ಆರ್​​ಎಸ್​​ಎಸ್ ಪಥಸಂಚಲನ ಕುರಿತು ಮತ್ತೊಮ್ಮೆ ಶಾಂತಿ ಸಭೆ ನಡೆಸಲು ಹೈಕೋರ್ಟ್ ನಿರ್ದೇಶನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ತಾಪುರದಲ್ಲಿ ನವೆಂಬರ್ 5ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಪಥಸಂಚಲನ ಕುರಿತಂತೆ ಮತ್ತೊಮ್ಮೆ ಶಾಂತಿ ಸಭೆ ನಡೆಸಲು ಹೈಕೋರ್ಟ್ ನಿರ್ದೇಶನ ನೀಡಿದೆ.

ಚಿತ್ತಾಪುರದಲ್ಲಿ ಆರ್​​ಎಸ್​​ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ, ಪಥಸಂಚಲನದ ಸಂಚಾಲಕ ಕಲಬುರಗಿಯ ಅಶೋಕ್ ಪಾಟೀಲ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್ ಅವರಿದ್ದ ನ್ಯಾಯಪೀಠ‌ಸೂಚನೆ ನೀಡಿದೆ.

- Advertisement - 

ಈ ಹಿಂದೆ ಅಕ್ಟೋಬರ್- 24ರಂದು ನಡೆದಿದ್ದ ಶಾಂತಿ ಸಭೆಯಲ್ಲಿ ಅರ್ಜಿದಾರರು ಭಾಗಿಯಾಗಿಲ್ಲ‌‌ಎಂದು ತಿಳಿಸಿದ್ದಾರೆ. ಅರ್ಜಿದಾರರು ಬರಲು ಸಾಧ್ಯವಾಗದಿದ್ದರೆ, ಅವರ ಪ್ರತಿನಿಧಿಗಳನ್ನು ಕಳುಹಿಸಬೇಕಾಗಿತ್ತು. ಆ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಪೀಠ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿ, ಈ ಸೂಚನೆ ನೀಡಿತು.

ಅಲ್ಲದೆ, ನವೆಂಬರ್ 5ರ ಸಂಜೆ 5 ಗಂಟೆಗೆ ಹೈಕೋರ್ಟ್​​ನ ಬೆಂಗಳೂರು ಪೀಠದಲ್ಲಿನ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ಸಭೆ ನಡೆಸಬೇಕು. ಸಭೆಗೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತವರ ವಕೀಲರು ಭಾಗವಹಿಸಬೇಕು ಎಂದು ಸೂಚನೆ ನೀಡಿ, ವಿಚಾರಣೆಯನ್ನು ನವೆಂಬರ್ 7ಕ್ಕೆ ಹೈಕೋರ್ಟ್ ಪೀಠವು ಮುಂದೂಡಿತು.

- Advertisement - 

ಅಕ್ಟೋಬರ್ 24ರಂದು ನಡೆದ ಸಭೆಗೆ ಅರ್ಜಿದಾರರ ಪರ ವಕೀಲರು, ಅರ್ಜಿಗೆ ಸಂಬಂಧಿಸಿದ ಸಂಘಟನೆ ಸದಸ್ಯರು ಭಾಗಿಯಾಗಿದ್ದರು. ಈ ಸೀಮಿತ ಅವಧಿಯಲ್ಲಿಯೇ ಪಥಸಂಚಲನ ನಡೆಸಲು ಅನುಮತಿ ಬೇಕಾಗಿದೆ. ಇತರೆ ಸಂಘಟನೆಗಳು ರ‍್ಯಾಲಿ ನಡೆಸುವುದಕ್ಕೆ ನಮಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಪೀಠಕ್ಕೆ ಮನವರಿಕೆ ಮಾಡಿದರು.

ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸರ್ಕಾರದ ಪರ ಹಾಜರಿದ್ದು, ಹೈಕೋರ್ಟ್ ಆದೇಶದಂತೆ ಸಭೆ ಆಯೋಜನೆ ಮಾಡಲಾಗಿತ್ತು.‌ಆದರೆ, ಸಭೆಗೆ ಅರ್ಜಿದಾರರು ಗೈರಾಗಿದ್ದರು ಎಂದು ಹೇಳಿದರು.

ಅರ್ಜಿದಾರರ ಪರ ವಕೀಲರು ಇದಕ್ಕೆ ಉತ್ತರಿಸಿ, ಅರ್ಜಿದಾರರ ಮನೆಯಲ್ಲಿ ಸಾವು ಉಂಟಾಗಿತ್ತು.‌ಆದ ಕಾರಣ ಅವರು ಸಭೆಗೆ ಹಾಜರಾಗಿರಲಿಲ್ಲ. ಇತರೆ ಪ್ರತಿನಿಧಿಗಳು ಹಾಜರಿದ್ದರು ಎಂದು ತಿಳಿಸಿದರು. ಇದಕ್ಕೆ ಪೀಠ, ”ಸಭೆಗೆ ಹಾಜರಾಗಿದ್ದ ಇತರೆ ಅರ್ಜಿದಾರರು ಅರ್ಜಿ ಸಲ್ಲಿಸಲಿಲ್ಲ ಎಂದು ತಿಳಿಸಿತು.

ವಾದ ಮುಂದುವರೆಸಿದ ಅಡ್ವೋಕೇಟ್ ಜನರಲ್, ಸಭೆಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆದರೂ ಸಭೆಗೆ ಹಾಜರಾಗದೆ ಸಹಕರಿಸುತ್ತಿಲ್ಲ. ಅಗತ್ಯವಿದ್ದಲ್ಲಿ ಮತ್ತೊಂದು ದಿನ ಸಭೆ ಆಯೋಜಿಸುವುದಾಗಿ ಪೀಠಕ್ಕೆ ಹೇಳಿದರು.

ರಾಜ್ಯ ಸರ್ಕಾರ ಈ ಪ್ರಕರಣಕ್ಕೆ ಅಂತಿಮ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅರ್ಜಿದಾರರು, ಸರ್ಕಾರಕ್ಕೆ ಸಹಕರಿಸದೆ, ಇದೀಗ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಲು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅವರ ನಡೆ ಸಂಪೂರ್ಣ ರಾಜಕೀಯಪ್ರೇರಿತವಾಗಿದೆ ಎಂದು ಪೀಠಕ್ಕೆ ವಿವರಿಸಿದರು.

ಈ ವೇಳೆ ಪೀಠವು ಉದ್ದೇಶದಿಂದಲೇ ಸಭೆ ನಡೆಸಿ ಹಾಜರಾಗಲು ಸೂಚನೆ ನೀಡಲಾಗಿತ್ತು ಎಂದು ತಿಳಿಸಿತು. ಅರ್ಜಿ ಸಲ್ಲಿಸಿರುವವರು ಸಭೆಗೆ ಹಾಜರಾಗಬೇಕಿತ್ತು. ಅವರ ಬದಲಾಗಿ ಇತರರು ಹಾಜರಾಗಿ ಹೇಳಿಕೆ ನೀಡುವುದು ಸರಿಯಾಗುವುದಿಲ್ಲ. ಗೊಂದಲ ಪರಿಹರಿಸುವುದು ನ್ಯಾಯಾಲಯದ ಉದ್ದೇಶವಾಗಿದೆ ಎಂದು ತಿಳಿಸಿತು.

ಅರ್ಜಿದಾರರ ಪರ ವಕೀಲರು ಇದೀಗ ಮತ್ತೆ ಹಾಜರಾಗಲು ಸಿದ್ಧರಿದ್ದಾರೆ ಎಂದು ಹೈಕೋರ್ಟ್ ಪೀಠಕ್ಕೆ ತಿಳಿಸಿದರು. ವಾದ ಆಲಿಸಿದ ಪೀಠವು, ಮತ್ತೆ ಶಾಂತಿ ಸಭೆ ನಡೆಸಲು ನಿರ್ದೇಶನ ನೀಡಿ ಆದೇಶಿಸಿತು.

Share This Article
error: Content is protected !!
";