ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕಲ್ಪತರು ನಾಡಿನ ರೈತರ ಹೇಮಾವತಿ ನೀರಿನ ಹಕ್ಕು ಕಸಿಯಲು ಹೊರಟಿರುವ ಸರ್ಕಾರದ ಏಕಪಕ್ಷೀಯ ನಿರ್ಧಾರ ಖಂಡನೀಯ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ತುಮಕೂರು ಜಿಲ್ಲೆಯ ರೈತರ ಸಮಸ್ಯೆ ಆಲಿಸುವ ಸಲುವಾಗಿ ಸುಂಕಾಪುರದ ಹೇಮಾವತಿ ನಾಲೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ದ್ವೇಷದ ರಾಜಕಾರಣ, ಸರ್ವಾಧಿಕಾರಿತನ, ಏಕ ಪಕ್ಷಿಯ ನಿರ್ಧಾರ, ಅಪನಂಬಿಕೆ ಹಾಗೂ ಪರಸ್ಪರ ದ್ವೇಷ ಬಿತ್ತುವ ವಾತಾವರಣ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಜವಾಬ್ದಾರಿ ಸರ್ಕಾರದ ಆಧ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಹೇಮಾವತಿ ರೂಟ್ ಕೆನಾಲ್ ಯೋಜನೆ ರಾಜಕೀಯ ಅಸ್ತ್ರವಾಗಬಾರದು ಎಂದು ವಿಜಯೇಂದ್ರ ಹೇಳಿದರು.
ಈ ಯೋಜನೆ ಯಾರನ್ನೂ ಬಾಧಿಸದಂತೆ ಕಾರ್ಯಗತಗೊಳಿಸುವ ಬದ್ಧತೆ ಹಾಗೂ ಜನಕಾಳಜಿ ತೋರಬೇಕು. ಸರ್ಕಾರ ಕೈಗೊಳ್ಳುವ ಯಾವುದೇ ಯೋಜನೆಗಳು ನಮ್ಮದೇ ಜನರು ಆತಂಕ, ಅನುಮಾನ ಹಾಗೂ ಅನ್ಯಾಯ ಉಂಟಾಗುವುದೆಂಬ ಭಾವನೆ ನುಸುಳದಂತೆ ಜನರಲ್ಲಿ ಭರವಸೆಯನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಈ ಕೂಡಲೇ ನೀರಾವರಿ ತಜ್ಞರು, ರೈತ ಹೋರಾಟಗಾರರನ್ನೂ ಒಳಗೊಂಡಂತೆ ಸರ್ವ ಪಕ್ಷಗಳ ಶಾಸಕರುಗಳ ತುರ್ತು ಸಭೆ ಕರೆದು ತುಮಕೂರು ಜಿಲ್ಲೆಯ ಜನರಿಗೆ ಎದುರಾಗಿರುವ ಆತಂಕವನ್ನು ಈ ಕೂಡಲೇ ನಿವಾರಿಸಲಿ ಎಂದು ವಿಜಯೇಂದ್ರ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಸಿ.ಟಿ ರವಿ, ಶಾಸಕರಾದ ಬಿ.ಸುರೇಶ್ ಗೌಡ, ಜಿ.ಬಿ.ಜ್ಯೋತಿಗಣೇಶ್, ಧೀರಜ್ ಮುನಿರಾಜು, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ನಾಗರಾಜ್, ಬೆಟ್ಟ ಸ್ವಾಮಿ, ಚಂದ್ರಶೇಖರ ಬಾಬು, ಬ್ಯಾಟರಂಗೇಗೌಡ, ಬೈರಪ್ಪ, ನಿಟ್ಟೂರು ಪ್ರಕಾಶ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳೀಕೆರೆ ಸೇರಿದಂತೆ ಸ್ಥಳೀಯ ಮುಖಂಡರು, ರೈತ ಮುಖಂಡರು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.