ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದಲ್ಲಿನ ಅಧಿಕಾರ ಹಂಚಿಕೆ ಗೊಂದಲ ನಾಳೆ, ನಾಡಿದ್ದು ಹೈಕಮಾಂಡ್ ಸಭೆ ಇದೆ.ಆಗ ಮಾತನಾಡಿ ಅಂತಿಮ ನಿರ್ಧಾರ ಮಾಡುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಹಿಂದುಳಿದ ವರ್ಗಗಳ ಸಭೆ ಇದೆ. ಬಿಹಾರ ಫಲಿತಾಂಶ ಕುರಿತು ಆತ್ಮಾವಲೋಕನ ಸಭೆಯ ಚರ್ಚೆ ನಡೆಯಲಿದೆ. ಆ ಸಂದರ್ಭದಲ್ಲಿ ರಾಜ್ಯದ ಗೊಂದಲ ಮಾಡಲಿದೆ. ಮಲ್ಲಿಕಾರ್ಜುನ ಖರ್ಗೆಯವರು ಒಂದು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಅವರು ತಿಳಿಸಿದರು.
ಎರಡೂವರೆ ವರ್ಷಕ್ಕೆ ಸಿಎಂ ಅಂತ ಆಗಿಲ್ಲವಾ ಎಂಬ ಶಾಸಕ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ದೆಹಲಿಗೆ ಹೋಗಿ ಪ್ರಶ್ನೆ ಮಾಡಲಿ, ಮಾಧ್ಯಮದಲ್ಲಿ ಅಲ್ಲ. ಯಾರ್ಯಾರಿಗೆ ಏನೇನು ಜವಾಬ್ದಾರಿ ಕೊಡಬೇಕು ಎಂಬುದು ಸಿಎಲ್ಪಿಯಲ್ಲಿ ತೀರ್ಮಾನ ಆಗಿಲ್ಲ. ಸಿಎಲ್ಪಿ ಆಗಿದ್ದು ಹೇಗೆ? ಬಿ ಫಾರಂ ಕೊಟ್ಟಿರುವುದು ಪಾರ್ಟಿ ಅಲ್ವಾ? ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತದೆ ಎಂದು ಸಚಿವರು ತಿಳಿಸಿದರು.
ನಾನು ಮಾತಾಡಿದ ತಕ್ಷಣ ಬೆಂಕಿ ಉರಿದು ಬಿಡುತ್ತಾ? ಆಡಳಿತದ ಮೇಲೆ ಪರಿಣಾಮ ಬೀರಬಾರದು. ಎಲ್ಲರೂ ಒಗ್ಗಟ್ಟಾಗಿ ಜನರ ಸೇವೆ ಮಾಡಬೇಕು. ಸಿದ್ದರಾಮಯ್ಯ ನಮ್ಮ ಸಿಎಂ. ಡಿಕೆಶಿ ನಮ್ಮಡಿಸಿಎಂ ಮತ್ತು ಅಧ್ಯಕ್ಷರು. ಇವರ ಹೊರತಾಗಿ ಹೈಕಮಾಂಡ್ ತೀರ್ಮಾನಿಸಬೇಕು. ಹೊಸ ಅಧ್ಯಕ್ಷರ ಬಗ್ಗೆಯೂ ಅವರೇ ತೀರ್ಮಾನಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಸೂಚ್ಯವಾಗಿ ಹೇಳಿದರು.
ಒಬ್ಬರಿಂದ ಪಕ್ಷವಿಲ್ಲ:
ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ಕಷ್ಟ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಯಾರೋ ಒಬ್ಬರಿಂದ ಪಕ್ಷವಿಲ್ಲ. ಸಿದ್ದರಾಮಯ್ಯ ಅವರಿಗಿಂತ ಮುಂಚೆಯೂ ಕಾಂಗ್ರೆಸ್ ಇತ್ತಲ್ಲ. ಅವರ ವರ್ಚಸ್ಸು ಎಲ್ಲ ಸಮುದಾಯಗಳ ಮೇಲಿದೆ. ಅವರನ್ನು ಸಿಎಂ ಮಾಡಿದ್ದು ಕಾಂಗ್ರೆಸ್ ಪಕ್ಷ ಅಲ್ವಾ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್, ಸತೀಶ್ ಎಲ್ಲರೂ ಕಾರ್ಯಕರ್ತರಿಂದ ಬೆಳೆದವರು. ಕಾರ್ಯಕರ್ತರಿಂದಲೇ ನಾಯಕರು ಬೆಳೆಯುವುದು ಎಂದು ಸಚಿವರು ತಿಳಿಸಿದರು.
ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಅವರು ಇದ್ದವರು ಮೂರ್ನಾಲ್ಕು ಜನ. ಆಗ ಏನು ಮಾತನಾಡಿದ್ದಾರೋ ಗೊತ್ತಿಲ್ಲ? ಸಿಎಂ, ಡಿಸಿಎಂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದಾರೆ. ವರಿಷ್ಠರ ಅಂಗಳದಲ್ಲೇ ಗೊಂದಲ ಬಗೆಹರಿಯಬೇಕಲ್ವಾ ಎಂದು ಅವರು ಪ್ರಶ್ನಿಸಿದರು.
ಪಕ್ಷದಲ್ಲಿ ಸಾಕಷ್ಟು ಅರ್ಹರು:
ಡಾ.ಜಿ.ಪರಮೇಶ್ವರ್ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ ದೀರ್ಘಕಾಲ ಇದ್ದವರು. ಡಿಸಿಎಂ ಕೂಡ ಆಗಿದ್ದರು. ಪಕ್ಷದಲ್ಲಿ ಅರ್ಹತೆ ಇರುವವರು ಬಹಳ ಇದ್ದಾರೆ. ಬಿಜೆಪಿ ಕೇಳಿ ಆಡಳಿತ ಮಾಡಲು ಆಗುತ್ತಾ? ಅಲ್ಲಿ ಸಮರ್ಥ ವಿಪಕ್ಷ ನಾಯಕರಿದ್ದಾರಾ?. ವಿಜಯೇಂದ್ರ ವಿರುದ್ದ ಅಶೋಕ್ ಅವರನ್ನು ಚೂ ಬಿಟ್ಟಿದ್ದಾರೆ. ಅವರ ಔಟ್ ಸೈಡ್ ಸಪೋರ್ಟ್ ನಮಗೆ ಯಾಕೆ ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.

