ಆಸ್ತಿ ಕಲಹಕ್ಕೆ ಅಣ್ಣನ ಕೊಲೆ: ಅಪಘಾತ ಎಂದು ಬಿಂಬಿಸಲು ಯತ್ನಿಸಿದ ತಮ್ಮ ಬಂಧನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಆಸ್ತಿ ವಿಚಾರದ ಕಲಹವೇ ಕೊನೆಗೆ ಸಹೋದರನ ರಕ್ತಕ್ಕೆ ಕಾರಣವಾದ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹಗರಿಶಿರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇಡೀ ಆಸ್ತಿ ತನ್ನದಾಗಬೇಕು ಎಂಬ ದುರುದ್ದೇಶದಿಂದ ತಮ್ಮನೇ ಸಂಬಂಧಿಯ ಜೊತೆಗೂಡಿ ಅಣ್ಣನನ್ನು ಕೊಲೆ ಮಾಡಿರುವ ಅಮಾನವೀಯ ಕೃತ್ಯ ನಡೆದಿದೆ. ಬಳಿಕ ಪ್ರಕರಣವನ್ನು ಬೈಕ್ ಅಪಘಾತವಾಗಿ ಬಿಂಬಿಸಿ ಸಾಕ್ಷಿ ನಾಶಪಡಿಸಲು ಆರೋಪಿಗಳು ಯತ್ನಿಸಿದ್ದರೂ
, ಮೃತನ ತಾಯಿ ವ್ಯಕ್ತಪಡಿಸಿದ ಅನುಮಾನದಿಂದ ಕೊಲೆ ರಹಸ್ಯ ಬಯಲಾಗಿದೆ.

ಹಗರಿಶಿರಹಳ್ಳಿ ಗ್ರಾಮದ ಮರುಳಸಿದ್ದೇಶ್ (26) ಕೊಲೆಯಾದ ದುರ್ದೈವಿ. ಈ ಪ್ರಕರಣದಲ್ಲಿ ಮೃತನ ತಮ್ಮ ಪತ್ರಿಗೌಡ (24) ಹಾಗೂ ಸಂಬಂಧಿ ನಾರಪ್ಪ (29) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಕೊಲೆಯಾಗಿರುವ ಮರುಳಸಿದ್ದೇಶನ ತಮ್ಮ ಪತ್ರಿಗೌಡ ಮದ್ಯ ವ್ಯಸನಿಯಾಗಿದ್ದು, ಕುಡಿತದ ಚಟಕ್ಕೆ ಬಿದ್ದು ಮನೆಯಲ್ಲೇ ಆಗಾಗ ಜಗಳವಾಡುತ್ತಿದ್ದನೆಂಬುದು ತಿಳಿದುಬಂದಿದೆ. ಆಸ್ತಿಯಲ್ಲಿ ಪಾಲು ನೀಡುವಂತೆ ತಾಯಿ ಜೊತೆ ದಿನನಿತ್ಯ ಗಲಾಟೆ ನಡೆಸುತ್ತಿದ್ದನೆಂದು ಗ್ರಾಮಸ್ಥರು ತಿಳಿಸಿದ್ದಾರೆ.

- Advertisement - 

ಘಟನೆಯ ದಿನ ಪತ್ರಿಗೌಡ, “ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆಎಂದು ಮನೆಯಲ್ಲಿ ಜಗಳವಾಡಿದ್ದಾನೆ. ಬಳಿಕ ತನ್ನ ಸಂಬಂಧಿ ನಾರಪ್ಪನ ಜೊತೆಗೂಡಿ ಅಣ್ಣ ಮರುಳಸಿದ್ದೇಶನನ್ನು ಹೊಂಚುಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಗಳು ಮೊದಲು ಟವೆಲ್‌ನಿಂದ ಉಸಿರುಗಟ್ಟಿಸಿ ಹತ್ಯೆ ನಡೆಸಿ, ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕ್ರೂರವಾಗಿ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಕೊಲೆ ನಡೆದ ಬಳಿಕ, ಪ್ರಕರಣವನ್ನು ಅಪಘಾತವಾಗಿ ತೋರಿಸಲು ಆರೋಪಿಗಳು ಮೃತದೇಹವನ್ನು ಬೈಕ್ ಅಪಘಾತದಲ್ಲಿ ಮೃತಪಟ್ಟಂತೆ ಬಿಂಬಿಸಲು ಯತ್ನಿಸಿದ್ದಾರೆ. ಇದರಿಂದ ಸಾಕ್ಷ್ಯಾಧಾರಗಳನ್ನು ನಾಶಪಡಿಸಿ ಪೊಲೀಸರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದರೆಂಬ ಸಂಗತಿ ಹೊರಬಂದಿದೆ. ಆದರೆ ಮಗನ ಸಾವಿನ ಬಗ್ಗೆ ಮೃತನ ತಾಯಿ ತೀವ್ರ ಅನುಮಾನ ವ್ಯಕ್ತಪಡಿಸಿ, ಇದು ಸಹಜ ಅಪಘಾತವಲ್ಲ, ಸಂಚು ರೂಪಿಸಿ ಮಾಡಿದ ಕೊಲೆ ಎಂದು ಆರೋಪಿಸಿ ದೂರು ನೀಡಿದ್ದರು.

- Advertisement - 

ದೂರು ಆಧರಿಸಿ ತನಿಖೆ ಕೈಗೊಂಡ ಅರಸಿಕೇರೆ ಪೊಲೀಸರು, ಘಟನೆಯ ಸಂಪೂರ್ಣ ಸುಳಿವು ಪತ್ತೆಹಚ್ಚಿ ಕೇವಲ 24 ಗಂಟೆಗಳೊಳಗೆ ಆರೋಪಿಗಳಿಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ಕೊಲೆ ಕೃತ್ಯ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಅರಸಿಕೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಕ್ರಮ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ನಡೆದ ಈ ಸಹೋದರ ಹತ್ಯೆ ಪ್ರಕರಣ ಸ್ಥಳೀಯರಲ್ಲಿ ಬೆಚ್ಚಿಬೀಳುವಂತಾಗಿದೆ.

 

Share This Article
error: Content is protected !!
";