ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ದಸರಾ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಬಾನು ಮುಷ್ತಾಕ್ ಅವರಿಗೆ ದಸರಾ ಉತ್ಸವ ಉದ್ಘಾಟನೆಗೆ ನೀಡಿರುವ ಆಹ್ವಾನ ಹಿಂಪಡೆಯಲು ನಿರ್ದೇಶನ ನೀಡಬೇಕು ಎಂದು ಕೋರಿ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಹಕ್ಕು ಉಲ್ಲಂಘನೆಯಲ್ಲ:
ಸರ್ಕಾರ ಆಯೋಜಿಸುವ ಕಾರ್ಯಕ್ರಮಕ್ಕೆ ವಿಭಿನ್ನ ಧರ್ಮದ ವ್ಯಕ್ತಿಯನ್ನು ಆಹ್ವಾನಿಸಿರುವುದು ಅರ್ಜಿದಾರರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಹಕ್ಕು ಉಲ್ಲಂಘನೆ ಆಗುವುದಿಲ್ಲ. ಅಲ್ಲದೆ, ಕಾನೂನಾತ್ಮಕ ಹಾಗೂ ಸಂವಿಧಾನದಲ್ಲಿ ಲಭ್ಯವಿರುವ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬುದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟು ಮೂರು ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2023ರಲ್ಲಿ ಬಾನು ಮುಷ್ತಾಕ್ ಅವರು ಕನ್ನಡ ಭಾಷೆಯ ವಿರುದ್ಧ ನೀಡಿರುವ ಹೇಳಿಕೆಗಳನ್ನು ಪ್ರಸ್ತಾಪಿಸಿದರು. ಇದಕ್ಕೆ ಪೀಠ, ಆ ಹೇಳಿಕೆ ಒಬ್ಬ ವ್ಯಕ್ತಿಯ ಅಭಿಪ್ರಾಯವಾಗಿದೆ. ದೇಶದಲ್ಲಿನ ಜನತೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಾರದು ಎಂಬುದನ್ನು ಹೇಳಲಾಗುವುದೇ? ಎಂದು ನ್ಯಾಯಪೀಠವು ಪ್ರಶ್ನಿಸಿತು.
ಸರ್ಕಾರದ ಕ್ರಮದಿಂದ ಸಾಂವಿಧಾನಿಕವಾಗಿ ನಿಮ್ಮ (ಅರ್ಜಿದಾರರ) ಹಕ್ಕು ಉಲ್ಲಂಘನೆಯಾಗಿವಿಯೇ ಎಂಬುದಕ್ಕೆ ಸಂಬಂಧಿಸಿದಂತೆ ತಿಳಿಸಿ ಎಂದು ಸೂಚನೆ ನೀಡಿತು.
ವಾದ ಮುಂದುವರೆಸಿದ ವಕೀರು, ದಸರಾ ಹಬ್ಬ ಪ್ರಮುಖವಾಗಿ ಹಿಂದೂಗಳು ಆಚರಣೆ ಮಾಡುವುದಾಗಿದೆ ಎಂದು ತಿಳಿಸಿದರು. ಇದಕ್ಕೆ ಪೀಠ, ಅದು ನಿಮ್ಮ ಅಭಿಪ್ರಾಯ. ಅದನ್ನು ಹೊರತುಪಡಿಸಿ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಕುರಿತು ತಿಳಿಸಬೇಕು ಎಂದು ಸೂಚಿಸಿತು. ಅಲ್ಲದೆ, ಸರ್ಕಾರದ ಕ್ರಮದಿಂದ ಅರ್ಜಿದಾರರ ಯಾವುದೇ ಹಕ್ಕು ಉಲ್ಲಂಘನೆಯಾಗಿಲ್ಲ. ಹೀಗಿರುವಾಗ ಧಾರ್ಮಿಕ ಸ್ವಾತಂತ್ರ್ಯದ ಕುರಿತ ಸಂವಿಧಾನ ಪರಿಚ್ಛೇದ 26 ಉಲ್ಲಂಘನೆಯಾಗಲಿದೆಯೇ ಎಂದು ಪ್ರಶ್ನಿಸಿತು.
ರದ್ದು ಪಡಿಸಲಾಗದು:
ದಸರಾ ಉದ್ಘಾಟನಾ ಸಮಾರಂಭಕ್ಕೆ ಹಿಂದೂ ಧರ್ಮದ ವ್ಯಕ್ತಿಯನ್ನು ಮಾತ್ರ ಆಹ್ವಾನಿಸಬೇಕೆಂದು ವಕೀಲರು ಹೇಳಿದರು. ಇತರೆ ಧರ್ಮದ ವ್ಯಕ್ತಿಯನ್ನು ಯಾವ ಆಧಾರಲ್ಲಿ ಆಹ್ವಾನಿಸಲಾಗಿದೆ ಎಂಬುದು ಗೊತ್ತಿಲ್ಲ. ಇದೊಂದು ಸಾರ್ವಜನಿಕ ಅಭಿಪ್ರಾಯವಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪೀಠ, ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು ಜನಪ್ರತಿನಿಧಿಗಳ ನಿರ್ಧಾರವಾಗಿದ್ದು, ಅದನ್ನು ರದ್ದುಪಡಿಸಲಾಗದು ಎಂದು ಪೀಠ ತಿಳಿಸಿತು.
ವಾದ ಮುಂದುವರೆಸಿದ ವಕೀಲರು, ಹಿಂದೂ ಸಂಸ್ಕೃತಿಯಲ್ಲಿ ಮೂರ್ತಿ ಪೂಜೆಗೆ ಪ್ರಾಮುಖ್ಯತೆಯಿದೆ. ಉದ್ಘಾಟನೆಗೆ ಆಹ್ವಾನ ಪಡೆದಿರುವವರಿಗೆ ಸಿಂಧೂರ ಮತ್ತು ಅರಿಶಿನದಲ್ಲಿ ನಂಬಿಕೆ ಇಲ್ಲ ಎಂದು ತಿಳಿಸಿದರು. ಈ ವೇಳೆ ಪೀಠ, ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ ಎಂದು ತಿಳಿಸಿತು.
ಮತ್ತೊಬ್ಬ ಅರ್ಜಿದಾರರ ಪರ ವಕೀಲರು, ಹಿಂದೂ ದೇವರ ಪೂಜೆಯನ್ನು ಆಗಮ ಶಾಸ್ತ್ರದಿಂದ ಪ್ರತ್ಯೇಕಿಸಲಾಗದು. ಹಿಂದೂಯೇತರ ವ್ಯಕ್ತಿ ದಸರಾ ಉದ್ಘಾಟಿಸಬಹುದೇ ಎಂಬ ಪ್ರಶ್ನೆ ಇಲ್ಲಿದೆ. ಹಿಂದೂ ದೇವರ ಮೇಲೆ ನಂಬಿಕೆ ಇದೆ. ಮತ್ತು ಈ ಹಿಂದೆ ನೀಡಿರುವ ಹೇಳಿಕೆಗಳನ್ನು ಹಿಂಪಡೆಯುವುದಾಗಿ ಬಾನು ಮುಷ್ತಾಕ್‌ಅವರು ಸ್ಪಷ್ಟಪಡಿಸಿದರೆ ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದರು.
ಇದಕ್ಕೆ ಪೀಠ, ಹಿಂದೂವಲ್ಲದವರು ಬಂದು ನಾನು ಹಿಂದೂ ಧರ್ಮದ ಪದ್ಧತಿಗಳನ್ನು ಅನುಸರಿಸಿದರೆ ಅದನ್ನು ನಿಷೇಧ ಹೇರಲಾಗುವುದೇ ಎಂದು ಪ್ರಶ್ನಿಸಿತು.
ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸರ್ಕಾರದ ಪರ ವಾದ ಮಂಡಿಸಿ, ಅರ್ಜಿದಾರ ಪ್ರತಾಪ್ ಸಿಂಹ ಈ ಹಿಂದೆ ಕವಿ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸಿದ್ದ ಸಂದರ್ಭದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಈ ಅಂಶವನ್ನು ಅರ್ಜಿಯಲ್ಲಿ ಮರೆ ಮಾಚಿದ್ದಾರೆ. ಇದೀಗ ಮುಸ್ಲಿಂ ಸಮುದಾಯದ ಲೇಖಕಿಯನ್ನು ಆಹ್ವಾನಿಸಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದಿಂದ ನಡೆಸುವ ದಸರಾ ನಾಡ ಹಬ್ಬವಾಗಿದ್ದು, ಎಲ್ಲ ಧರ್ಮೀಯರು ಭಾಗಿಯಾಗುತ್ತಾರೆ. ಬಾನು ಮುಷ್ತಾಕ್ ಅವರನ್ನು ಹಿಂದೂ ವಿರೋಧಿ ಎಂದು ಹೇಳುವುದಕ್ಕೆ ಅವಕಾಶವಿಲ್ಲ. ಈ ರೀತಿಯ ಹೇಳಿಕೆಗಳು ನೋವುಂಟು ಮಾಡಲಿದ್ದು ಅವುಗಳನ್ನು ಮೊಳಕೆಯಲ್ಲಿ ಚಿವುಟಿ ಹಾಕಬೇಕು. ಅರ್ಜಿದಾರರಿಗೆ ದೊಡ್ಡ ಮಟ್ಟದ ದಂಡ ವಿಧಿಸಬೇಕು ಎಂದು ಕೋರಿದರು.
ಪ್ರತಾಪ್ ಸಿಂಹ ಪರ ವಕೀಲರು ಈ ವೇಳೆ, ಕವಿ ನಿಸಾರ್‌ಅಹ್ಮದ್‌ಅವರು ಮುಸ್ಲಿಂ ಆಗಿದ್ದರೂ ಕನ್ನಡ ಮಾತೆಯ ಬಗ್ಗೆ ಪದ್ಯ ಬರೆದಿದ್ದಾರೆ. ನಿಸಾರ್‌ಅವರು ಕನ್ನಡ ವಿರೋಧಿ ಹೇಳಿಕೆ ನೀಡಿರಲಿಲ್ಲ ಎಂದರು.
ಈ ವೇಳೆ ಪೀಠ, ವಿಜಯದಶಮಿ ಎಂದರೇನು? ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ ಎಂಬುದಾಗಿದೆ. ಈ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಎಂದು ತಿಳಿಸಿತು.

