ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ದೇವರಕೊಟ್ಟ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ ಅವರು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿದರು.
ಈ ವಸತಿ ಶಾಲೆಯು 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 400ನೇ ರ್ಯಾಂಕ್ ಪಡೆದಿದ್ದು, 2025-26ನೇ ಸಾಲಿಗೆ ಎಸ್.ಎಸ್.ಎಲ್.ಸಿ ಗುಣಾತ್ಮಕ ಫಲಿತಾಂಶದಲ್ಲಿ 250 ರೊಳಗೆ ರ್ಯಾಂಕ್ ಪಡೆಯುವಂತೆ ಪ್ರತಿ ಶಿಕ್ಷಕರಿಗೆ ಗುರಿ ನೀಡಿದರು.
ಈ ಶಾಲೆಯಲ್ಲಿನ ಎಸ್.ಎಸ್.ಎಸ್.ಸಿ 41 ವಿದ್ಯಾರ್ಥಿಗಳೊಂದಿಗೆ ಪ್ರತಿ ವಿದ್ಯಾರ್ಥಿಯೊಂದಿಗೆ ಸಂವಾದ ನಡೆಸಿ, ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷವಾದ ತರಗತಿಗಳನ್ನು ಸಂಪನ್ಮೂಲ ಶಿಕ್ಷಕರಿಂದ ಪ್ರತಿ ತಿಂಗಳು 2 ಬಾರಿ ತರಗತಿಗಳನ್ನು ಮಂಡಿಸುವಂತೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಹರಿಯಬ್ಬೆ ವಿದ್ಯಾರ್ಥಿನಿಲಯದ ಬಾಡಿಗೆ ಕಟ್ಟಡಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು.
ನಂತರ ಹಿರಿಯೂರು ತಾಲ್ಲೂಕು ಮೆಟ್ರಿಕ್ ಪೂರ್ವ ಬಾಲಕ ವಿದ್ಯಾರ್ಥಿನಿಲಯ ಹೂವಿನಹೊಳೆ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಕ್ಕಳೊಂದಿಗೆ ಉಪಹಾರ ಸೇವಿಸಿದರು.

