ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ದಿಸಲು ನಿರ್ಧರಿಸಿದ್ದೇನೆ. ಇದಕ್ಕೆ ಪೂರಕವಾಗಿ ಶೀಘ್ರದಲ್ಲೇ ಬರಲಿರುವ ತಾ. ಪಂ. ಹಾಗೂ ಜಿ. ಪಂ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಸಂಘಟನೆಗೆ ಮುಂದಾಗಿದ್ದೇನೆ ಎಂದು ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಎಸ್. ಎಂ. ಹರೀಶ್ ಗೌಡ ಹೇಳಿದ್ದಾರೆ.
ಭಾನುವಾರ ಹರೀಶ್ ಗೌಡರ ಸ್ವಗ್ರಾಮ ಮದುರೆ ಹೋಬಳಿ ಶಾಖಾಲದೇವನ ಪುರ ಗ್ರಾಮದಲ್ಲಿ ನಡೆದ ಐಸಿರಿ ಗ್ರೂಪ್ ನ ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಹರೀಶ್ ಗೌಡ ಮಾತನಾಡಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಸುಭದ್ರವಾಗಿದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ದಳ ತಾಲೂಕಿನಲ್ಲಿ ದಳ ಬಲವರ್ಧನೆಗೆ ಶ್ರಮಿಸಿದ್ದ ಪಕ್ಷದ ಹಿರಿಯ ಮುಖಂಡ ಹಾಡೋನಹಳ್ಳಿ ಅಪ್ಪಯ್ಯಣ್ಣವರು ಇತ್ತೀಚೆಗೆ ನಿಧನರಾಗಿದ್ದಾರೆ. ಹಾಗಾಗಿ ದಳದ ಕಾರ್ಯಕರ್ತರಲ್ಲಿ ಸ್ವಲ್ಪ ಮಟ್ಟಿನ ಆತಂಕವಿದೆ. ಅದನ್ನು ದೂರ ಮಾಡುವ ಉದ್ದೇಶದಿಂದ ನಾನು ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ಕೊಡಲು ನಿರ್ಧರಿಸಿದ್ದೇನೆ. ತಾಲೂಕಿನಲ್ಲಿ ಪಕ್ಷದ ಯಾವುದೇ ಶಾಸಕ ಹಾಗೂ ಸಂಸದ ಸ್ಥಾನ ಇಲ್ಲದಿದ್ದರೂ ದಳ ತನ್ನದೇ ಆದ ಪ್ರಭಾವ ಉಳಿಸಿಕೊಂಡಿದೆ.
ಮುಂಬರುವ ತಾಲುಕ್ ಹಾಗೂ ಜಿಲ್ಲಾಪಂಚಾಯತ್ ಮತ್ತು ಸ್ಥಳೀಯ ಗ್ರಾಮಪಂಚಾಯ್ತಿ, ಸಹಕಾರ ಸಂಘಗಳ ಚುನಾವಣೆಯಲ್ಲಿ ಪ್ರಬಲ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಸೆಡ್ಡು ಹೊಡೆದು ಗೆಲ್ಲುವ ಶಕ್ತಿ ಹೊಂದಿದೆ. ವರಿಷ್ಟರ ಆದೇಶದಂತೆ ರಾಜ್ಯದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಕಳೆದ ಲೋಕಸಭಾ ಚುನಾವಣೆಯನ್ನು ಎದುರಿಸಿದೆವು. ಆ ಚುನಾವಣೆಯಲ್ಲಿ ತಾಲೂಕಿನ ಬಿಜೆಪಿ ಗಿಂತ ದಳದ ಪಾತ್ರ ಹೆಚ್ಚಾಗಿತ್ತು ಸಂಸದ ಸುಧಾಕರ್ ರವರಿಗೂ ಗೊತ್ತಿರುವ ವಿಚಾರ. ಹೀಗಿದ್ದರೂ ಸ್ಥಳೀಯ ಶಾಸಕರು ನಮ್ಮ ಪಕ್ಷದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿತ್ತಿರುವುದನ್ನು ಕಂಡಿಸುತ್ತೇವೆ. ನಮಗೆ ನಮ್ಮ ಪಕ್ಷದ ವರಿಷ್ಟರಾದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ರವರ ಮಾರ್ಗದರ್ಶನದಂತೆ ನಾವು ನಡೆದುಕೊಳ್ಳುತ್ತೇವೆ.
ಶಾಸಕರಿಂದ ಪಾಠ ಹೇಳಿಸಿಕೊಳ್ಳುವ ಅನಿವಾರ್ಯತೆ ನಮಗೆ ಬಂದಿಲ್ಲ. ಆದ್ದರಿಂದ ಶಾಸಕರು ನಮ್ಮ ಪಕ್ಷದ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ. ಕ್ಷೇತ್ರದಲ್ಲಿ ನಡೆಯುತ್ತಿರುವ ಕಂದಾಯ ಇಲಾಖೆಯ ಅವ್ಯವಹಾರಗಳ ಬಗ್ಗೆ ಖುದ್ದು ಕಂದಾಯ ಸಚಿವ ಕೃಷ್ಣ ಭೈರೇಗೌಡರು ತಾಲೂಕು ಕಚೇರಿಗೆ ಬೇಟಿ ಕೊಟ್ಟು ಚೀಮಾರಿ ಹಾಕಿದ್ದಾರೆ. ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಸೊಲ್ಲೆತ್ತದೆ ಶಾಸಕರು ನಮ್ಮಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ರಾಜಕೀಯಕ್ಕೆ ಹೊಸಬಾರದ ಶಾಸಕರು ಮೊದಲು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸಲಿ. ಇನ್ನೂ ಮೂರು ವರ್ಷ ಕಾಲಾವಕಾಶವಿದೆ. ಹಾಗಾಗಿ ಕ್ಷೇತ್ರವನ್ನು ಅಭಿವೃದ್ಧಿ ಗೊಳಿಸಿ ಆ ನಂತರ ನಮ್ಮ ಬಗ್ಗೆ ಟೀಕೆ ಮಾಡಲಿ.
ಅದು ಬಿಟ್ಟು ಸುಖಾಸುಮ್ಮನೆ ನಮ್ಮ ಪಕ್ಷದ ಬಗ್ಗೆ ಹಾಗೂ ನಮ್ಮ ಬಗ್ಗೆ ಟೀಕೆ ಮಾಡಿದರೆ ಸರಿಯಾದ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸೂಕ್ತ ಉತ್ತರ ಕೊಡುತ್ತಾರೆ ಎಂದ ಹರೀಶ್ ಗೌಡರು ಈ ಬಾರಿ ನ್ಯಾಯ ಯುತವಾಗಿ ನಗರಸಭೆ ಅಧ್ಯಕ್ಷ ಸ್ಥಾನ ನಮ್ಮ ಪಕ್ಷಕ್ಕೆ ಸಿಗಬೇಕಿತ್ತು. ಆದರೆ ಶಾಸಕರ ಚಿತಾವಣೆ ಯಿಂದ ಕೈ ತಪ್ಪಿದೆ. ಮಧ್ಯಂತರ ಅವಧಿಯಲ್ಲಿ ಸಿಗುವ ಸಂಭವವಿದೆ. ಮುಂಬರುವ ಯಾವುದೇ ಸ್ಥಳೀಯ ಚುನಾವಣೆಗಳಲ್ಲಿ ನಾನು ಪಕ್ಷದ ಅಭ್ಯರ್ಥಿಗಳಿಗೆ ಸಹಕರಿಸಿ ಪಕ್ಷದ ಎಲ್ಲಾ ಮುಖಂಡರ ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ತಾಲೂಕಿನಲ್ಲಿ ಮತ್ತಷ್ಟು ಬಲ ಗೊಳಿಸುವುದು ನನ್ನ ಪ್ರಮುಖ ಗುರಿಯಾಗಿದೆ. ಇದಕ್ಕೆ ಪಕ್ಷದ ಎಲ್ಲರ ಸಹಕಾರ ಅತಿ ಮುಖ್ಯ ಎಂದು ಹೇಳಿದರು.
ಪಕ್ಷದ ಹಿರಿಯ ಮುಖಂಡ ತಾ. ನ ಪ್ರಭುದೇವ್ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತಿರಬಹುದು. ಆದರೆ ಸ್ಥಳೀಯ ತಾಲೂಕಪಂಚಾಯ್ತಿ, ನಗರಸಭೆ, ಎ. ಪಿ. ಎಂ. ಸಿ, ಹಾಗೂ. ಟಿ. ಎ. ಪಿ. ಎಂ. ಸಿ. ಎಸ್, ಸಹಕಾರಿ ಸಂಘಗಳ ಚುನಾವಣೆಗಳಲ್ಲಿ ಗೆದ್ದು ಅಧಿಕಾರ ನಡೆಸಿದ ಹಲವಾರು ಉದಾಹರಣೆ ನಮ್ಮ ಕಣ್ಮುಂದಿದೆ. ಹಾಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳವಿರುದ್ಧ ಸೆಣೆ ಸಾಡುವ ಶಕ್ತಿ ನಮ್ಮ ದಳದ ಕಾರ್ಯಕರ್ತ ಪಡೆಗಿದೆ. ದೇಶದ ಹಿತದೃಷ್ಟಿಯಿಂದ ನಮ್ಮ ಪಕ್ಷ ಬಿಜೆಪಿ ಜೊತೆ ಕೈ ಜೋಡಿಸಿದೆ. ನಮ್ಮ ಪಕ್ಷದ ವರಿಷ್ಟರಾದ ಕುಮಾರ ಸ್ವಾಮೀರವರು ಕೇಂದ್ರದ ಸಚಿವ ಸಂಪುಟದಲ್ಲಿ ಉನ್ನತ ಮಟ್ಟದ ಸಚಿವರಾಗಿರುವುದರಿಂದ ಅವರ ಮೂಲಕ ನಮ್ಮ ತಾಲೂಕಿಗೆ ಉತ್ತಮ ಯೋಜನೆಗಳು ಬರುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಹರೀಶ್ ಗೌಡರ ಪಕ್ಷ ಸಂಘಟನೆ ಕಾರ್ಯಕ್ಕೆ ನಾವೆಲ್ಲರೂ ಸಹಕಾರಿಯಾಗಿ ನಿಲ್ಲಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂತಾಮಣಿ ಹರೀಶ್ ಗೌಡ, ಪಿ. ಎಲ್. ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಣ್ಣ, ದೊಡ್ಡ ತುಮಕೂರು ಪ್ರಭಾಕರ್, ಚಿಕಣ್ಣಪ್ಪ, ಟಿ. ಎ. ಪಿ. ಎಂ. ಸಿ. ಎಸ್ ಮಾಜಿ ಅಧ್ಯಕ್ಷರಾದ ಅಶ್ವಥ್ ನಾರಾಯಣ್, ಆನಂದ್, ಜಗನ್ನಾತಾಚಾರ್, ಹಾಡೋನಹಳ್ಳಿ ನಾಗರಾಜ್,ತಳವಾರ್ ನಾಗರಾಜ್, ನಾರಾಯಣ್,ಗಂಗಣ್ಣ, ಪ್ರವೀಣ್ ಕುಮಾರ್ ಸೇರಿದಂತೆ ಜೆಡಿಎಸ್ ಪಕ್ಷದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.