ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಪಟ್ಟಣ ಹಾಗೂ ತಾಲೂಕಿನಲ್ಲಿ ಕಳೆದ ರಾತ್ರಿ ಗುಡುಗು ಸಿಡಿಲು ಸಹಿತ ಸುರಿದ ಧಾರಾಕಾರ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿದ ಪರಿಣಾಮ ತಾಲೂಕಿನ ಪಕ್ಕುರ್ತಿ ಕೆರೆ ಹಾಗೂ ಗೌರಸಮುದ್ರದ ಕೆರೆ ತುಂಬಿ ಕೋಡಿ ಬಿದ್ದಿದ್ದು, ರಂಗಯ್ಯನದುರ್ಗ ಜಲಾಶಯಕ್ಕೂ ಅಪಾರ ಪ್ರಮಾಣದ ನೀರು ಹರಿದು ಬರಲಿದೆ.
ಕಳೆದ ಶುಕ್ರವಾರ ರಾತ್ರಿ ವೇಳೆ ಸುಮಾರು ೧೧ ಗಂಟೆಯಿಂದ ಶುರುವಾದ ಮಳೆಯು ಬೆಳಿಗ್ಗೆ ೬ ಗಂಟೆಯ ವರೆಗೂ ಧಾರಾಕಾರ ಮಳೆ ಸುರಿದಿದೆ.
ಧಾರಾಕಾರವಾಗಿ ಸುರಿದ ಮಳೆಯಿಂದ ಪಟ್ಟಣದ ಐತಿಹಾಸಿಕ ಕೂಗೆಗುಡ್ಡದ ಕೆರೆ ತುಂಬಿದ ಪರಿಣಾಮ ಯತೇಚ್ಚವಾದ ನೀರು ರಾಜಕಾಲುವೆ ಮೂಲಕ ಹರಿದು ತಾಲೂಕಿನ ರಾಯಾಪುರ ಬಳಿಯ ತುಪ್ಪದಕ್ಕನಹಳ್ಳಿ ಕೆರೆಗೆ ತುಂಬಿಕೊಂಡಿದೆ. ಪಟ್ಟಣದ ದವಳಪ್ಪನ ಕುಂಟೆ ಸೇರಿದಂತೆ ತಾಲೂಕಿನ ಇನ್ನಿತರ ಹಳ್ಳಗಳು ತುಂಬಿ ಹರಿದಿವೆ.
ತಾಲೂಕಿನಲ್ಲಿ ಸುರಿದ ಮಳೆಯಿಂದ ಚಿಕ್ಕೋಬನಹಳ್ಳಿ ಬಳಿಯ ಬ್ಯಾರೇಜ್ ತುಂಬಿಕೊಂಡು ಅಪಾರ ಪ್ರಮಾಣದ ನೀರು ರಂಗಯ್ಯನದುರ್ಗ ಜಲಾಶಯಕ್ಕೆ ಹರಿದಿದೆ. ತಾಲೂಕಿನಲ್ಲಿನ ಪಕ್ಕುರ್ತಿ ಕೆರೆಯು ತುಂಬಿ ಕೋಡಿ ಬಿದ್ದಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ತಾಲೂಕಿನ ದೇವಸಮುದ್ರ ಕೆರೆ, ಅಮಕುಂದಿಕೆರೆ, ಹಿರೇಕೆರೆಹಳ್ಳಿ ಕೆರೆ, ನಾಗಸಮುದ್ರದ ಕೆರೆ, ಅಶೊಕ ಸಿದ್ದಾಪುರ ಕೆರೆ , ಭಟ್ರಹಳ್ಳಿ ಕೆರೆ ಹಾಗೂ ಇನ್ನಿತರ ಕೆರೆ ಕುಂಟೆಗಳಿಗೆ ಅಪಾರ ಪ್ರಮಾಣದ ನೀರು ಹರಿದಿದೆ.
ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಾಗಿದ್ದು, ತಾಲೂಕಿನಲ್ಲಿ ಅತಿ ಹೆಚ್ಚು ದೇವಸಮುದ್ರದಲ್ಲಿ ೮೯.೩ ಮಿ.ಮೀ ನಷ್ಟು ಅಧಿಕ ಮಳೆಯಾಗಿದೆ. ಮೊಳಕಾಲ್ಮೂರು ಪಟ್ಟಣದಲ್ಲಿ ೭೨.೬ ಮಿ.ಮೀ, ತಾಲೂಕಿನ ರಾಂಪುರ ದಲ್ಲಿ ೭೦.೧ ಮಿ.ಮೀ.ರಾಯಾಪುರ ದಲ್ಲಿ ೬೨ ಮಿ.ಮೀ, ಹಾಗೂ ಬಿ.ಜಿ.ಕೆರೆ ಯಲ್ಲಿ ೩೪.೪ ಮಿ.ಮೀ. ನಷ್ಟು ಮಳೆಯಾಗಿರುವುದು ವರದಿಯಾಗಿದೆ.
ಧಾರಾಕಾರವಾಗಿ ಸುರಿದ ಮಳೆಯಿಂದ ತಾಲೂಕಿನ ಮೊಗಲಹಳ್ಳಿಯಲ್ಲಿ ೧, ಬಿ.ಜಿ.ಕೆರೆಯಲ್ಲಿ ೨, ಹಿರೇಕೆರೆಹಳ್ಳಿ ಮ್ಯಾಸರಹಟ್ಟಿ ೧, ದೇವಸಮುದ್ರದಲ್ಲಿ ೨, ಫಕ್ಕುರ್ತಿಯಲ್ಲಿ ೧, ಕೆರೆಕೊಂಡಾಪುರದಲ್ಲಿ ೧ , ಪೆನ್ನಮ್ಮನಹಳ್ಳಿಯಲ್ಲಿ ೧ ಹಾಗೂ ಕೆಳಗಿನಕಣಿವೆಯಲ್ಲಿ ೧ ಸೇರಿದಂತೆ ಒಟ್ಟು ೧೦ ಮನೆಗಳು ಭಾಗಶಃ ಹಾನಿಯಾಗಿರುವುದು ವರದಿಯಾಗಿದೆ. ತಾಲೂಕಿನಲ್ಲಿ ಬಿತ್ತನೆ ಮಾಡಿದ ಕೃಷಿ ಬೆಳೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.