ಗ್ರಾಮೀಣ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ… ಹರೀಶ್ ಗೌಡ
ದೊಡ್ಡಬಳ್ಳಾಪುರ:ಗ್ರಾಮೀಣ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯವಾಗಿದ್ದು, ವಿವಿಧ ಹಂತಗಳಲ್ಲಿ ಉತ್ತೇಜನ ನೀಡುವ ವೇದಿಕೆಗಳು ಸೃಷ್ಟಿಯಾಗಬೇಕು ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹರೀಶ್‌ಗೌಡ ಹೇಳಿದರು.
ಇಲ್ಲಿನ ಶ್ರೀ ದೇವರಾಜ ಅರಸ್ ವಸತಿ ಶಾಲೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಾನೆಮನ್ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸವಾಲುಗಳನ್ನು ಎದುರಿಸಿ ಬೆಳೆಯುವ ಸಾಮರ್ಥ್ಯ ಎಲ್ಲರಲ್ಲೂ ಇರುವುದಿಲ್ಲ. ಇಂದು ಪ್ರತಿ ಹಂತದಲ್ಲಿ ಸವಾಲುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಮುನ್ನಡೆಯುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಮುಖ್ಯಅತಿಥಿಯಾಗಿ ಪಾಲ್ಗೊಂಡ ಪವಾಡ ಭಂಜಕ ಡಾ.ಹುಲಿಕಲ್ ನಟರಾಜ್ ಮಾತನಾಡಿ, ನೈತಿಕ ಶಿಕ್ಷಣವನ್ನು ಇಂದು ಎಲ್ಲ ಹಂತಗಳಲ್ಲಿ ನೀಡುವ ಅಗತ್ಯವಿದೆ. ಎಲ್ಲ ಅವಕಾಶಗಳಿದ್ದರೂ, ಉತ್ತಮ ಭವಿಷ್ಯದ ಕನಸನ್ನು ನನಸು ಮಾಡಿಕೊಳ್ಳುವ ಸಂಕಲ್ಪ ಮತ್ತು ಸದೃಢ ಇಚ್ಛಾಶಕ್ತಿ ಇಲ್ಲದಿದ್ದರೆ ಯಶಸ್ಸು ಸಾಧ್ಯವಿಲ್ಲ. ಕಲಾ ಕ್ಷೇತ್ರದಲ್ಲಿ ಸೋಲುಗಳನ್ನು ಗೆಲುವಿನಷ್ಟೇ ಸಮಾನವಾಗಿ ಸ್ವೀಕರಿಸುವುದು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಜಾತಿ-ಧರ್ಮಗಳ ಪರಿಧಿಯನ್ನು ಮೀರಿ ಮನುಷ್ಯತ್ವ ಗೆಲ್ಲಬೇಕು ಎಂಬ ಆಲೋಚನೆಯನ್ನು ಸಾಮಾಜಿಕ ಮಾಧ್ಯಮ ಜಾಗೃತಗೊಳಿಸಬೇಕು. ಚಲನಚಿತ್ರ, ಟಿವಿ ಮಾಧ್ಯಮಗಳು ಸಾಮಾಜಿಕ ಸೌಹಾರ್ದತೆಯನ್ನು ಉತ್ತೇಜಿಸುವ ಹಾಗೂ ಮನುಷ್ಯಪ್ರೀತಿಯನ್ನು ಬೆಳೆಸುವ ವೇದಿಕೆಗಳಾಗಬೇಕು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಪ್ರವೀಣ್ ಶಾಂತಿನಗರ ನಿರ್ಮಿಸಿ, ರಾಕೇಶ್‌ಗೌಡ – ಸುಷ್ಮಾ ಅಭಿನಯಿಸಿರುವ ಹಾಗೂ ಆನಂದ್ ಆಡಿಯೋ ಹಂಚಿಕೆ ಮಾಡಿರುವ ಜಾನೆಮನ್ ಆಲ್ಬಂ ಅನ್ನು ಚಿತ್ರನಟ ಫ್ರೆಂಡ್ಸ್ ವಾಸು ಲೋಕಾರ್ಪಣೆ ಮಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್, ಬೆಂ.ಗ್ರಾ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ತಾ.ಕಸಾಪ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹದೇವ್, ನಿರ್ಮಾಪಕ ಪ್ರವೀಣ್ ಶಾಂತಿನಗರ ಮತ್ತಿತರರು ಜಾನೆಮನ್ ಆಲ್ಬಂ ಕುರಿತು ಮಾತನಾಡಿದರು. ಯುವನಟಿ ಮಾನಸ, ನಟರಾದ ರಾಕೇಶ್‌ಗೌಡ, ಸುಷ್ಮಾ, ತಂತ್ರಜ್ಞರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.