್ಲಿಸಿದಂತಾಗಿ,ಮೋಡಿ ಪೆನ್ನಯ್ಯನನ್ನೇ ದಿಟ್ಟಿಸಿದ.
ಅಮಾವಾಸ್ಯೆ ಬೆಳಿಗ್ಗೆಯಿಂದಲೇ ನಿನ್ನ ಕೆಲಸ ಪ್ರಾರಂಭಿಸಿಕೊ,ನಿನ್ನ ಸಹಾಯಕ್ಕೆ ದ್ಯಾಮಯ್ಯ ಇರ್ತಾನೆ,ಮಗಳಿಗೆ ಮಡಿ ಮಾಡ್ಸಿ ಹೊಸ ಬಟ್ಟೆ ಉಡಿಸಿ ಕಾಳವ್ವನ ಗುಡಿಯಾಗೆ ಪೂಜೆ ಮಾಡ್ಸಿ,ಹಬ್ಬದ ಊಟ ಮಾಡ್ಸಿ,ಬಿತ್ತೊ ಕಾಳಿನ ಜೊತೆ ನಿನ್ನ ಮಗಳನ್ನು ಇಲ್ಲಿಗೆ ಕರೆದು ತಾ,ಹಾಗೆ ತಗೋ ಇವನ್ನ.. ಪೆನ್ನಯ್ಯ ರಂಗದ ಮಧ್ಯ ಬಿದ್ದಿದ್ದ ತೆಂಗಿನಕಾಯಿ ನಿಂಬೆಹಣ್ಣುಗಳನ್ನ ಸಿದಗಯ್ಯನ ಕೈಗಿಡುತ್ತ, ಅಮಾವಾಸ್ಯೆ ಬೆಳಿಗ್ಗೆ ಅವಳಿಗೆ ಮಡಿ ಮಾಡಿಸುತ್ತಿದ್ದ ಹಾಗೆ, ಇವೆರಡನ್ನು ಅವಳ ಬಟ್ಟೆಗೆ ಕಟ್ಟಿ ಅವಳ ಜೊತೆ ಇಟ್ಟುಬಿಡು,ನಿನ್ನ ಕೆಲಸಕ್ಕೆ ಯಾವುದೂ ಅಡ್ಡಿ ಬರದ ಹಾಗೆ ಎಲ್ಲವೂ ಸರಾಗವಾಗಿ ಸಾಗುತ್ತೆ ಹೂಂ… ಇನ್ನ ಹೊರಡಿ ಎಚ್ಚರವಿರಲಿ ಎಚ್ಚರ…..
ಲೇಖನ: ಕುಮಾರ ಬಡಪ್ಪ, ಚಿತ್ರದರ್ಗ. ನಾಳೆಗೆ…

