ಆರ್​​ಎಸ್​ಎಸ್ ನಿಷೇಧದ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿ ಹೈಕೋರ್ಟ್

News Desk

ಆರ್​​ಎಸ್​ಎಸ್ ನಿಷೇಧದ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿ ಹೈಕೋರ್ಟ್
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರ್​​ಎಸ್​ಎಸ್ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ನಿಷೇಧ ಹೇರಲು ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸರ್ಕಾರದ ಪರವಾಗಿ ಸಲ್ಲಿಕೆಯಾದ ಮೇಲ್ಮನವಿ ಅರ್ಜಿಯ ವಿಚಾರಣೆ ಹೈಕೋರ್ಟ್ ಧಾರವಾಡದ ವಿಭಾಗೀಯ ಪೀಠದಲ್ಲಿ ಮಂಗಳವಾರ ನಡೆಯಿತು.

ಸರ್ಕಾರಿ ಜಾಗಗಳು ಸೇರಿದಂತೆ ನಿರ್ದಿಷ್ಟ ಸ್ಥಳಗಳಲ್ಲಿ 10 ಜನಕ್ಕಿಂತ ಹೆಚ್ಚು ಜನರು ಸೇರಿಕೊಂಡರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಅಧಿಸೂಚನೆ ನಾಗರಿಕರ ಹಕ್ಕಿಗೆ ಧಕ್ಕೆ ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು. ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.

- Advertisement - 

ಸರ್ಕಾರದ ಪರ ವಾದ?
ಖಾಸಗಿ ಸಂಸ್ಥೆಗಳು ಸರ್ಕಾರಕ್ಕೆ ಸಂಬಂಧಿಸಿದ ಆಸ್ತಿಯಲ್ಲಿ ಅನುಮತಿಯಿಲ್ಲದೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಸರ್ಕಾರದ ಸ್ವತ್ತುಗಳಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದಲೇ ನಿರ್ಬಂಧ ವಿಧಿಸಲಾಗಿದೆ. ಹೈಕೋರ್ಟ್ ಕಟ್ಟಡ ಖಾಲಿ ಇದೆ ಎಂದು ಅಲ್ಲಿ ಕಾರ್ಯಕ್ರಮ ಮಾಡಲಾಗುವುದಿಲ್ಲ. ಅದೇ ರೀತಿ ಸಾರ್ವಜನಿಕ ಸ್ಥಳಗಳ ಬಳಕೆಗೂ ಅನುಮತಿ ಅಗತ್ಯ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.

ಪ್ರತಿವಾದಿಗಳ ವಾದ ಏನು?
ಆಟದ ಮೈದಾನದಲ್ಲಿ ಕ್ರಿಕೆಟ್ ಆಡಲೂ ಅನುಮತಿ ಬೇಕೆಂಬಂತೆ ನಿಯಮ ಜಾರಿಗೆ ತರಲಾಗಿದೆ. ಪಾರ್ಕ್, ಮೈದಾನ ಎಲ್ಲವೂ ಸರ್ಕಾರದ ಸ್ವತ್ತೆಂದು ಭಾವಿಸಬಾರದು. ಪೊಲೀಸ್ ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳುವ ಅಧಿಕಾರ ಜಿಲ್ಲಾ ದಂಡಾಧಿಕಾರಿಗೆ ಮಾತ್ರವಿದೆ. ಏಕಸದಸ್ಯ ಪೀಠದಲ್ಲೇ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಬಹುದಿತ್ತು. ಮೇಲ್ಮನವಿಗೆ ಅಷ್ಟೇ ಸರ್ಕಾರ ಬಂದಂತಿದೆ ಎಂದು ಪ್ರತಿವಾದಿ ಪುನಶ್ಚೇತನ ಸೇವಾ ಸಂಸ್ಥೆ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದಿಸಿದರು.

- Advertisement - 

ಸರ್ಕಾರ ಹಾಗೂ ಪುನಶ್ಚೇತನ ಸೇವಾ ಸಂಸ್ಥೆ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿತು.

ನವೆಂಬರ್ 7ರಂದು ಈ ಕುರಿತು ಮುಂದಿನ ವಿಚಾರಣೆ ನಡೆಯಲಿದೆ. ಪರೋಕ್ಷವಾಗಿ ಆರ್​​ಎಸ್​ಎಸ್ ಚಟಿವಟಿಕೆಗಳನ್ನು ಹತ್ತಿಕ್ಕುವುದಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರ್ಕಾರಿ ಜಾಗಗಳಲ್ಲಿ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿ ಪುನಶ್ಚೇತನ ಸೇವಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ, ಸರ್ಕಾರದ ಆದೇಶಕ್ಕೆ ಅಕ್ಟೋಬರ್ 28 ರಂದು ಮಧ್ಯಂತರ ತಡೆಯಾಜ್ಞೆ ನೀಡಿ ತೀರ್ಪು ಪ್ರಕಟಿಸಿದನ್ನು ಸ್ಮರಿಸಬಹುದಾಗಿದೆ.

 

Share This Article
error: Content is protected !!
";