ಆಯುಷ್ ಚಿಕಿತ್ಸೆ, ಜೀವನಶೈಲಿಯಿಂದ ಆರೋಗ್ಯಕರ ಜೀವನ-ಡಾ.ಚಂದ್ರಕಾಂತ್  

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾರ್ವಜನಿಕರು ಆಯುಷ್ ಪದ್ಧತಿಯ ಚಿಕಿತ್ಸೆ ಹಾಗೂ ಜೀವನ ಶೈಲಿ ಅಳವಡಿಸಿಕೊಂಡು ಆರೋಗ್ಯಕರ ಜೀವನ ತಮ್ಮದಾಗಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ  ಡಾ.ಚಂದ್ರಕಾಂತ್ ಎಸ್. ನಾಗಸಮುದ್ರ ತಿಳಿಸಿದ್ದಾರೆ.  
ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಆಯುಷ್ ಸೇವೆಗಳು ಜಿಲ್ಲೆಯಾದ್ಯಂತ ಉಚಿತವಾಗಿ ಲಭ್ಯವಿದೆ. ಬಹುತೇಕ ಗ್ರಾಮೀಣ ಭಾಗದಲ್ಲಿ ಇರುವ ಆಯುರ್ವೇದ ಚಿಕಿತ್ಸಾಲಯಗಳ ಮೂಲಕ ಉಚಿತ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ 32 ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಿದ್ದು, ಎಲ್ಲಾ ವ್ಯಾಧಿಗಳಿಗೆ ಆಯುರ್ವೇದದ ಪ್ರಾಥಮಿಕ ಚಿಕಿತ್ಸೆಗಳು ಲಭ್ಯವಿವೆ. 32 ಚಿಕಿತ್ಸಾಲಯಗಳಲ್ಲಿ 10ನ್ನು ಆಯುಷ್ ಆರೋಗ್ಯಮಂದಿರಗಳನ್ನಾಗಿ ಉನ್ನತೀಕರಿಸಿದ್ದು, ಕೇಂದ್ರಗಳಲ್ಲಿ ಚಿಕಿತ್ಸೆಯೊಂದಿಗೆ ರೋಗಾನುಸಾರಪಥ್ಯ, ಜೀವನಶೈಲಿ, ಯೋಗ, ಧ್ಯಾನ ಪ್ರಾಣಾಯಾಮ ತಿಳಿಸಲಾಗುವುದು. ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ದಿನನಿತ್ಯವೂ ಯೋಗ, ಧ್ಯಾನಪ್ರಾಣಾಯಾಮ ಕಲಿಸಲಾಗುವುದು.

  ಚಿತ್ರದುರ್ಗ ತಾಲ್ಲೂಕಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಜೆ.ಎನ್.ಕೋಟೆ, ಅಳಗವಾಡಿ, ಹಿರಿಯೂರು ತಾಲ್ಲೂಕಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಸೊಂಡೆಕೆರೆ, ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ನನ್ನಿವಾಳ, ಹಿರೇಹಳ್ಳಿ, ಓಬಳಾಪುರ ,ಹುಲಿಕುಂಟೆ. ಹೊಸದುರ್ಗ ತಾಲ್ಲೂಕಿನ. ಆಲಘಟ್ಟ, ಕಂಗುವಳ್ಳಿ, ಹೆಬ್ಬಳ್ಳಿ ಇವು ಆಯುಷ್ ಆರೋಗ್ಯಮಂದಿರಗಳಾಗಿ ಮೇಲ್ದರ್ಜೆಗೇರಿಸಲ್ಪಟ್ಟ ಚಿಕಿತ್ಸಾಲಾಯಗಳಾಗಿವೆ.

ಜಿಲ್ಲೆಯಲ್ಲಿ ನಾಲ್ಕು ಆಯುರ್ವೇದ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಮುಂದುವರೆದ ಹಾಗೂ ಆಯುರ್ವೇದ ವಿಶೇಷ ಚಿಕಿತ್ಸೆಗಳಾದ ಅಭ್ಯಂಗ, ಕಟಿಬಸ್ತಿ, ಜಾನುಬಸ್ತಿ, ಪಂಚಕರ್ಮ ಇತ್ಯಾದಿ ಚಿಕಿತ್ಸೆಗಳು ಉಚಿತವಾಗಿ ಲಭ್ಯವಿವೆ.
ಜಿಲ್ಲೆಯ, ಹೊಸದುರ್ಗ, ದೊಡ್ಡತೇಕಲವಟ್ಟಿ, ಚಳ್ಳಕೆರೆ ಹಾಗೂ ಹಿರಿಯೂರು ಇಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಹಿರಿಯೂರು ಹಾಗೂ ಚಳ್ಳಕೆರೆಯಲ್ಲಿ ಮೂಲವ್ಯಾಧಿಗೆ ಸಮರ್ಪಕ ಆಯುರ್ವೇದ ಚಿಕಿತ್ಸೆಯಾದ ಕ್ಷಾರಸೂತ್ರ ತಜ್ಞರು ಲಭ್ಯವಿದ್ದು, ಚಳ್ಳಕೆರೆಯಲ್ಲಿ ಇದಕ್ಕೆ ಸಂಬಂದಿಸಿದ ಮಹಿಳಾ ತಜ್ಞ ವೈದ್ಯರು ಲಭ್ಯವಿರುತ್ತಾರೆ.

ಕಿವಿಮೂಗು, ಗಂಟಲಿನ ಆಯುರ್ವೇದ ತಜ್ಞರು ಚಳ್ಳಕೆರೆಯ ಆಯುರ್ವೇದ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ. ಜಿಲ್ಲಾಸ್ಪತ್ರೆಯ ಆಯುಷ್ ವಿಭಾಗವು ಚಿತ್ರದುರ್ಗದ ಚಳ್ಳಕೆರೆ ರಸ್ತೆಯ ಆದಿಶಕ್ತಿನಗರ, ಮೂರನೇ ತಿರುವಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಆಯುರ್ವೇದ, ಯುನಾನಿ ಹಾಗೂ ಹೋಮಿಯೋಪಥಿ ಪದ್ಧತಿಗಳಲ್ಲಿ ಚಿಕಿತ್ಸೆ ಲಭ್ಯವಿರುತ್ತದೆ. ಆಯುರ್ವೇದದ ವಿಶೇಷ ಚಿಕಿತ್ಸೆಯಾದ ಪಂಚಕರ್ಮದ ತಜ್ಞರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು,  ಸಾರ್ವಜನಿಕರಿಗೆ ಪಂಚಕರ್ಮ ಸೇವೆಗಳೂ ಲಭ್ಯವಿವೆ.

ಆಯುರ್ವೇದ, ಯೋಗ, ಧ್ಯಾನ, ಪ್ರಾಣಾಯಾಮಗಳು ಭಾರತ ಪ್ರಪಂಚಕ್ಕೆ ಕೊಟ್ಟ ಅತ್ಯಮೂಲ್ಯ ಕೊಡುಗೆಗಳು. ಇಂದಿಗೂ ಸುರಕ್ಷಿತ ಹಾಗೂ ಪರಿಪೂರ್ಣ ಚಿಕಿತ್ಸೆಯ ವಿಚಾರ ಬಂದಾಗ ಪ್ರಪಂಚವೇ ಭಾರತೀಯ ವೈದ್ಯಪದ್ಧತಿಗಳು ಗಮನಹರಿಸುತ್ತದೆ. ಹೊಸ ಹೊಸ ಸಂಶೋಧನೆ ಆಧುನಿಕ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ಆಯುಷ್ ಪದ್ಧತಿಗಳು ಜಾಗತಿಕ ಮಟ್ಟಕ್ಕೇರಿವೆ. ಆಯುರ್ವೇದ ಚಿಕಿತ್ಸೆಗೆ ಬೇಡಿಕೆಯು ದಿನೇದಿನೇ ಹೆಚ್ಚುತ್ತಿದೆ.AYUSH  ಎಂದರೆ ಆಯುರ್ವೇದ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ.

ಆಯುರ್ವೇದ: ಚಿಕಿತ್ಸೆಗಿಂತ ಆರೋಗ್ಯ ಕಾಪಾಡಲು ಹೆಚ್ಚು ಒತ್ತು ಕೊಡುವ ಚಿಕಿತ್ಸಾ ಪದ್ಧತಿಯಲ್ಲಿ ಆಧುನಿಕ ಜೀವನಶೈಲಿಯಿಂದ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಮಧುಮೇಹ, ರಕ್ತದ ಒತ್ತಡ ಇತ್ಯಾದಿ ಅಸಾಂಕ್ರಾಮಿಕ ರೋಗಗಳಿಗೆ ಸಮರ್ಥ ಚಿಕಿತ್ಸೆಗಳಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ರೋಗವೇ ಬರದಂತೆ ಕಾಪಾಡುವ ಪಂಚಕರ್ಮ, ದಿನಚರ್ಯ, ಋತುಚರ್ಯ, ಆರೋಗ್ಯಕರ ಜೀವನಶೈಲಿ, ಆಹಾರ ಪದ್ಧತಿ, ಮಾನಸಿಕ ಚಿಕಿತ್ಸೆ ಹೀಗೆ, ಕೇವಲ ಚಿಕಿತ್ಸೆ ಅಲ್ಲ ಮಾನವ ಜನನದಿಂದ ಮರಣದವರೆಗೆ ಸುಖವಾಗಿ, ಹಿತವಾಗಿ ಬದುಕಲು ಅವಶ್ಯವಿರುವ ಎಲ್ಲಾ ತತ್ವಗಳೂ ಆಯುರ್ವೇದದಲ್ಲಿವೆ.

ಯೋಗ ಹಾಗೂ ಪ್ರಕೃತಿಚಿಕಿತ್ಸೆ: ಒತ್ತಡ ನಿರ್ವಹಣೆಗೆ ಯೋಗ ಪದ್ಧತಿಯಲ್ಲಿ ಹೇಳಿದ ಧ್ಯಾನ, ಪ್ರಾಣಾಯಾಮಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ. ಗಾಳಿ, ನೀರು, ಮಣ್ಣು, ಸೊಪ್ಪು, ತರಕಾರಿ ಹಣ್ಣುಗಳನ್ನೇ ಬಳಸಿ ಔಷಧಿ üರಹಿತವಾಗಿ ವ್ಯಾಧಿಶಮನ ಮಾಡುವ ವಿಶಿಷ್ಠ ಪದ್ಧತಿ ಪ್ರಕೃತಿಚಿಕಿತ್ಸೆ.

ಯುನಾನಿ: ಗ್ರೀಕ್ ಮತ್ತು ಅರಬ್ ಮೂಲಕ ವೈದ್ಯಪದ್ಧತಿಯಾದರೂ ನಮ್ಮ ನೆಲದ ಸಸ್ಯಗಳನ್ನೂ ಬಳಸಿಕೊಂಡು ನಮ್ಮ ವೈದ್ಯ ಪದ್ಧತಿಯೆ ಆಗಿದ ಯುನಾನಿ ವೈದ್ಯ ಪದ್ಧತಿಯಲ್ಲಿ ಕಪ್ಪಿಂಗ್ ಥೆರಪಿ, ರಜಿಮಿನಲ್ ಥೆರಪಿಯಂತಹ ವಿಶಿಷ್ಟ ಚಿಕಿತ್ಸಾ ವಿಧಾನಗಳನ್ನು ಹೊಂದಿದೆ.

ಸಿದ್ಧ: ಸಸ್ಯಗಳಷ್ಟೇ ಅಲ್ಲ ಲೋಹಗಳನ್ನೂ ಶುದ್ಧಿಕರಿಸಿ ಚಿಕಿತ್ಸೆಗೆ ಬಳಸಬಹುದೆಂದು ಜಗತ್ತಿಗೇ ತೋರಿಸಿ ಕೊಟ್ಟ ದಕ್ಷಿಣ ಭಾರತ ಮೂಲದ ಹೆಮ್ಮೆಯ ವೈದ್ಯಪದ್ಧತಿ ಇದು, ಸಿದ್ದ ವೈದ್ಯಪದ್ಧತಿಯಲ್ಲಿ ಬಳಸುವ ಭಸ್ಮಗಳು ಇಂದಿನ ನ್ಯಾನೋ ತಂತ್ರಜ್ಞಾನವನ್ನು ಹೋಲುತ್ತವೆ. ಹಾಗೂ ಸೌವರಿಗ್ರಾಹಿಮಾಲಯದ ತಪ್ಪಲಿನ ನೇಪಾಳ ಮೂಲದ ಮೂಲಿಕಾ ವೈದ್ಯಪದ್ಧತಿ ಕ್ರಮೇಣ ಭಾರತಲ್ಲೂ ಜನಪ್ರಿಯತೆ ಪಡೆಯುತ್ತಿದೆ.

ಹೋಮಿಯೋಪತಿ: ಜರ್ಮನ್ಮೂಲದ ವೈದ್ಯಪದ್ಧತಿಯಾದರೂ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದೆ ಔಷಧಿಗಳು ಪ್ರಮಾಣದಲ್ಲಿ ಚಿಕ್ಕದಾದರೂ ಉಕೃಷ್ಣಗುಣಮಟ್ಟದ್ದಾಗಿವೆ. ಗಿಡಮೂಲಿಕೆಗಳ ಸಾರವರ್ಧಿಸಿ ಚಿಕ್ಕ ಚಿಕ್ಕ ಮಾತ್ರೆಗಳ ರೂಪದಲ್ಲಿ ಚಿಕಿತ್ಸೆಗೆ ಬಳಸಲಾಗುತ್ತದೆ.

ಆಯುಷ್ ಪದ್ಧತಿಗಳಲ್ಲಿ ಕೇವಲ ಚಿಕಿತ್ಸೆ ಮಾತ್ರವಲ್ಲ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಲು ಬೇಕಾದ ಎಲ್ಲಾ ಆಂಶಗಳನ್ನು ವಿವರಿಸಿದ್ದಾರೆ. ಪರಿಪೂರ್ಣ ಆರೋಗ್ಯ ಬಯಸುವವರಿಗೆ ಆಯಷ್ ಚಿಕಿತ್ಸಾಪದ್ಧತಿಗಳು ಅತ್ಯುತ್ತಮ ಆಯ್ಕೆಯಾಗಿವೆ ಎಂದು ಜಿಲ್ಲಾ ಆಯುಷ್ ಅಧಿಕಾರಿ  ಡಾ.ಚಂದ್ರಕಾಂತ್ ಎಸ್. ನಾಗಸಮುದ್ರ ತಿಳಿಸಿದ್ದಾರೆ.  

 

- Advertisement -  - Advertisement - 
Share This Article
error: Content is protected !!
";