ಹರಕೆ ಕತೆ ಭಾಗ 2-ಕುಮಾರ್ ಬಡಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹರಕೆ ಕತೆ ಭಾಗ 2-ಕುಮಾರ್ ಬಡಪ್ಪ
ಶಾಲೆ ಶುರು ಮಾಡೋಕೆ ಪಂಚಾಯಿತಿ ಮೆಂಬರ್ ನರಸಯ್ಯನ ಒಪ್ಪಿಗೆಯೇನೋ ಆಗಿ ಹೋಗಿತ್ತು
,ಆದರೆ ಕಾಳವ್ವನ ಅಪ್ಪಣೆ ಆಗಿರಲಿಲ್ಲ,ಹಾಗಾಗಿ ಕಾಳವ್ವ ಈ ಹೊತ್ತು ಬನ್ನಿ ಕಟ್ಟೆಗೆ ಬಂದು ಕುಂತಿದ್ಲು. ಸತ್ತೋರು ಕೆಟ್ಟೋರನ್ನ ಒಪ್ಪು ತಪ್ಪುಗಳನ್ನು ಕಾಪಾಡೋಕೆ ನಾನಿದ್ದೀನಿ ಅಂದ್ರೆ,ಈ ಹಳ್ಳಿಯಾಗ ಇನ್ನೇನು ಬೇಕು ನಿಮಗ? ಎಂದಳು ದೇವಿ! ಸುತ್ತ ಹರಡಿಕೊಂಡಿದ್ದ ಪಂಜಿನ ಬೆಳಕಲ್ಲಿ ಹಳ್ಳಿ ಜನಕ್ಕೆ,ಧ್ವನಿ ಆಲಿಸಲು ಅಡ್ಡ ಬರದಂತೆ ಮೊರೆಯುತ್ತಿದ್ದ ಉರುಮೆ- ತಪ್ಡಡಿಗಳ ಕಡ್ಡಿ ಸದ್ದು ಸಣ್ಣಗೆ ಎಲ್ಲೋ ಕೇಳಿಸುವಂತೆ ಗುನುಗಿಕೊಂಡಿದ್ದವು.

ಬೇವಿನ ಸೊಪ್ಪಿನೊಂದಿಗೆ ಹೆಜ್ಜೆಗಳನ್ನಾಕುತ್ತಿದ್ದ ದ್ಯಾಮಯ್ಯ ಆವೇಶಭರಿತನಾಗಿ ಕುಣಿಯತೊಡಗಿದ್ದ! ದೇವರೆಂದರೆ ಸುಮ್ಮನೆಯೇ, ನಾಲ್ಕರ ಜನ ಮುಗಿಬಿದ್ದು ಅವನನ್ನು ಸಮಸ್ಥಿತಿಗೆ ತರುವ ಪ್ರಯತ್ನ ಮಾಡುತ್ತಿದ್ದರು.ಇನ್ನೂ ಕೆಲವು ಹಿರಿಯರು ನಿಂಬೆಕಾಯಿನ ನಿವಾಳಿಸಿ ಎಡಗಾಲಿನಲ್ಲಿ ತುಳಿಯುತ್ತ ಪ್ರಸನ್ನತೆಯನ್ನು ಕೋರಿದ್ದರು. ಅಕ್ಷರ ಕಲಿಯೋರು ಕಲಿಸೋರು ಯಾರಾದ್ರೂ ಇದ್ರೆ ಪ್ಯಾಟಿಗೆ ಹೋಗಿ ಬರಲಿ, ಊರ ಗೋಮಾಳದಾಗ ನನ್ನ ಜಾತ್ರೆಗೆ ಬರೋ ಭಕ್ತರಿಗೆ ಬೀಡು ಬಿಡಾಕೆ ನನ್ನ ಅಪ್ಪಣೆ ಆಗೈತಿ….. ಎಂದಳು ದ್ಯಾಮಯ್ಯನ ಮೈ ಮೇಲೆ ಬಂದ ಕಾಳವ್ವ ದೇವತೆ! ಎದುರುಗಡೆ ಜನರ ಗುಂಪಿನಾಗೆ ಈರಯ್ಯಗೌಡನ ಪಕ್ಕಕ್ಕೆ ಕೈಮುಗಿದು ನಿಂತಿದ್ದ ಮೆಂಬರ್ ನರಸಯ್ಯನ ಕಂಡು ದುರುಗಣ್ಣಿನಿಂದ ಅವನನ್ನು ಕೆಕ್ಕರಿಸುತ್ತಲೇ, ಇದರ ಮ್ಯಾಕ ಯಾವನಾರ ಇಲ್ಲಿ ಸಾಲೆ ಕಟ್ಟುಸ್ತೀನಿ ಅಂತ ಅಂದ್ರೆ ಅವನ ಮನೆಯಾಗೆ ರಕ್ತ ಕಾರಸ್ತೀನಿ….

- Advertisement - 

ನರಸಯ್ಯ ಕೈಮುಗಿಯುತ್ತಲೇ ಒಂದೆರಡು ಹೆಜ್ಜೆ ಹಿಂದೆ ಸರಿದ,ಇವತ್ತು ಒಂದು ಸರ್ಕಾರ ನಾಳೆ ಇನ್ನೊಂದು ಸರ್ಕಾರ,ಹಿಂದಿನಿಂದ ಈ ಹಳ್ಳಿಯಾಗೆ ನೆಲೆಸಿ ನಿಮ್ಮನ್ನು ಉದ್ದಾರ ಮಾಡ್ತಾ ಬಂದಿರೋ ನಾನು ಬೇಕೋ ಬ್ಯಾಡವೋ ಅನ್ನೋದ ತೀರ್ಮಾನ ತಗಳ್ಳಿ.

ಮೆಂಬರ್ ನರಸಯ್ಯ ತಪ್ಪಿನ ಅರಿವಾದವನಂತೆ, ಮಂಡಿಯೂರಿ ತಲೆ ಬಾಗಿ ನಮಸ್ಕರಿಸುತ್ತಿದ್ದಂತೆಯೇ, ದ್ಯಾಮಯ್ಯನ ಕೈಯಲ್ಲಿದ್ದ ಬೇವಿನ ಸೊಪ್ಪು,ಪೀಡೆ ತೊಲಗಿಸುವ ರೀತಿಯಲ್ಲಿ ನರಸಯ್ಯನ ಬೆನ್ನ ಮೇಲೆ ಬಾರಿಸತೊಡಗಿತ್ತು. ಈರಯ್ಯಗೌಡ ಸುತ್ತುವರೆದಿದ್ದ ಜನಗಳಿಗೆ ಸಾಲೆ ಕಟ್ಟಾಕ್ಕೆ ಅಪ್ಪಣೆ ಆಗಲಿಲ್ಲ ಎಂಬಂತೆ-ಇದರ ಉಸಾಬರಿ ಬೇಡ,ಅವ್ವ ಸಿಟ್ಟಾಗಿ ಮತ್ತೆ ಊರಿಗೆ ಕೇಡು ಬಗದಾಳು, ಅಂತ ಕೇಳುವವರಿಗೆ ಮೆಲ್ಲಗೆ ಉಸುರಿಕೊಂಡಿದ್ದ.ಉರುಮೆ ತಪ್ಪಡಿ ಗಂಟೆ ಸದ್ದುಗಳು ಧ್ವನಿಸತೊಡಗಿ,ಜನ ದ್ಯಾಮಯ್ಯನ ಕಾಲಿಗೆ ಬಿದ್ದು ಕಾಳವ್ವನ ಮಂಗಳಾರತಿಗೆ ಮುತ್ತಿದ್ದರು. ಮೆಲ್ಲಗೆ ಜನಸಂದಣಿ ಕರಗತೊಡಗಿತ್ತು.
ಲೇಖನ:ಕುಮಾರ ಬಡಪ್ಪ, ಚಿತ್ರದುರ್ಗ.

- Advertisement - 

Share This Article
error: Content is protected !!
";