ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಸಾಮರಸ್ಯ, ಸಹೋದರತೆ, ಭ್ರಾತೃತ್ವದ ದ್ಯೋತಕ ರಕ್ಷಾಬಂಧನ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ರಕ್ಷಾಬಂಧನದ ಅಂಗವಾಗಿ ಶನಿವಾರ ಬೆಂಗಳೂರಿನಲ್ಲಿ ಮಹಿಳೆಯರ ಸಬಲೀಕರಣಕ್ಕೆ ಮೀಸಲಾಗಿ ದುಡಿಯುತ್ತಿರುವ ಸುಮಂಗಲಿ ಸೇವಾಶ್ರಮದಲ್ಲಿ ಪವಿತ್ರ ರಕ್ಷಾ ಬಂಧನ ಆಚರಿಸಲಾಯಿತು. ಮೊಗೆದಷ್ಟು ಬರಿದಾಗದ ನಿಷ್ಕಲ್ಮಶ ಪ್ರೀತಿಯ ದ್ಯೋತಕವಾಗಿ ಸುಖ, ಸಮೃದ್ಧಿ, ಶ್ರೇಯಸ್ಸನ್ನು ಕೋರಿ, ನೈತಿಕ ಬೆಂಬಲ ಸೂಚಕವಾಗಿ ರಕ್ಷೆ ಕಟ್ಟಿ ಹಾರೈಸಿದ ಆಶ್ರಮದ ಹೆಣ್ಣುಮಕ್ಕಳು ಹಾಗೂ ತಾಯಂದಿರ ಹಾರೈಕೆಗಳು ಮಾತೃ ವಾತ್ಸಲ್ಯದ ಪ್ರತಿರೂಪದಂತಿತ್ತು ಎಂದು ವಿಜಯೇಂದ್ರ ತಿಳಿಸಿದರು.
ಪ್ರತಿಯೊಬ್ಬ ಹೆಣ್ಣಿಗೂ ಸಹೋದರನಾಗಿ ನಿಲ್ಲುವ ಹಾಗೂ ಆಕೆಯಲ್ಲಿ ಧೈರ್ಯವನ್ನು ತುಂಬಿ ಸಮಾಜಕ್ಕೆ ಶಕ್ತಿಯಾಗಿ ಆ ಹೆಣ್ಣು ಬೆಳೆಯಲು ಪುರುಷ ಸಮಾಜ ರಕ್ಷಾ ಕವಚವಾಗಿ ನಿಲ್ಲಬೇಕು, ಎನ್ನುವ ಸಂದೇಶವೇ ಈ ರಕ್ಷಾಬಂಧನ. ಇದೇ ಸಂದರ್ಭದಲ್ಲಿ ಆಶ್ರಮದ ವಿದ್ಯಾರ್ಥಿನಿಯರಿಗೆ ಸಿಹಿ ವಿತರಿಸಿ ರಕ್ಷಾಬಂಧನದ ಶುಭಕೋರಲಾಯಿತು.
ಈ ಸಂದರ್ಭದಲ್ಲಿ ಸುಮಂಗಲಿ ಸೇವಾಶ್ರಮದ ಸಂಸ್ಥಾಪಕ ಅಧ್ಯಕ್ಷೆ ಡಾ.ಎಸ್.ಜಿ.ಸುಶೀಲಮ್ಮ, ಎಂ.ಕಾಂತಮ್ಮ, ಪಕ್ಷದ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಕು.ಸಿ.ಮಂಜುಳಾ, ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಎಸ್.ಹರೀಶ್, ಮುಖಂಡರಾದ ಕಟ್ಟಾ ಜಗದೀಶ್, ಸಿ.ಮುನಿಕೃಷ್ಣಾ ಸೇರಿದಂತೆ ಸ್ಥಳೀಯರು, ಮಹಿಳಾ ಮೋರ್ಚಾ ಕಾರ್ಯಕರ್ತರು, ಆಶ್ರಮದ ಪ್ರಮುಖರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

