ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ಸ್ಥಗಿತ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆಯ ರೈತರ ತೀವ್ರ ವಿರೋಧ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿಯನ್ನು ತಾತ್ಕಾಲಿಕವಾಗಿ ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ.

- Advertisement - 

ನಿಷೇಧಾಜ್ಞೆ ನಡುವೆಯೂ ರೈತರು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆ ರೈತರ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶಾಸಕರ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಹೋರಾಟ ಕೈಬಿಡುವಂತೆ ಮನವಿ ಮಾಡಿದರು.

- Advertisement - 

ಇದಕ್ಕೆ ಸ್ಪಂದಿಸಿದ ಪ್ರತಿಭಟನಾಕಾರರು ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿ ಪ್ರತಿಭಟನೆಗೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ರೈತರು ಒಪ್ಪಿಗೆ ನೀಡಿದ್ದರಿಂದಾಗಿ ಪ್ರತಿಭಟನೆಗೆ ಸದ್ಯ ಬ್ರೇಕ್ ಬಿದ್ದಿದೆ.

ಬಿಜೆಪಿಯ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
1,500 ಕೋಟಿ ರೂ.ವೆಚ್ಚದಲ್ಲಿ ನಾಲೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಕೆಲಸ ಆರಂಭವಾಗುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ವಿರೋಧ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ದೂರಿದರು.

- Advertisement - 

ಹೇಮಾವತಿ ಎಕ್ಸ್‌ಪ್ರೆಸ್‌ ನಾಲೆ ಕಾಮಗಾರಿ ಅನುಷ್ಠಾನಕ್ಕೆ ಜಲ ಸಂಪನ್ಮೂಲ ಸಚಿವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಹಲವು ಸಭೆಗಳನ್ನು ನಡೆಸಲಾಗಿತ್ತು. ಆ ಭಾಗದ ಸಂಸದರು, ಶಾಸಕರು ಭಾಗವಹಿಸಿದ್ದರು.

ತಾಂತ್ರಿಕ ಸಮಿತಿ ರಚಿಸಲು ಒತ್ತಾಯಿಸಿದ್ದರು. ಸಮಿತಿ ಕಾಮಗಾರಿ ಕೈಗೊಳ್ಳಲು ಸಮ್ಮತಿ ನೀಡಿದ ನಂತರವೇ ಕಾಮಗಾರಿ ಆರಂಭಿಸಲಾಗಿದೆ. ಪ್ರಸ್ತಾವವನ್ನು ಸಮಿತಿ ತಿರಸ್ಕರಿಸಿದ್ದರೆ ಯೋಜನೆಯನ್ನೇ ರದ್ದು ಮಾಡುತ್ತಿದ್ದೆವು. ಈ ಎಲ್ಲ ವಿಷಯ ಗೊತ್ತಿದ್ದರೂ ಬಿಜೆಪಿ ಏಕೆ ವಿರೋಧ ಮಾಡುತ್ತಿದೆ ಎಂದು ಪರಮೇಶ್ವರ್ ತೀಕ್ಷ್ಣವಾಗಿ ಪ್ರಶ್ನಿಸಿದರು.

ಈ ಕುರಿತು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಮಾತನಾಡಿ, ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಯೋಜನೆಯ ಶೇ.40ರಷ್ಟು ಕಾಮಗಾರಿ ಮುಗಿದಿದೆ. ಹೀಗಿರುವಾಗ ಕಾಮಗಾರಿ ನಿಲ್ಲಿಸುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದರು.

ಅಲ್ಲಿರುವವರು, ಇಲ್ಲಿರುವವರು ಎಲ್ಲರೂ ನಮ್ಮ ರೈತರೇ. ಎಲ್ಲರ ಹಿತ ಕಾಪಾಡುವುದು ನಮ್ಮ ಕರ್ತವ್ಯ ಎಂದು ಡಿಸಿಎಂ ತಿಳಿಸಿದರು.

 ಬಿಜೆಪಿ ಶಾಸಕ ಸುರೇಶ್ ಗೌಡರ ನೇತೃತ್ವದ ಪ್ರತಿಭಟನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಶಾಸಕರಾದ ಕೃಷ್ಣಪ್ಪ, ಸುರೇಶ್ ಗೌಡ ಅವರಿಗೆ ಈ ಯೋಜನೆ ವಿಚಾರವಾಗಿ ಅರಿವಿದೆ‌ ಎಂದು ಹೇಳಿದ್ದಾರೆ. ಅವರೂ ಈ ಬಗ್ಗೆ ಮಾತನಾಡಿದ್ದಾರೆ. ಆದರೂ ಈಗ ಹೋರಾಟ ಮಾಡುತ್ತಿದ್ದಾರೆ. ಇದನ್ನು ನಾನು ತಪ್ಪು ಎಂದು ಹೇಳುವುದಿಲ್ಲ. ಮಾನಸಿಕವಾಗಿ ಎಲ್ಲಾ ಶಾಸಕರಿಗೂ ಈ ವಿಚಾರ ತಿಳಿದಿದೆ ಎಂದರು.

ವಿ.ಸೋಮಣ್ಣ ಅವರು ಈ ವಿಚಾರವಾಗಿ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಅವರು ದೊಡ್ಡವರು, ಕೇಂದ್ರ ಸಚಿವರು. ಅವರ ಮಾರ್ಗದರ್ಶನವನ್ನೂ ಕೇಳೋಣ ಎಂದು ಡಿಕೆಶಿ ಹೇಳಿದರು.

 

Share This Article
error: Content is protected !!
";