ಹಿರಿಯೂರು, ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಭಾರೀ ಮಳೆ, ಹಸು ಸಾವು 

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರ ಸೇರಿದಂತೆ ತಾಲೂಕಿನ ಹಲವೆಡೆಗಳಲ್ಲಿ ಗುಡುಗು, ಸಿಡಿಲು, ಭಾರೀ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆಗಳು, ಗಿಡ ಮರಗಳು ಉರುಳಿ ಬಿದ್ದು ನಷ್ಟ ಆಗಿರುವುದಲ್ಲದೆ ಬೃಹತ್ ಮರವೊಂದು ಹಸುವಿನ ಮೇಲೆ ಬಿದ್ದು ಹಸು ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲೂಕಿನಲ್ಲಿ ಜರುಗಿದೆ.

2025ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನಲ್ಲಿ ಶುಕ್ರವಾರ ಬಿದ್ದ ಭಾರೀ ಮಳೆಯಿಂದಾಗಿ ಹಿರಿಯೂರು ತಾಲೂಕಿನ ಜೆ ಜಿ ಹಳ್ಳಿ ಹೋಬಳಿಯ ಜೆ ಜಿ ಹಳ್ಳಿ ವೃತ್ತ ವ್ಯಾಪ್ತಿಯ ಮೂಡಲಹಟ್ಟಿ ಗ್ರಾಮದಲ್ಲಿ ಭಾರೀ ಮಳೆ ಗಾಳಿಗೆ ಐದು ಶೀಟ್ ಮನೆಗಳು ಬಿದ್ದಿ ಹೋಗಿರುತ್ತವೆ. ಶಾಲಾ ಕಟ್ಟಡದ ಮೇಲೆ ಮರಗಳು ಉರುಳಿ  ಬಿದ್ದು ಅಪಾರ ಹಾನಿಯಾಗಿದೆ.

ಮರಡಿ ಹಟ್ಟಿ ಗ್ರಾಮದಲ್ಲಿ ಒಂದು ಶೀಟ್ ಮನೆ 4 ಕರೆಂಟ್ ಕಂಬ ಬಿದ್ದಿರುತ್ತವೆ. ಓದೋ ಮಾರಪ್ಪ ತೋಟದಲ್ಲಿ ನಾಲ್ಕು ತೆಂಗಿನ ಮರಗಳು, ಗಾಳಪ್ಪ ರವರ ಜಮೀನಿನಲ್ಲಿ ಒಂದು ಕರೆಂಟ್ ಕಂಬ ಬಿದ್ದಿರುತ್ತದೆ. ಮೂಡ್ಲಟ್ಟಿ ಗ್ರಾಮದ ರೈತರ ಜಮೀನುಗಳಲ್ಲಿ ಸುಮಾರು 750 ಅಡಿಕೆ ಮರಗಳು ಉರುಳಿ ಬಿದ್ದು ಹಾನಿಯಾಗಿರುತ್ತದೆ. ಹಾಗೂ ಬಿ ಕೆ ಹಟ್ಟಿ ಗ್ರಾಮದಲ್ಲಿ ದೊಡ್ಡ ಗಾತ್ರದ ಮರವೊಂದು ಉರುಳಿ ಬಿದ್ದು ಹಸು ಮೃತಪಟ್ಟಿದೆ. ಇದಲ್ಲದೆ ತಾಲೂಕಿನ ಇತರೆ ಭಾಗಗಳಲ್ಲೂ ಭಾರೀ ಗಾಳಿ ಬೀಸಿದ್ದು ಬಾಳೆ, ಫಸಲಿಗೆ ಬಂದಿದ್ದ ಮಾವಿನ ಹಣ್ಣುಗಳು ಸೇರಿದಂತೆ ದಾಳಿಂಬೆ ತೋಟಗಳಿಗೂ ಹಾನಿ ಆಗಿದೆ ಎನ್ನಲಾಗಿದೆ.

ಹಾನಿ ಪ್ರದೇಶಗಳಿಗೆ ಭೇಟಿ-
ಭಾರೀ ಗಾಳಿ ಮತ್ತು ಗುಡುಗು, ಸಿಡಿಲು ಸಹಿತ ಮಳೆಯಿಂದ ಹಾನಿಯಾದ ವಿವಿಧ ಸ್ಥಳಗಳಿಗೆ ತಹಶೀಲ್ದಾರ್ ಸಿ ರಾಜೇಶ್ ಕುಮಾರ್
ಹಾಗೂ ಸಂಬಂದಿಸಿದ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಹಾನಿ ಪ್ರಮಾಣವನ್ನು ಪರಿಶೀಲಿಸಿದರು. ಅಲ್ಲದೆ ಸರ್ಕಾರದ ಮಾರ್ಗ ಸೂಚಿ ಪ್ರಕಾರ ನಷ್ಟ ಪ್ರಮಾಣ ಪರಿಶೀಲಿಸಿ ಕಂದಾಯಾಧಿಕಾರಿಗಳ ವರದಿ ಬಂದ ತಕ್ಷಣ ಪರಿಹಾರವನ್ನು ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ತಹಶೀಲ್ದಾರ್ ತಿಳಿಸಿದರು.

ದಿಢೀರ್ ಆಲಿಕಲ್ಲು ಮಳೆ-
ಹಿರಿಯೂರು ನಗರದಲ್ಲಿ ಶುಕ್ರವಾರ ಮಧ್ಯಾಹ್ನ 3.30 ಗಂಟೆ ನಂತರ ದಿಢೀರ್ ಆಲಿಕಲ್ಲು ಮಳೆ ಸುರಿದಿದೆ. ನಗರದ ನೆಹರು ಮೈದಾನ ಸೇರಿದಂತೆ ವಿವಿಧ ಬಡಾವಣೆಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಭಾರೀ ಮಳೆಯಿಂದಾಗಿ ನೆಹರು ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿ ಸ್ಥಗಿತಗೊಂಡಿದೆ.

ಹಿರಿಯೂರು ತಾಲೂಕಿನಾದ್ಯಂತ ವರ್ಷದ ಪೂರ್ವ ಮುಂಗಾರು ಹಂಗಾಮಿನ ಮೊದಲ ಮಳೆ ಬಂದಿದ್ದು ಜನರಿಗೆ ಹರ್ಷ ತಂದಿದೆ. ಅಲ್ಲದೆ ಬಿತ್ತನೆ ಪೂರ್ವ ಜಮೀನು ಹಸನು ಮಾಡಿಕೊಳ್ಳಲು ಈ ಮಳೆ ರೈತರಿಗೆ ವರದಾನವಾಗಿ ಪರಿಣಮಿಸಿದೆ.

Share This Article
error: Content is protected !!
";