ಮುಡಾ ಹಗರಣ ಸಿಬಿಐಗೆ ವಹಿಸಲು ನೋಟಿಸ್ ಜಾರಿ ಮಾಡಿದ ಹೈಕೋರ್ಟ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿಗೆ ಅಕ್ರಮವಾಗಿ ನಿವೇಶನ ಪಡೆದ ಆರೋಪದ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ಸಂಬಂಧ ಹೈಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರಿಗೆ ನೋಟಿಸ್‌ಜಾರಿ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಿಮಯಿ ಕೃಷ್ಣ ಅವರು ಮುಡಾ ಹಗರಣವನ್ನು ಸಿಬಿಐ ಇಲ್ಲವೇ, ಇತರ ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಕೇಂದ್ರ ಸರ್ಕಾರ, ಸಿಬಿಐ, ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಜಮೀನಿನ ಮೂಲ ಮಾಲೀಕ ದೇವರಾಜು ಅವರಿಗೆ ಹೈಕೋರ್ಟ್ ನೋಟಿಸ್‌ಜಾರಿ ಮಾಡಿ, ಏಪ್ರಿಲ್- 28ಕ್ಕೆ ವಿಚಾರಣೆ ಮುಂದೂಡಿ ಆದೇಶ ಮಾಡಿತು.

ಏನಿದು ಪ್ರಕರಣ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂಬರ್
4643 ಎಕರೆ 16 ಗುಂಟೆ ಜಮೀನಿನ ಬದಲಿಗೆ ಸುಮಾರು 56 ಕೋಟಿ ಮೌಲ್ಯದ 14 ನಿವೇಶನಗಳನ್ನು ಕಾನೂನು ಬಾಹಿರವಾಗಿ ನೀಡಲಾಗಿದೆ.

ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ, ಈ ಸಂಬಂಧ ತನಿಖೆ/ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ಕೋರಿ ಸ್ನೇಹಮಯಿ ಕೃಷ್ಣ ಸೇರಿದಂತೆ ಮೂವರು ಸಾಮಾಜಿಕ ಕಾರ್ಯಕರ್ತರು 2024ರ ಜೂನ್-ಜುಲೈನಲ್ಲಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ಪರಿಶೀಲನೆ ನಡೆಸಿ, ಪ್ರಕರಣದ ತನಿಖೆ/ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿ ರಾಜ್ಯಪಾಲರು 2024ರ ಆಗಸ್ಟ್-​ 17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಆಗಸ್ಟ್​​-19ರಂದು ಸಲ್ಲಿಸಿದ್ದ ತಕರಾರು ಅರ್ಜಿ ತಿರಸ್ಕರಿಸಿದ ಹೈಕೋರ್ಟ್, ಸೆಪ್ಟೆಂಬರ್​​-24ರಂದು ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು.

ಹೈಕೋರ್ಟ್ ನೀಡಿದ ಆದೇಶದ ಬೆನ್ನಲ್ಲೇ ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಎಫ್ಐಆರ್ ದಾಖಲಾದ ದಿನವೇ ಅಂದರೆ ಸೆಪ್ಟೆಂಬರ್-27ರಂದು ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ಅದನ್ನು ವಜಾಗೊಳಿಸಿ ಆದೇಶಿಸಿತ್ತು. ಈ ಕ್ರಮ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದನ್ನ ಸ್ಮರಿಸಬಹುದಾಗಿದೆ.

 

Share This Article
error: Content is protected !!
";