ಕನ್ನಡಿಗರಿಗಾಗಿ ಆಯೋಜಿಸಿದ್ದ ಆರೋಗ್ಯ ಮೇಳ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಈ ಚಳಿ ಎಂಬುವುದು ನಿಂತವರನ್ನು ಕುಳ್ಳಿರಿಸಿ ಬಿಡುತ್ತದೆ. ಕುಳಿತವರನ್ನು ಮಲಗಿಸಿ ಬಿಡುತ್ತದೆ. ಇನ್ನೂ ಮಲಗಿದವರನ್ನು ಸೋಮಾರಿಯನ್ನಾಗಿ ಮಾಡುವ ಮಾಟಗಾತಿಯಂತೆ ಆಟವಾಡಿಬಿಡುತ್ತದೆ. ವಾರಪೂರ್ತಿ ಕೆಲಸದ ಒತ್ತಡದಿಂದ ಯಾಂತ್ರಿಕವಾಗಿ ಚಳಿಯನ್ನು ಲೆಕ್ಕಿಸದೆ ಕಣ್ಣನ್ನು ಹೊರತುಪಡಿಸಿ ಉಳಿದೆಲ್ಲ ದೇಹದ ಭಾಗಗಳಿಗೆ ವಿಧ ವಿಧವಾದ ಪೋಷಾಕುಗಳನ್ನು ಧರಿಸಿ ಚಳಿಯನ್ನು ನಿಯಂತ್ರಿಸಲು ಹರ ಸಾಹಸ ಮಾಡುತ್ತಾ ಹೇಗೋ ವಾರ ಪೂರ್ತಿ ಕೆಲಸ ಮಾಡಿ ಬಂದವರಿಗೆ ಈ ವೀಕೆಂಡ್ ಎಂಬುದು ಚಳಿಯ ಮಾಹೆಗೆ ಶರಣಾಗಿ ಬಿಡುವಂತೆ ಮಾಡುತ್ತದೆ. ಇಂತಹ ಚಳಿಯ ಸಂದರ್ಭದಲ್ಲಿಯೇ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ ನಾಗರಾಜ್ ಅವರು ದೆಹಲಿ ಕನ್ನಡಿಗರ ಯೋಗಕ್ಷೇಮ ನಿಮಿತ್ತ ಆಯೋಜಿಸಿದ್ದ ಆರೋಗ್ಯ ಮೇಳ ತುಂಬಾ ಅಚ್ಚುಕಟ್ಟಾಗಿ ನೆರವೇರಿತು.

ಈ ಆರೋಗ್ಯ ಮೇಳದಲ್ಲಿ ಹೃದಯ ತಜ್ಞರು, ಲಿವರ್ ಸ್ಪೆಶಲಿಸ್ಟ್, ಕ್ಯಾನ್ಸರ್ ತಜ್ಞರು, ಆಯುರ್ವೇದ ತಜ್ಞರು, ನೇತ್ರ ತಜ್ಞರು, ಬೆನ್ನುಮೂಳೆ ತಜ್ಞರು, ಗ್ಯಾಸ್ಟ್ರೋಎಂಟರಾಲಜಿ, ಗೈನಾಕಾಲಾಜಿ, ಯೋಗ, ಪಿಸಿಯೋ ಥೆರಪಿ, ಜನರಲ್ ಫಿಜಿಷಿಯನ್ ಇನ್ನು ಮುಂತಾದ ನುರಿತ ಹೆಸರಾಂತ ವೈದ್ಯರು ಭಾಗವಹಿಸಿದ್ದರು. ಮತ್ತು ಅವರಲ್ಲಿ ಬಹಳ ಮಂದಿ ಕನ್ನಡದವರೇ ಆಗಿದ್ದುದ್ದು ಒಂದು ವಿಶೇಷ. ದೆಹಲಿ ಕನ್ನಡಿಗರು ಆರೋಗ್ಯ ಮೇಳದಲ್ಲಿ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗು ಹಲವು ಲ್ಯಾಬ್ ಪರೀಕ್ಷೆಗಳನ್ನು ಉಚಿತವಾಗಿ ಮಾಡಿಸಿಕೊಂಡು ಆರೋಗ್ಯ ಮೇಳದ ಲಾಭವನ್ನು ಪಡೆದರು.

ಆರೋಗ್ಯ ಮೇಳದಲ್ಲಿ ದೆಹಲಿಯ ಹೆಸರಾಂತ ಏಮ್ಸ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಹಲವಾರು ರಕ್ತದಾನಿಗಳು ತಮ್ಮ ಅಮೂಲ್ಯ ರಕ್ತ ದಾನಮಾಡುವ ಮೂಲಕ ತಮ್ಮ ಕೊಡುಗೆ ನೀಡಿದರು.

ಅದರಲ್ಲೂ ವಯಸ್ಸು ಐವತ್ತು ಮೀರಿದ್ದರು ಚಿರ ಯೌವನಬರಿತರಂತೆ ಇರುವ ಎಸ್ ನರಸಿಂಹಮೂರ್ತಿ ದಂಪತಿಗಳು, ಸಂಘದ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾದ ಮಾಲಿನಿ ಪ್ರಹ್ಲಾದ್ ಮತ್ತು ಮೀತ ಮಿಶ್ರ ಅವರು ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು. ಚುಮು ಚುಮು ಚಳಿಯ ಕಾರಣದಿಂದ ಎಲ್ಲಾ ಕಾರ್ಯಕ್ರಮಕ್ಕೆ ಸೇರುವಂತೆ ಈ ಆರೋಗ್ಯ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಉಪಸ್ಥಿತರಾಗದ ಕಾರಣ ಅಧ್ಯಕ್ಷರು ಬೇಸರ ವ್ಯಕ್ತ ಪಡಿಸಿದರು. ಮತ್ತು ನಮ್ಮವರು ಅವರ ಆರೋಗ್ಯ ಸಲುವಾಗಿಯಾದರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಎಂದು ಹೇಳಿದರು.

ಕೊನೆಯಲ್ಲಿ ಬಂದಿದ್ದ ಎಲ್ಲಾ ವೈದ್ಯರಿಗೂ ಸನ್ಮಾನಿಸಿ ಗೌರವಿಸಲಾಯಿತು ಎಂದು ನವ ದೆಹಲಿ ಉಪ ನಿರೀಕ್ಷಕರಾದ ವೆಂಕಟೇಶ ಹೆಚ್ ಚಿತ್ರದುರ್ಗ ಅವರು ಮಾಹಿತಿ ನೀಡಿದ್ದಾರೆ.

- Advertisement -  - Advertisement - 
Share This Article
error: Content is protected !!
";