ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಹಿತಕ್ಕಿಂತ… ಹೈಕಮಾಂಡ್ ಹಂಗೇ ಹೆಚ್ಚಾಯಿತೇ?
ವಿಶ್ವದ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಒಂದಾದ ಜರ್ಮನಿ ದೇಶದ ಚಾನ್ಸಲರ್ ನಮ್ಮ ಕರ್ನಾಟಕಕ್ಕೆ ಆಗಮಿಸಿದರು.
ಯಾವುದೇ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿ, ಇಂತಹ ಜಾಗತಿಕ ನಾಯಕರನ್ನು ಬರಮಾಡಿಕೊಂಡು, ಈ ಭೇಟಿಯನ್ನ ರಾಜ್ಯದ ಏಳಿಗೆಗಾಗಿ ಬಳಸಿಕೊಳ್ಳುತ್ತಿದ್ದರು. ನಮ್ಮ ರಾಜ್ಯದ ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ವೃದ್ಧಿಸಿಕೊಳ್ಳಲು ಸಿಕ್ಕಿರುವ ಒಂದು ಸುವರ್ಣ ಅವಕಾಶ ಎಂದು ಈ ಜಾಗತಿಕ ನಾಯಕರ ಭೇಟಿಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ರಾಜ್ಯದ ದುರಂತ ನೋಡಿ:
ಒಂದೆಡೆ ಜರ್ಮನಿಯ ಚಾನ್ಸಲರ್ ಬೆಂಗಳೂರಿಗೆ ಆಗಮಿಸುತ್ತಿದ್ದರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಊಟಿಗೆ ಹೋಗುವ ದಾರಿಯಲ್ಲಿ ಸುಮ್ಮನೆ ಹಾದುಹೋಗುತ್ತಿದ್ದ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಮೈಸೂರಿನಲ್ಲಿ ಸಾಲುಗಟ್ಟಿ ನಿಂತಿದ್ದರು! ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇದು ಕೇವಲ ಶಿಷ್ಟಾಚಾರದ ಲೋಪವಲ್ಲ, ಕರ್ನಾಟಕದ ಹಿತಾಸಕ್ತಿಗೆ ಮಾಡಿದ ದ್ರೋಹ.
ವಿಶ್ವದ ಆರ್ಥಿಕ ಶಕ್ತಿಯ ಸ್ವಾಗತಕ್ಕೆ ಸಿಗಲಿಲ್ಲ ‘ಆದ್ಯತೆ‘. ಹೈಕಮಾಂಡ್ ಮೆಚ್ಚಿಸುವ ಗುಲಾಮಗಿರಿಗೆ ಸಿಕ್ಕಿತು ‘ಪ್ರಾಮುಖ್ಯತೆ‘.
ರಾಜ್ಯದ ಅಭಿವೃದ್ಧಿಗಿಂತ ರಾಜಕೀಯ ನಿಷ್ಠೆಯೇ ದೊಡ್ಡದಾದಾಗ, ಕನ್ನಡಿಗರ ಭವಿಷ್ಯಕ್ಕೆ ಕುತ್ತು ಬರುವುದು ಖಚಿತ. ಅಧಿಕಾರದ ದಾಹಕ್ಕಾಗಿ ರಾಜ್ಯಕ್ಕೆ ಒಲಿಯಬಹುದಾದ ಅವಕಾಶಗಳನ್ನೇ ಬಲಿಕೊಟ್ಟ ಈ ಸರ್ಕಾರಕ್ಕೆ ಕರ್ನಾಟಕದ ಬಗ್ಗೆ, ಕನ್ನಡಿಗರ ಎಳ್ಳಷ್ಟೂ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ.
ಕನ್ನಡಿಗರಿಗೆ ಬೇಕಾಗಿರುವುದು ಕರ್ನಾಟಕದ ಬಗ್ಗೆ ಬದ್ಧತೆ, ಇಚ್ಛಾಶಕ್ತಿ ಇರುವ ನಾಯಕರೇ ಹೊರತು, ಕುರ್ಚಿ ಉಳಿಸಿಕೊಳ್ಳಲು ಅಥವಾ ಗಿಟ್ಟಿಸಿಕೊಳ್ಳಲು ತಮ್ಮ ಜವಾಬ್ದಾರಿಯನ್ನೇ, ಕರ್ತವ್ಯವನ್ನೇ ಮರೆತು ಹೈಕಮಾಂಡ್ ಮುಂದೆ ಕೈಕಟ್ಟಿ ನಿಲ್ಲುವ ಗುಲಾಮರಲ್ಲ! ಎಂದು ಅಶೋಕ್ ಹರಿಹಾಯ್ದಿದ್ದಾರೆ.

