ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಪ್ರಧಾನ ರಸ್ತೆಯ ಎರಡು ಬದಿಗಳಲ್ಲಿರುವ ಮತ್ತು ಹುಳಿಯಾರ್ ರಸ್ತೆಯ ಎರಡು ಬದಿಗಳಲ್ಲಿರುವ ನೈಟ್ ಹೋಟೆಲ್ ಗಳನ್ನು ಪೌರಾಯುಕ್ತರಾದ ಎ.ವಾಸೀಂ ಅವರ ಸೂಚನೆ ಮೇರೆಗೆ ಆರೋಗ್ಯ ನೀರಿಕ್ಷಕರು ಪಾದಚಾರಿ ಹೋಟೆಲ್ಗಳ ಮೇಲೆ ದಿಢೀರ್ ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ಬಳಕೆ, ಆಹಾರಕ್ಕೆ ಬಳಸುವ ಕಲರ್, ಟೇಸ್ಟಿಂಗ್ ಪೌಡರ್, ಹೋಟೆಲ್ ಗಳ ಶುಚಿತ್ವದ ಕುರಿತು 68ಕ್ಕೂ ಹೆಚ್ಚಿನ ಹೋಟೆಲ್ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದರು.
ಪರಿಶೀಲನೆ ವೇಳೆ ರಸ್ತೆಗೆ ಕಸ ಚೆಲ್ಲಿದವರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಲಾಯಿತು.
ವ್ಯಾಪಾರ ಮಾಡುವವರು ಸಾರ್ವಜನಿಕರ ಆರೋಗ್ಯ ಗಮನದಲ್ಲಿಟ್ಟುಕೊಳ್ಳಬೇಕು ಯಾವುದೇ ರೀತಿಯ ಟೇಸ್ಟಿಂಗ್ ಪೌಡರ್ ಆಗಲಿ ಅಥವಾ ಕಲರ್ ಆಗಲಿ ಬಳಸಬಾರದು, ಹೆಚ್ಚು ಹೆಚ್ಚಾಗಿ ಸಾರ್ವಜನಿಕರು ಕಡಿಮೆ ಬೆಲೆಯೆಂದು ಫುಟ್ ಪಾತ್ ಹೋಟೆಲ್ ಗಳಿಗೆ ಬರುವುದರಿಂದ ಗುಣಮಟ್ಟದ ಆಹಾರ ನೀಡುವುದು ಕಡ್ಡಾಯವಾಗಿದೆ.
ತಳ್ಳುವ ಕೈ ಗಾಡಿಗಳಿಗೆ ಸುರಕ್ಷಿತ ಪರದೆ ಹಾಕದೆ ಓಪನ್ ಬಿಡುವುದರಿಂದ ರಸ್ತೆಯ ಧೂಳಿನ ಕಣಗಳು ಆಹಾರದ ಮೇಲೆ ಕುಳಿತು ರೋಗ ರುಜಿನಗಳು ಬರುವ ಸಾಧ್ಯತೆಗಳಿರುವುದರಿಂದ ಗ್ಲಾಸ್ ಫಿಟ್ಟಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಆರೋಗ್ಯ ನಿರೀಕ್ಷಕರು ಎಚ್ಚರಿಸಿದರು.
ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ಹಾಗೂ ಪ್ರಾಣಿ ಸಂಕುಲಗಳ ಮೇಲೂ ದುಷ್ಪರಿಣಾ ಬೀರುವುದರಿಂದ ಪರಿಸರ ಮಾಲಿನ್ಯ ಕೂಡ ಹೆಚ್ಚಾಗುತ್ತಿದೆ ಎಂದು ಅವರು ಎಚ್ಚರಿಸಿದರು.
ಹಿರಿಯೂರು ನಗರದ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ ಮತ್ತು ಅಂಗಡಿ, ಹೋಟೆಲ್ ಮಾಲೀಕರುಗಳಿಗೆ ನಗರಸಭೆ ಅಧಿಕಾರಿಗಳು ವಿನಂತಿಸಿ ಸ್ವಚ್ಛತೆ ಕಾಪಾಡುವ ಮೂಲಕ ಹಿರಿಯೂರು ಕಸಮುಕ್ತ ನಗರ ಮಾಡಲು ಸಹಕರಿಸುವಂತೆ ಅವರು ಕೋರಿದರು.
ಈ ಸಂದರ್ಭದಲ್ಲಿ ಹಿರಿಯೂರು ನಗರಸಭೆಯ ಆರೋಗ್ಯ ನಿರೀಕ್ಷಕರಾದ ಸಂಧ್ಯಾ, ಸುನೀಲ್ ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

