ಮ್ಯಾಸರ ಎಲ್ಲ ಕಟ್ಟೆಮನೆಗಳಲ್ಲೂ ಹಟ್ಟಿ ತಿಪ್ಪಯ್ಯನ ಗದ್ದುಗೆಗಳಿವೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-
62
 ಜೋಗಿ ಜಾಡಿನ ವಿಹಾರಿಗಳಿಂದ ವರ್ಷಕ್ಕೊಮ್ಮೆಯಾದರೂ ನಾಯಕನಹಟ್ಟಿ ತಿಪ್ಪಯ್ಯನ ಗುಡಿಗೆ ದುರ್ಗದಿಂದ ಚಾರಣವಿಟ್ಟುಕೊಳ್ಳುವ ಅಭ್ಯಾಸವಿದೆ. ಮಧ್ಯರಾತ್ರಿಯಿಂದ ಚಾರಣ ಪ್ರಾರಂಭಿಸಿದರೆ, ಬೆಳಕರಿಯುವ ಹೊತ್ತಿಗೆ ತಿಪ್ಪಯ್ಯನ ಗುಡಿಗೆ ತಲುಪಬಹುದು.

ಮೂವತ್ತು ಮೈಲುಗಳ ಆಚೆಗಿನ ಅಂತರ, ಗೋನೂರು, ಬೆಳಗಟ್ಟ, ಆಯ್ಕಲ್, ಮಾರ್ಗವಾಗಿ ನೆಲಗೇತ್ಲಟ್ಟಿ, ಬೋಸೆದೇವರಟ್ಟಿ, ಮೂಲಕವೂ ಸಾಗಬಹುದು. ರಾತ್ರಿಯ ತಂಪಾದ ಹೆಜ್ಜೆಗಳು,ಸಾಗುವ ದಾರಿಯಲ್ಲಿ ಹಳ್ಳಿಗಳು ಹತ್ತಿರವಾಗುತ್ತಿದ್ದಂತೆ,ಭೌವ್ವೆಂದು ಅಡ್ಡವಾಗುವ ನಾಯಿಗಳು ಬಿಟ್ಟರೆ,ಅಂತಹ ತೊಂದರೆಗಳಿರುವುದಿಲ್ಲ. ಬೇಸಿಗೆಯಾದರೆ,ಬೆದ್ಲು ಹೊಲಗಳ ಮುಖಾಂತರ ನೇರವಾಗಿ ಸಂಚರಿಸಿ, ಹೆಜ್ಜೆಗಳನ್ನ ಇನ್ನಷ್ಟು ಹತ್ತಿರ ಮಾಡಿಕೊಳ್ಳಬಹುದು. ಇದು ಮತ್ತೊಂದು ಸಾಹಸದ ಚಾರಣ.

ಅನಕ್ಷರಸ್ತ ಕುಲಗಳನ್ನ ಎಷ್ಟು ಹತ್ತಿಕ್ಕಲು ಸಾಧ್ಯವೋ, ಅಷ್ಟೆಲ್ಲಾ ಪ್ರಯತ್ನಗಳು ಬಹು ಹಿಂದಿನಿಂದ,ಇಂದಿಗೂ ಸದ್ದಿಲ್ಲದೆ ಹೆಜ್ಜೆ ಹಾಕಿವೆ.ಪುರಾಣ,ಇತಿಹಾಸ, ಹಾಗೂ ಕೆಳಸ್ತರದ ದಾರ್ಶನಿಕರ ಮೇಲೆ, ಮಡಿವಂತಿಕೆಯ ಅಪಚಾರಗಳು ಇಂದಿಗೂ ನಡೆಯುತ್ತಲೇ ಇವೆ.

ಜನಮಾನಸದಲ್ಲಿ ನೆಲೆಗೊಂಡ,ತಳ ಸಮುದಾಯಗಳಿಂದ ಗುರುತಿಸಿಕೊಳ್ಳುವ ಋಷಿಗಳು,ಬೈರಾಗಿಗಳು, ಗುರುಗಳು,ಶೂರರು,ಜ್ಞಾನಿಗಳು,ದೈವ ನೆಲೆ ಕಂಡುಕೊಂಡ ಸಾಧು,ಸಂತ,ಅವಧೂತರ ಕುಲ ಪರಿವರ್ತನೆಗಳ ಕೆಲಸ ವರ್ತಮಾನದ್ದಲ್ಲ.

ಯುದ್ಧದೋಪಾದಿಯಲ್ಲಿ ಪುರಾಣ, ಇತಿಹಾಸ, ಚರಿತ್ರೆಗಳಿಗೂ ಬಿಡದೆ ಹಿಂದಿನಿಂದಲೂ ದಾಳಿಟ್ಟಿವೆ. ಮುಕ್ಕಣ್ಣ ಮಡಿವಂತಿಕೆಯ ಪೂಜೆಗಳನ್ನ ಧಿಕ್ಕರಿಸಿಯೂ, ಮಾಂಸ ನೈವೇದ್ಯಕ್ಕೆ ಪ್ರಸನ್ನನಾಗಿ ಕಣ್ಣಪ್ಪ ನನ್ನ ಆಶೀರ್ವದಿಸಲಿಲ್ಲವೇ? ಅಸ್ಪೃಶ್ಯನೆಂದು ಗುಡಿಯೊಳಗೆ ಬಿಡದ ಕನಕದಾಸರಿಗೆ, ಶ್ರೀ ಕೃಷ್ಣ ಪರಮಾತ್ಮನೇ ಗೋಡೆಯೊಡೆದು,ದರ್ಶನ ಭಾಗ್ಯ ಕರುಣಿಸಲಿಲ್ಲವೇ?ಗೊಲ್ಲ ಕುಲದಲ್ಲಿಯೇ ಬಾಲ್ಯ ಜೋಗುಳ ಕೇಳಿಸಿಕೊಂಡ, ಪರಮಾತ್ಮನಿಗೆ, ಕುಲ ವ್ಯಾಪ್ತಿಗಿಟ್ಟು ನೋಡುತ್ತಿರುವುದಾದರೂ ಏಕೆ? ವಾಲ್ಮೀಕಿಯನ್ನು ಬ್ರಾಹ್ಮಣೀಕರಿಸಲು ಹೊರಟ ಕುಲಗಳು, ರಾಮಾಯಣ ಬರೆದವ ಒಬ್ಬ ಕಾಡು ಕುಲದವ ಅಂತ, ಕೇಳಿಸಿಕೊಳ್ಳಲಾಗುತ್ತಿಲ್ಲವೋ ಹೇಗೆ, ದೈವಗಳು, ಹಾಗೂ ತಳ ಸಮುದಾಯಗಳ ಗುರು, ಪಂಥಗಳನ್ನ ಆಧುನಿಕರಿಸಿ ವರ್ಗೀಕರಿಸಲಾಗುತ್ತಿದೆ, ಇಂತಹದೊಂದು ಪ್ರಯತ್ನ ಹಟ್ಟಿ ತಿಪ್ಪಯ್ಯನ ಮೇಲೆಯೂ ನಿರಂತರವಾಗಿ ನಡೆಯುತ್ತಲೇ ಸಾಗಿದೆ.

 ಚಳ್ಳಕೆರೆಯ ಪಿ.ತಿಪ್ಪೇಸ್ವಾಮಿಯವರ “ಮ್ಯಾಸಬೇಡರ ಮೌಖಿಕ ಕಥನಗಳು” ಸಂಕಥನದಲ್ಲಿ ಪೆದ್ದಕ್ಕರಾಯಮ್ಮಳ ತಮ್ಮ ತಿಪ್ಪಂಡೆ ರಾಜ, ಆಧ್ಯಾತ್ಮಕ್ಕೆ ಹತ್ತಿರವಾಗಿ ಧ್ಯಾನ, ವ್ರತ, ಪೂಜಾದಿಗಳಿಗೆ ಒಲವು ಕೊಟ್ಟು,ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರಧಾನವಾಗಿಸಿಕೊಂಡು, ಮ್ಯಾಸ ಕಂಪಳದ ಹುದಿ-ಪದಿ-ನೋಮುಗಳನ್ನು ನೆರವೇರಿಸುತ್ತಿದ್ದನೆಂದು, ಇಂದಿಗೂ ಜನಪದದ ಧ್ವನಿ.

ಕ್ರಮೇಣ ಕಂಪಳವನ್ನು ತೊರೆದು,ಮಾರಮ್ಮನ ಗುಡಿಯಲ್ಲಿಯೇ ಧ್ಯಾನಸಕ್ತನಾಗಿರುತ್ತಿದ್ದುದನ್ನು ಗಮನಿಸುತ್ತಿದ್ದ ಪೆದ್ದಕ್ಕರಾಯಮ್ಮ, ಕಂಪಳವನ್ನು ಭಾಗ ಮಾಡಿ, ಎಲ್ಲಾ ತಮ್ಮಂದಿರಿಗೂ ಹಂಚಿದಾಗ. ನಾಯಕನಹಟ್ಟಿಯಲ್ಲಿಯೇ ಉಳಿದ ತಿಪ್ಪಂಡೆರಾಜ, ಆಧ್ಯಾತ್ಮದಿಂದ ವೈರಾಗ್ಯ ತಳೆದು,ಹುಚ್ಚನಂತೆ ತಿಪ್ಪೆಗಳಲ್ಲಿ ವಾಸಿಸುತ್ತಾ, ಪವಾಡಗಳನ್ನು ನಡೆಸುತ್ತಾ ತಿಪ್ಪೇಸ್ವಾಮಿಯಾಗಿ ತನ್ನ ಭಕ್ತರಿಂದ ಕರೆಸಿಕೊಂಡು, ಹಟ್ಟಿ ಮಲ್ಲಪ್ಪನಾಯಕನ ಜೊತೆಗೂಡಿ, ಗುಡಿ, ಗೋಪುರ, ಕೆರೆಗಳನ್ನು ಕಟ್ಟಿಸಿದನೆಂದು ಜನಪದದ ಸೊಗಡಿನಲ್ಲಿದೆ.

ನಿಡಗಲ್ಲು ದುರ್ಗದ, ವದನಕಲ್ಲು ಭಾಗದಲ್ಲಿ, ತಿಪ್ಪಯ್ಯನ ಗದ್ದುಗೆ ಪಾಳೆಗಾರರೇ, ಮಾಡಿಸಿಕೊಂಡಂತದ್ದು. ಗೋನೂರು ಕಟ್ಟೆಮನೆ, ನನ್ನಿವಾಳದ ಕಟ್ಟೆಮನೆ, ಪಾಳೆಯಪಟ್ಟಿನ ಮಲ್ಲ ನಾಯಕನಹಟ್ಟಿಯೂ ಕಟ್ಟೆಮನೆಯೇ. ಮ್ಯಾಸರ ಎಲ್ಲಾ ಕಟ್ಟೆಮನೆಗಳಲ್ಲಿಯೂ, ತಿಪ್ಪಯ್ಯನ ಗದ್ದುಗೆಗಳಿವೆ. ಮ್ಯಾಸಬೇಡರಿಗೆ ಬೆಡಗುಗಳಿಂದ ದೇವರುಗಳಿದ್ದರೂ, ಹಟ್ಟಿ ತಿಪ್ಪಯ್ಯ ನನ್ನ ಕುಲ ಸ್ವಾಮಿಯನ್ನಾಗಿ ಸ್ವೀಕರಿಸಿದ್ದಾರೆ.

ಜಾತಿಗಳ ಆಚೆ ನಡೆದಾಡಿದ ಅವಧೂತ ಹಟ್ಟಿ ತಿಪ್ಪಯ್ಯನಿಗೆ, ಎಲ್ಲಾ ಸಮುದಾಯಗಳೂ ದೈವದಲ್ಲಿಟ್ಟು ನೋಡಿವೆ. ಅಂತಹ ಒಬ್ಬ ದೈವಾತ್ಮನಿಗೆ, ಲಿಂಗ ಕಟ್ಟಿಯೇ ಕೈ ಮುಗಿಯಬೇಕೆಂಬ ಹುನ್ನಾರವಾದರೂ ಏಕೆ? ನಮ್ಮ ಜಿಲ್ಲೆಯ ಜಾನಪದ ವಿಧ್ವಾಂಸ ಡಾ.ಮೀರಾಸಾಬಿ ಹಳ್ಳಿ ಶಿವಣ್ಣನವರು, ಗುರುತಿಸುವ ಹಾಗೆ,ಆಂಧ್ರ ಮೂಲದಿಂದ ರಾಯದುರ್ಗ ಮಾರ್ಗವಾಗಿ,ತಿಪ್ಪಯ್ಯ ಪಣಿಯಪ್ಪನ ಜೊತೆ, ಮ್ಯಾಸರೊಂದಿಗೆ ತುರು ಕರುಗಳ ಸಮೇತ,ಕೊಂಡ್ಲಳ್ಳಿ ಮಾರ್ಗವಾಗಿ ಬಂದರೆಂಬುದು ಜನಪದದ ಪ್ರತೀತಿ.

ವಾಸ್ತವತೆಯನ್ನು ಅರಿಯದೆ, ಆರಾಧನಾಕೃತಿಗಳನ್ನ ಅವಲೋಕಿಸಿ, ಕುಮಾರಸ್ವಾಮಿಯವರ ತಿಪ್ಪೇರುದ್ರಸ್ವಾಮಿ ನಾಟಕ ನೋಡ್ಕೊಂಡು,ಸತ್ಯಶೋಧನೆ ಎಂಬ ಹೆಗ್ಗಳಿಕೆಗೆ ಸಂಶೋಧಕರೊಬ್ಬರು, ಶೈವೀಕರಿಸಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಮನದಟ್ಟಾಗುತ್ತದೆ.ಹಟ್ಟಿ ತಿಪ್ಪಯ್ಯನ ವಿಚಾರವಾಗಿ, ಇಪ್ಪತ್ತನಾಲ್ಕು ಕೃತಿಗಳನ್ನು ಆಧಾರವಾಗಿಸಿ, ತಾವು ಪ್ರಕಟಿಸಿಕೊಂಡ ಸಂಶೋಧನೆ ಎಷ್ಟು ಸತ್ಯವಾಗಿದೆ?

ಚಿತ್ರದುರ್ಗ ಜಿಲ್ಲೆಯ ಜಾನಪದ ನೆಲೆಗಟ್ಟಿನಲ್ಲಿ ಅನೇಕ ಕೃತಿಗಳನ್ನ ಪ್ರಕಟಿಸಿಕೊಂಡಿರುವ ವಿದ್ವಾಂಸರಾದ ಡಾ.ಮೀರಾಸಾಬಿಹಳ್ಳಿ ಶಿವಣ್ಣನವರ “ನಾಯಕನಹಟ್ಟಿ ಪಾಳೆಗಾರರು “ಹಾಗು” ಜಾನಪದ ನೆಲೆಗಳಲ್ಲಿ ಹಟ್ಟಿ ಜಾತ್ರೆ” ಇವುಗಳನ್ನ ಪಕ್ಕದಲ್ಲಿಟ್ಟುಕೊಂಡು ಪೂಜೆ ಮಾಡುತ್ತಿದ್ದರೋ ಹೇಗೆ. ಸಂಕ್ಷಿಪ್ತವಾಗಿ ವಂಶಾವಳಿಯನ್ನ ಕೊಟ್ಟು, ಜನಪದದ ದಾಖಲೆಗಳನ್ನ ಇಟ್ಟುಕೊಂಡು ಬರೆದಂತ ಕೃತಿಗಳಿವು.

ಜಾನಪದ ವಿದ್ವಾಂಸರ ಒಂದು ಎಳೆಯನ್ನು ಎಲ್ಲಿಯೂ ಬಿಟ್ಟುಕೊಳ್ಳದೇ,ಸೂಕ್ಷ್ಮವಾಗಿ  ಅದ್ಭುತವಾದ ಸಂಶೋಧನೆ ಮಾಡಿದ್ದೀರಾ!? ತಮ್ಮದೇ ಆದ ದಾರಿಯಲ್ಲಿ,ಒಂಬತ್ತನೇ ಶತಮಾನಕ್ಕೂ ಹೋಗಿ,ಮುರುಘಾ ಮಠವನ್ನೂ ತಂದು ನಾಯಕನಹಟ್ಟಿಯಲ್ಲಿ ಕೂರಿಸಿದ್ದೀರಾ,800 ವರ್ಷಗಳ ಹಿಂದಕ್ಕೆ ತಿಪ್ಪಯ್ಯನನ್ನ ಕರ್ಕೊಂಡ್ಹೋಗಿ,ಅಲ್ಲಿ ಯಾರ ಜೊತೆನೋ ಸಮೀಕರಿಸಿ ಸಂಶೋಧನೆ ಮಾಡಿಬಿಟ್ಟಿದ್ದೀರ.

ಹಟ್ಟಿ ತಿಪ್ಪಯ್ಯ ಪುರಾಣದ ಕಥೆ ಅಲ್ಲ ಸ್ವಾಮಿ,ಸಂಶೋಧನೆ ಕಂಡದ್ದಲ್ಲಾ,ಊಹೆ ಮಾಡಿ ಬರೆದಾಕ್ಷಣ ಅದು ಸಂಶೋಧನೆ ಆಗಲ್ಲ,17 ನೇ ಶತಮಾನದ ವಾಸ್ತವ ಇತಿಹಾಸ.

ಮ್ಯಾಸ ಕುಲದ ಆರಾಧ್ಯ ದೈವ, ಗಾದ್ರಿಪಾಲನಾಯಕನ ಅಣ್ಣನ ಮಗ,ಜಗಳೂರು ಪಾಪನಾಯಕ,ಹಾಗೂ ತಿಪ್ಪಯ್ಯನ ಸಾಮ್ಯತೆಗಳು, ಚಿಕ್ಕಕೆರೆ ಏರಿಯ ಮೇಲೆ “ಲೆತ್ತವಾಡೇರು”ಎಂಬ ಜನಪದದಲ್ಲಿ ತಲೆಮಾರುಗಳಿಂದಲೂ ಹರಡಿಕೊಂಡಿವೆ. ಇವು ಬರೆದ ದಾಖಲೆಗಳಲ್ಲ,ಅನಕ್ಷರಸ್ಥರ ಧ್ವನಿ ದಾಖಲೆಗಳು, ಈ ಬೇಡ ಕುಲದ ಮೇಲೆ ನಿಮ್ಮ ಅಕ್ಷರ ದಬ್ಬಾಳಿಕೆ, ಮಿತ್ಯ ಸಂಶೋಧನೆಗಳನ್ನ ಸಾಕುಮಾಡಿ.
ಮುಂದುವರೆಯುವುದು…
ಲೇಖನ:ಕುಮಾರ್ ಬಡಪ್ಪ, ಚಿತ್ರದುರ್ಗ.

 

 

- Advertisement -  - Advertisement -  - Advertisement - 
Share This Article
error: Content is protected !!
";