ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಭಾರೀ ಮಳೆಗೆ ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿರುವ ಘಟನೆ ತಾಲೂಕಿನ ತಿರುಮಗೊಂಡನಹಳ್ಳಿಯಲ್ಲಿ ನಡೆದಿದೆ.
ಹಾಡೋನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ತಿರುಮಗೊಂಡನಹಳ್ಳಿಯಲ್ಲಿ ಚರಂಡಿ ಸ್ವಚ್ಛಗೊಳಿಸಿ ಹಲವುತಿಂಗಳುಗಳೇ ಕಳೆದಿವೆ. ಇದರ ಪರಿಣಾಮ ಇಂದು ಮಳೆಯಾದ ಹಿನ್ನೆಲೆ ನೇರವಾಗಿ ಚರಂಡಿ ನೀರು ಮಿಶ್ರಿತ ಮಳೆ ನೀರು ಮನೆಗಳಿಗೆ ನುಗ್ಗಿ ದವಸಧಾನ್ಯ ನೀರು ಪಾಲಾಗಿವೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಆಂಜಿನಮ್ಮ ಮತ್ತು ವಿಜಿಯಮ್ಮ, ಪಂಚಾಯತಿ ಸದಸ್ಯೆ ನಂಜಮ್ಮ ಸೇರಿದಂತೆ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತ ಪರಿಸ್ಥಿರಿ ನಿರ್ಮಾಣವಾಗಿದೆ.
ಚರಂಡಿ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಗ್ರಾಮಸ್ಥರಮನವಿಗೆ ಹಾಡೋನಹಳ್ಳಿ ಪಂಚಾಯತಿ ಅಧಿಕಾರಿಗಳು ಸ್ಪಂದಿಸದ ಕಾರಣ ಈ ಅವಾಂತರ ಸೃಷ್ಟಿಯಾಗಿದೆ.
ಈಗಾಲಾದರೂ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕಾಲಕಾಲಕ್ಕೆ ಚರಂಡಿಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.