ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ, ಸಂಘ ಪರಿವಾರದವರು ವ್ಯಸನಿಗಳು, ವಿಕೃತ ಮನಸ್ಸಿನವರು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಗಾಧೀಜಿಯಿಂದ ಹಿಡಿದು ರಾಹುಲ್ ಗಾಂಧಿವರೆಗೆ ಬಿಜೆಪಿಯವರು ಸಂಘ ಪರಿವಾರದವರು ಅಪಪ್ರಚಾರ ಮಾಡಿಕೊಂಡು ಬಂದಿದ್ದಾರೆ. ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಲೆಕ್ಕಾಚಾರ ಹಾಕಿಯೇ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ದಲಿತರು, ಕೆಳವರ್ಗದವರು, ಶೂದ್ರರು, ಬಡವರು, ಹಿಂದುಳಿದವರು, ದಲಿತರು ಸೇರಿ ಕೆಳಹಂತದ ಜನ ಬೇಕಾಗಿಲ್ಲ. ತಮ್ಮ ಅಡಿಯಾಳಾಗಿಯೇ ನೋಡುವ ಹುನ್ನಾರ ಎಂದು ಹರಿಪ್ರಸಾದ್ ಗಂಭೀರ ಆರೋಪ ಮಾಡಿದರು.
ಬಿಜೆಪಿಗರು ಹೇಳಿದ ತರ ರಾಹುಲ್ ಗಾಂಧಿ ಅಡಿಕ್ಟ್ ಆಗಿದ್ದರೆ 10 ಸಾವಿರ ಕಿಲೋ ಮೀಟರ್ ನಡೆಯೋದಕ್ಕೆ ಆಗುತ್ತಿರಲಿಲ್ಲ. ಈಗ ಅಂಬೇಡ್ಕರ್ ಬಗ್ಗೆಯೂ ಅಪಪ್ರಚಾರ ಮಾಡಿದ್ದಾರೆ ಎಂದು ಟೀಕಿಸಿದರು.
ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡನೀಯ. ಅವರ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಾಳೆಯಿಂದ ಪ್ರತಿಭಟನೆ ಮಾಡಲಾಗುವುದು. ಅಮಿತ್ ಶಾ ಹೇಳಿಕೆ ಬಗ್ಗೆ ಪರಿಷತ್‌ನಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೆ. ಆದರೆ ಬಿಜೆಪಿಯವರ ಗದ್ದಲದಿಂದ ಅದು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನತೆ ಹಕ್ಕು, ದೀನದಲಿತರ ಮೀಸಲಾತಿ ವಿಚಾರದ ಬಗ್ಗೆ ಚರ್ಚೆ ಮಾಡೋದಕ್ಕೆ ಅವಕಾಶ ಇತ್ತು. ರಕ್ಷಣೆ ಅವಕಾಶಗಳನ್ನು ಕೊಟ್ಟಿರುವ ಸಂವಿಧಾನದ ಬಗ್ಗೆ ಚರ್ಚೆ ಮಾಡುವ ಬದಲು ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಪಮಾನ ಮಾಡಿದ್ದಾರೆ ಎಂದು ದೂರಿದರು.
ಅಂಬೇಡ್ಕರ್ ಅನ್ನುವ ಹೆಸರು ಬದಲು ದೇವರ ಹೆಸರು ಹೇಳಿದ್ರೆ ಸ್ವರ್ಗದಲ್ಲಿ ಜಾಗ ಸಿಗ್ತಿತ್ತು ಅಂತಾ ಅಮಿತ್ ಶಾ ಹೇಳಿದ್ದಾರೆ. ಇದಕ್ಕಾಗಿ ದೇಶದ ಜನರ ಕ್ಷಮೆ ಕೇಳಬೇಕು. ಸಾವರ್ಕರ್, ಗೋವಲ್ಕರ್ ಅವರು ರಾಷ್ಟ್ರಧ್ವಜ, ಸಂವಿಧಾನವನ್ನ ಒಪ್ಪಿರಲಿಲ್ಲ. ಇವರ ಕಚೇರಿಗಳಲ್ಲಿ 52 ವರ್ಷಗಳ ಕಾಲ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಇದು ಇವರ ಹಿಡನ್ ಅಜೆಂಡಾವಾಗಿದೆ. ಆರ್ಎಸ್ಎಸ್ಗೆ 100 ವರ್ಷ ತುಂಬುತ್ತಿದೆ, ಹಾಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಜಾತಿ ಜನಗಣತಿಗೆ ಪ್ರಧಾನಿ ಮೋದಿ ವಿರೋಧ ಮಾಡುತ್ತಿದ್ದಾರೆ. ಜಾತಿ ವ್ಯವಸ್ಥೆಯಲ್ಲಿ ಆರ್ಎಸ್ಎಸ್ ನಂಬಿಕೆ ಇಟ್ಟಿದೆ ಎಂದು ಹರಿಪ್ರಸಾದ್ ಆರೋಪಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಿ.ಟಿ.ರವಿ ಅವರನ್ನು ಎನ್ಕೌಂಟರ್ ಮಾಡುತ್ತಿದ್ರು ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಲ್ಹಾದ್ ಜೋಶಿ ಅವರು ಅಮಿತ್ ಶಾ ಸಂತತಿಯವರು. ಫೇಕ್ ಎನ್ಕೌಂಟರ್ನಲ್ಲಿ ಅಮಿತ್ ಶಾ ಅವರನ್ನ ಗಡಿಪಾರು ಮಾಡಿದ್ರು. ಅವರು ಮಾಡಿದ್ದನ್ನ ಜೋಶಿ ಹೇಳಿದ್ದಾರೆ ಎಂದು ಲೇವಡಿ ಮಾಡಿದರು.
ಸಿ. ಟಿ. ರವಿ ಅವರು ಅಶ್ಲೀಲ ಪದ ಬಳಕೆ ಮಾಡಿರುವ ಬಗ್ಗೆ ಯಾವುದೇ ದಾಖಲಾತಿಗಳಿಲ್ಲ ಎಂಬ ಸಭಾಪತಿ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ರೀತಿ ಆಗಬಾರದಿತ್ತು. ಮೇಲ್ಮನೆಯಲ್ಲಿ ಇಂತಹ ಘಟನೆ ಮರುಕಳಿಸಬಾರದು. ಸಭಾಪತಿಗಳ ಹೇಳಿಕೆಗೆ ನಾವು ಏನು ಹೇಳುವುದಕ್ಕೆ ಆಗುವುದಿಲ್ಲ. ಸಭಾಪತಿಗಳು ಸಾಂವಿಧಾನಿಕ ಸ್ಥಾನದಲ್ಲಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.