ಹರಕೆ ಕಥೆ ಭಾಗ-7: ಕುಮಾರ್ ಬಡಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತುಸು ಸಮಯದ ಹಾದಿಯಲ್ಲಿ

ಹೆಪ್ಪುಗಟ್ಟಿದ ಕತ್ತಲನ್ನು ಸಣ್ಣಗೆ ಸೀಳಿ,ಬೆಳಕು ಮಾಡಿಕೊಂಡಿದ್ದ ಪಂಜು ಹತ್ತಿರವಾದಂತೆಲ್ಲ ಹಾದಿಗೆ ಬೆಳಕು ಮಾಡಿಕೊಟ್ಟಿತ್ತು. ಅಲ್ಲಿಂದ ಮುಂದೆ ಒಂದಷ್ಟು ಭಾಗದಲ್ಲಿ ಬೆಳಕಿನದೇ ಸಾಮ್ರಾಜ್ಯ,ಸುತ್ತುವರಿದ ಪಂಜುಗಳ ಜೊತೆ ಅರಳೆಣ್ಣೆ ದೀಪಗಳು ಜೊತೆಗೂಡಿ ಅಷ್ಟಿಷ್ಟು ಕತ್ತಲನ್ನು ಹಿಮ್ಮೆಟ್ಟಿದ್ದವು. ಮೋಡಿ ಪೆನ್ನಯ್ಯ ಮಡಿಯುಟ್ಟು ರಂಗದ ಮುಂದೆ ಪೂಜೆಗೆ ಸಿದ್ಧತೆ ನಡೆಸಿದ್ದ. ಸರಿರಾತ್ರಿಯ ಹೊತ್ತು, ಎಂದೂ ಕಾಣದ ಈ ಪೂಜೆ, ಪರಿಚಯವಿಲ್ಲದ ಮುಖ ಕಂಡು ಬರಮಿಗೆ ಹೆದರಿಕೆ ಬಲವಾಗಿ, ಅಪ್ಪನ ಕೈಗಳನ್ನು ಹಿಡಿದು ನೋವನ್ನು ತೋಡಿಕೊಂಡ್ಲು.

ಅಪ್ಪಾ ನನಗೆ ಹೆದರಿಕೆ ಆಗ್ತೈತಿ:
ನಾ  ಇದೀನಲ್ಲವ್ವ ಹಂಗ ಹೆದರಿದ್ರೆ ಹೆಂಗೆ,ಈ ಪೂಜೆ ಮಾಡಿದ್ರೇನೇ ನಾವು ಸುಖವಾಗಿರೋದು. ಮತ್ತೆ ಅವ್ವನ್ನ ಬಿಟ್ಟು ಬಂದಿದಿ. ಈ ಪೂಜೆನಾ ನಿಮ್ಮವ್ವ ನಿನ್ನ ತಮ್ಮ ತಂಗಿ ನೋಡ್ಬಾರ್ದು ಅಂತ ಈ ಪೂಜೆ ಮಾಡೋರು ಹೇಳ್ಯಾರೆ, ಬೇಕಂದ್ರೆ ದ್ಯಾಮಯ್ಯನ್ನೇ ಕೇಳು, ಹಂಗಾಗಿ ನಿನ್ನೊಬ್ಬಳನ್ನೇ ಕರ್ಕೊಂಡು ಬಂದೆ,ಸ್ವಲ್ಪ ಹೊತ್ತು ಹೋಗಿಬಿಡಾನ, ಅವರು ಹೇಳಿದಂಗೆ ಕೇಳಿಬಿಡವ್ವ.

- Advertisement - 

 ಸಿದಗಯ್ಯ ತಲೆಯನ್ನು ನೇವರಿಸುತ್ತಲೇ ಮಾತು ಮುಂದುವರೆಸಿದ್ದ, ಬರಮಿ ಅಪ್ಪನನ್ನು ದ್ಯಾಮಯಯನನ್ನು ನೋಡಿ ರಂಗದ ಕಡೆ ಮುಖ ಮಾಡಿದಳು. ವಾಮಾಚಾರದ ದೊಡ್ಡ ರಂಗದ ಮಧ್ಯೆ ನಿಂಬೆಹಣ್ಣು ಕಾಯಿಗಳನ್ನು ಉರುಳಿಬಿಟ್ಟಿದ್ದ ಪೆನ್ನಯ್ಯ, ಬರಮಿಯನ್ನ ದೃಷ್ಟಿ ಇಟ್ಟು ನೋಡುತ್ತಾ ದ್ಯಾಮಯ್ಯನ ಕಡೆ ಸನ್ನೆ ಕೊಟ್ಟ.

ಅಲ್ಲೇ ಕಂದ್ಲಿಗೆ ನೇತು ಹಾಕಿದ್ದ ಬೇವಿನ ಸೊಪ್ಪಿನ ಹಾರನ ಸಿದಗಯ್ಯನ ಕೈಗಿಟ್ಟ ದ್ಯಾಮಯ್ಯ,ಕೊರಳಿಗೆ ಹಾರ ಹಾಕಿ ರಂಗದ ಮಧ್ಯಕ್ಕೆ ಮಗಳನ್ನು ಕರೆತರಲು ಹೇಳಿದ. ಅಪ್ಪನ ಮುಖವನ್ನೇ ನೋಡುತ್ತಿದ್ದ ಬರಮಿ,ಕಂಪಿಸುತ್ತಿದ್ದ ಕೈಗಳಿಂದ ಹಾರವನ್ನ ತೆಗೆದು ತಾನೇ ಕೊರಳಿಗೆ ಧರಿಸಿಕೊಂಡು ಅಪ್ಪನನ್ನ ವರಗಿ ನಿಂತಳು. ಪೆನ್ನಯ್ಯನ ಪೂಜೆ,ರೌದ್ರತೆ ಆವರಿಸಿ ರಂಗೇರಿತ್ತು. ದ್ಯಾಮಯ್ಯ ಬಂದವನೇ ಬರಮಿಯ ಕೈಹಿಡಿದು ರಂಗದ ಮಧ್ಯಕ್ಕೆ ಕರೆತರಲು ಮುಂದಾದ. ಅಪ್ಪನನ್ನೊಮ್ಮೆ ನೋಡುತ್ತಲೇ ಬರಮಿ ಚಲಿಸಿದಳು ರಂಗ ಮದ್ಯಕ್ಕೆ.

- Advertisement - 

ಪೆನ್ನಯ್ಯನ ಮುಖದಲ್ಲಿ ಗೆಲುವಿನ ಮಂದಹಾಸ ಚೆಲ್ಲಿಕೊಂಡಿತ್ತು,ಮಗಳೇ ಸಂತೋಷವಾಗಿ ಮನೆದೇವರು ನೆನೆದು ತಲೆ ಬಾಗಿ ಸ್ವಲ್ಪ ಹೊತ್ತು ನಮಸ್ಕರಿಸಿ ಬಿಡು ಅಂದ.

 ಮತ್ತೊಮ್ಮೆ ಅಪ್ಪನನ್ನ ನೋಡಿದ ಬರಮಿ, ಅಪ್ಪ ನನಗೆ ಯಾಕೋ ಹೆದರಿಕೆ ಆಗ್ತೈತೆ….. ಪಕ್ಕಕ್ಕೆ ಬಾ ಅಂತ ದೈನ್ಯದಿಂದ ಅಪ್ಪನ ಮುಖವನ್ನೊಮ್ಮೆ ನೋಡಿದಳು,ಸಿದಗಯ್ಯ ಗದ್ಗದಿತನಾದ, ದುಃಖ ಉಮ್ಮಳಿಸಿ ಕಣ್ಗಳು ಸಹ ತೇವಗೊಂಡವು.

 ದ್ಯಾಮಯ್ಯ ಅವಳಿಗೆ ಧೈರ್ಯ ಹೇಳುವವನಂತೆ, ಎದುರ್ಕೊಳ್ಳಂತದ್ದೂ ಏನೈತಿ ಇಲ್ಲಿ ನಾವೆಲ್ಲ ಇದೀವಲ್ಲ, ಪೂಜೆ ಅಂದ್ರೇನೆ ಹೀಗೆ.. ಅವರು ಹೇಳ್ದಂಗೆ ಕೇಳು ಅಂತ ತಲೆ ಬಗ್ಗಿಸೋ ಭಂಗಿಯನ್ನ ತೋರಿಸಿದ. ಬರಮಿ ಪೂಜಾರಿಯಂತೆ ಕೈ ಮುಗಿದು ಶಿರ ಭಾಗಿ ನಮಸ್ಕರಿಸಲು ಮುಂದಾದಳು. ಸಿದಗಯ್ಯನ ಉದ್ವೇಗ ತಾರಕಕ್ಕೇರಿತು, ಮುಂದಿನದನ್ನು ನೋಡಲಾಗದೆ ಕಣ್ಗಳು ಮಂಜಾಗಿ ಪ್ರಜ್ಞೆ ತಪ್ಪಿ ನಿಂತಲ್ಲೇ ಕುಸಿದ.

ಸುಧಾರಿಸ್ಕಳೋ ಸಿದಗಯ್ಯ ಇನ್ನೂ ಇಬ್ಬರು ಮಕ್ಕಳು ಅವ್ರೆ, ಬರಮಿನೂ ಕೂಡ ಮ್ಯಾಲ ನಿಂತು ನಿನ್ನ ಸಂಸಾರನ ಸಲವುತಾಳೆ,

ಈ ಮಹಾ ಪೂಜೆಗಿಟ್ಟ ಆ ಬಿತ್ತನೆ ಕಾಳುಗಳು ನಿನ್ನ ಬದುಕನ್ನೇ ಬದಲಾಯಿಸ್ತವೆ,ದೇವಿಗೆ ಸಂತೋಷ ಆಗೈತಿ,ಮುಂದೆ ಮಳೆ ಬಂದ್ರು ಬರದಿದ್ರೂ ನಿನ್ನ ಹೊಲದಾಗ ಪೈರು ನಳನಳಿಸುತ್ತೆ, ನಿನ್ನ ಕಷ್ಟ ಬಡತನ ಇವತ್ತಿಗೆ ಮುಗೀತು, ಪೂಜಾರಿ ಈ ಪೂಜೆ ರಕ್ತನಾ ಕಾಳಿಗೆ ಬೆರಸಿ ಕೊಡ್ತಾನ, ಬಿತ್ತನೆ ಮಾಡುವಾಗ ಇವನ್ನೇ ಬಿತ್ತು ನಿನ್ನ ಅನುಕೂಲದ ಜೊತೆ ಹಳ್ಳಿಗೂ ಉಪಕಾರ ಆಯ್ತು. ಪ್ರಜ್ಞೆ ತಪ್ಪಿದ್ದ ಸಿದಗಯ್ಯನಿಗೆ ಎಲ್ಲೋ ಅಸ್ಪಷ್ಟವಾಗಿ ಕೇಳುವಂತೆ ಬಾಸವಾಗುತ್ತಿದ್ದವು ಮೋಡಿ ಪೆನ್ನಯ್ಯನ ಯುದ್ಧ ಗೆದ್ದ ರೀತಿಯ ಮಾತುಗಳು. ದ್ಯಾಮಯ್ಯ ಬಿತ್ತನೆ ಕಾಳಿಗೆ ರಂಗದೊಳಗೆ ಚೆಲ್ಲಿದ್ದ  ಬರಮಿಯ ರಕ್ತವನ್ನು ಬೆರೆಸತೊಡಗಿದ್ದ.
ಲೇಖನ
: ಕುಮಾರ ಬಡಪ್ಪ, ಚಿತ್ರದುರ್ಗ.          ನಾಳೆಗೆ……

 

Share This Article
error: Content is protected !!
";